ADVERTISEMENT

ಸಿಂಧನೂರು ಜಿಲ್ಲಾ ಹೋರಾಟ ಸಮಿತಿ ಸಭೆ: ಜನಪ್ರತಿನಿಧಿಗಳ ಒಗ್ಗೂಡಿಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 6:44 IST
Last Updated 9 ಜನವರಿ 2026, 6:44 IST
ಸಿಂಧನೂರಿನ ಟೌನ್‍ಹಾಲ್‍ನಲ್ಲಿ ಗುರುವಾರ ಸಿಂಧನೂರು ಜಿಲ್ಲಾ ಹೋರಾಟ ಸಮಿತಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಸಮಿತಿಯ ಸಂಚಾಲಕ ಬಿ.ಎನ್.ಪಾಟೀಲ ಮಾತನಾಡಿದರು
ಸಿಂಧನೂರಿನ ಟೌನ್‍ಹಾಲ್‍ನಲ್ಲಿ ಗುರುವಾರ ಸಿಂಧನೂರು ಜಿಲ್ಲಾ ಹೋರಾಟ ಸಮಿತಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಸಮಿತಿಯ ಸಂಚಾಲಕ ಬಿ.ಎನ್.ಪಾಟೀಲ ಮಾತನಾಡಿದರು   

ಸಿಂಧನೂರು: ‘ಶಾಸಕರು, ಮಾಜಿ ಶಾಸಕರು, ಮಾಜಿ ಸಂಸದರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ವಿವಿಧ ಜನಪ್ರತಿನಿಧಿಗಳನ್ನು ಒಗ್ಗೂಡಿಸಿ ಸಭೆ ಕರೆಯಬೇಕು’ ಎಂದು ಒಕ್ಕೊರಲಿನ ನಿರ್ಧಾರ ಮಂಡಿಸಲಾಯಿತು.

ಸಿಂಧನೂರು ಜಿಲ್ಲಾ ಹೋರಾಟ ಸಮಿತಿ ಗುರುವಾರ ಟೌನ್‍ಹಾಲ್‍ನಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

‘ಹೋರಾಟ ಸಮಿತಿಯ ಸಂಚಾಲಕ ಬಿ.ಎನ್.ಪಾಟೀಲ ಮಾತನಾಡಿ, ‘ಸಿಂಧನೂರು ಜಿಲ್ಲೆಯಾಗಲು ಉತ್ತಮ ವಾತಾವರಣ ಸೃಷ್ಟಿಯಾಗಿದೆ. ಭೌಗೋಳಿಕ, ಶೈಕ್ಷಣಿಕ, ಆರ್ಥಿಕವಾಗಿ ಅಭಿವೃದ್ಧಿಯಲ್ಲಿದೆ. ಜನಸಂಖ್ಯೆ, ಕೃಷಿ, ಕೈಗಾರಿಕೆಗಳು, ವಿವಿಧ ಜಿಲ್ಲಾ ಮಟ್ಟದ ಕಚೇರಿಗಳು ಈಗಾಗಲೇ ಸಿಂಧನೂರಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಪಕ್ಷಾತೀತವಾಗಿ ರಾಜಕೀಯ ಮುಖಂಡರು, ವಿವಿಧ  ಸಂಘಟನೆಗಳು ಒಗ್ಗಟ್ಟಾಗಿ ಸಿಂಧನೂರು ಜಿಲ್ಲಾ ಕೇಂದ್ರವನ್ನಾಗಿಸಲು ಸತತ ಪ್ರಯತ್ನ ಮಾಡಬೇಕು’ ಎಂದರು.

ADVERTISEMENT

ಎಪಿಎಂಸಿ ಮಾಜಿ ಅಧ್ಯಕ್ಷ ರಾಜಶೇಖರ ಪಾಟೀಲ ಮಾತನಾಡಿ, ‘ಸಿಂಧನೂರು ಜಿಲ್ಲೆಯಾಗಲು ಬೇರೆ ತಾಲ್ಲೂಕುಗಳ ಜತೆ ಈ ತಾಲ್ಲೂಕಿನಲ್ಲಿರುವ ಯಾವ ದೊಡ್ಡ ಗ್ರಾಮಗಳನ್ನು ತಾಲ್ಲೂಕು ಮಾಡಬಹುದು ಎಂಬುದರ ಬಗ್ಗೆ ಮೊದಲು ಚರ್ಚಿಸಬೇಕು. ತುರ್ವಿಹಾಳ ಪಟ್ಟಣ ಪಂಚಾಯತಿ ದೊಡ್ಡದಿದ್ದು, ಜನಸಂಖ್ಯೆ ಹೆಚ್ಚಿದೆ. ಶಾಲಾ-ಕಾಲೇಜುಗಳು, ನಾಡಕಚೇರಿ ಇವೆ. ಆರ್ಥಿಕ ಮತ್ತು ಭೌಗೋಳಿಕವಾಗಿ ಮುಂದುವರಿದ ಪಟ್ಟಣವಾಗಿದೆ. ಅದರ ಜತೆ ಮಸ್ಕಿ, ಲಿಂಗಸುಗೂರು, ಕಾರಟಗಿ, ಸಿರಗುಪ್ಪ, ತಾವರಗೇರಾಗಳ ಪ್ರಮುಖ ಮುಖಂಡರು, ಸಂಘಟನೆಗಳೊಂದಿಗೆ ಚರ್ಚಿಸಿ ಅವರ ಮನವೊಲಿಸುವ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ ಮಾತನಾಡಿ, ‘ಹಿರಿಯರ ಮುಖಂಡರ ಸಲಹೆಗಳೊಂದಿಗೆ ಸ್ಪೂರ್ತಿಯಿಂದ ಒಗ್ಗಟ್ಟಾಗಿ ಜಿಲ್ಲಾ ಕೇಂದ್ರವಾಗಿಸುವ ತನಕ ಹಂತ-ಹಂತಗಳಲ್ಲಿ ಸಭೆ, ಹೋರಾಟಗಳನ್ನು ಹಮ್ಮಿಕೊಳ್ಳೊಣ. ನಮ್ಮ ರಾಜಕೀಯ ಹಿರಿಯ ನಾಯಕರಾದ ಕೆ.ವಿರುಪಾಕ್ಷಪ್ಪ, ಹಂಪನಗೌಡ ಬಾದರ್ಲಿ, ವೆಂಕಟರಾವ್ ನಾಡಗೌಡ, ಕೆ.ಕರಿಯಪ್ಪ  ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತಬೇಕು’ ಎಂದು ಹೇಳಿದರು.

ಕುರುಬ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಭೀಮಣ್ಣ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷೆ ಸರಸ್ವತಿ ಪಾಟೀಲ್, ಜೆಡಿಎಸ್ ಮುಖಂಡ ಜಿ.ಎಸ್.ಸತ್ಯನಾರಾಯಣ, ರೈತ ಮುಖಂಡ ರವಿ ಮಲ್ಲದಗುಡ್ಡ, ವೈ.ನರೇಂದ್ರನಾಥ ಮಾತನಾಡಿದರು.

ಜಮಾಅತೆ ಇಸ್ಲಾಂ ಹಿಂದ್ ತಾಲ್ಲೂಕು ಘಟಕದ ಅಧ್ಯಕ್ಷ ಹುಸೇನ್ ಸಾಬ್, ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶರಣಪ್ಪ ಕೆ ಗೋನಾಳ, ಹಿರಿಯ ಪತ್ರಕರ್ತ ಡಿ.ಎಚ್.ಕಂಬಳಿ, ರೈತ ಮುಖಂಡ ಅಮೀನ್ ಪಾಷಾ ದಿದ್ದಿಗಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಫ್.ಮಸ್ಕಿ, ಸ್ತ್ರೀಶಕ್ತಿ ಒಕ್ಕೂಟದ ತಾಲ್ಲೂಕು ಘಟಕದ ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಸ, ಮುಖಂಡರಾದ ಆರ್. ತಿಮ್ಮಯ್ಯ ನಾಯಕ್, ಕರೇಗೌಡ ಕುರುಕುಂದಿ, ಚಂದ್ರಶೇಖರ ಗೊರೆಬಾಳ, ದೇವಿರಮ್ಮ, ಮಂಜುಳಾ ಪಾಟೀಲ, ಅಶೋಕ ಉಮಲೂಟಿ, ಶಾಂತನಗೌಡ ಜಾಗೀರದಾರ್, ಮೌನೇಶ ದೊರೆ ಭಾಗವಹಿಸಿದ್ದರು. ದೇವೇಂದ್ರಗೌಡ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.