ADVERTISEMENT

Iran-Israel War: ದುಬೈನಲ್ಲಿ ಸಿಲುಕಿದ ಸಿಂಧನೂರಿನ ಡಾ.ಕೆ.ಶಿವರಾಜ ದಂಪತಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 8:05 IST
Last Updated 1 ಮಾರ್ಚ್ 2026, 8:05 IST
   

ಸಿಂಧನೂರು: ಇರಾನ್- ಇಸ್ರೇಲ್ ನಡುವೆ ಯುದ್ಧ ಹಿನ್ನೆಲೆ ವಿಮಾನ ಸೇವೆಗಳು ರದ್ದಾದ ಕಾರಣ ದುಬೈ ಪ್ರವಾಸಕ್ಕೆ ತೆರಳಿದ ಸಿಂಧನೂರಿನ ಸಹನಾ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಕೆ.ಶಿವರಾಜ ಮತ್ತು ಅವರ ಪತ್ನಿ ಜ್ಯೋತಿ ಸೇರಿ ಕರ್ನಾಟಕ ರಾಜ್ಯದ 70 ಜನ ದುಬೈನಲ್ಲಿ ಸಿಲುಕಿಕೊಂಡು ಆತಂಕಕ್ಕೆ ಸಿಲುಕಿದ್ದಾರೆ.

ವಿಜಯರತ್ನ ಇಂಟರ್ ನ್ಯಾಷನಲ್ ಅವಾರ್ಡ್ ಗೆ ಭಾಜನರಾದ ಹಿನ್ನಲೆಯಲ್ಲಿ ಅದನ್ನು ಸ್ವೀಕರಿಸುವುದಕ್ಕಾಗಿ ಡಾ. ಕೆ. ಶಿವರಾಜ ಅವರು ತಮ್ಮ ಪತ್ನಿಯೊಂದಿಗೆ ದುಬೈ ಪ್ರವಾಸಕ್ಕೆಂದು ಫೆ.24 ರಂದು ಬಳ್ಳಾರಿಯಿಂದ ತೆರಳಿದ್ದರು. ಫೆ.28ಕ್ಕೆ ವಾಪಸ್ ಆಗಬೇಕಿತ್ತು.

ಆದರೆ ಇದರ ನಡುವೆ ಯುದ್ಧದ ಕಾರ್ಮೋಡ ಸೃಷ್ಟಿಯಾದ ಹಿನ್ನೆಲೆ ವಿಮಾನ ಸೇವೆಗಳು ರದ್ದಾದ ಕಾರಣ ಭಾರತಕ್ಕೆ ಬರಲು ಆಗದೆ ದುಬೈನಲ್ಲಿಯೇ ಸಿಲುಕಿಕೊಂಡಿದ್ದಾರೆ. ಡಾ.ಕೆ. ಶಿವರಾಜ ಸೇರಿ ರಾಜ್ಯದ 70 ಜನರು ಸದ್ಯ ದುಬೈನ ಖಾಸಗಿ ಹೋಟೆಲ್ ಒಂದರಲ್ಲಿ ಸುರಕ್ಷಿತವಾಗಿದ್ದು, ಶೀಘ್ರ ಭಾರತಕ್ಕೆ ಕರೆ ತರುವಂತೆ ಮನವಿ ಮಾಡಿದ್ದಾರೆ.

ADVERTISEMENT

ಸಿಂಧನೂರಿನ ಸಹನಾ ಆಸ್ಪತ್ರೆಯ ಮಕ್ಕಳ ವೈದ್ಯ ಡಾ. ಕೆ ಶಿವರಾಜ್ ಅವರು ಅದೇ ಹೋಟೆಲ್ ನಲ್ಲಿ ಇರುವುದರಿಂದ ಸಿಂಧನೂರಿನ ಅವರ ಕುಟುಂಬದವರು ಮತ್ತು ಅಭಿಮಾನಿಗಳು ಆತಂಕ ಪಡುವಂತಾಗಿದೆ.

ದೂರವಾಣಿಯಲ್ಲಿ ಪ್ರಜಾವಾಣಿಯೊಂದಿಗೆ ಮಾತನಾಡಿದ ಡಾ. ಕೆ. ಶಿವರಾಜ ಅವರು, ಸಹಸ್ರಾರು ಜನರು ಏರ್ಪೋರ್ಟ್ ನಲ್ಲಿ ಉಳಿದಿದ್ದಾರೆ. ನಾವು ಹೋಟೆಲ್ ನಲ್ಲಿ ಸುರಕ್ಷತೆಯಿಂದ ಇದ್ದೇವೆ. ಇಲ್ಲಿ ಕಿಟಕಿ ಬಾಗಿಲು ಮುಚ್ಚಿಕೊಳ್ಳಬೇಕು, ಹೊರಗೆ ತಿರುಗಾಡಬಾರದು ಎಂದು ಸರ್ಕಾರ ಮುನ್ನೆಚ್ಚರಿಕೆ ನೀಡಿದೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.