ಸಿಂಧನೂರು: ಸಿಂಧನೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಬಡಾವಣೆ ವಿನ್ಯಾಸಕ್ಕೆ ಅನುಮೋದನೆ ನೀಡಲು ವಿಳಂಬ ಮಾಡಿದ್ದಕ್ಕೆ ಬೇಸತ್ತು ಸುಡಾ ಕಚೇರಿಯ ಮುಂದೆಯೇ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದು, ಸಿಬ್ಬಂದಿ ಮತ್ತು ಸಾರ್ವಜನಿಕರು ತಡೆದಿದ್ದಾರೆ.
ಶಂಕರ ಗುಂಡಪ್ಪ ಆತ್ಮಹತ್ಯೆಗೆ ಯತ್ನಿಸಿದವರು. ಬಳಿಕ ಮಾತನಾಡಿದ ಅವರು, ‘2017ರಲ್ಲಿ ಸರ್ವೆ ನಂ.965 ಹಿಸ್ಸಾ 17 ಮತ್ತು 18ರಲ್ಲಿ ತಾತ್ಕಾಲಿಕ ನಕ್ಷೆಗೆ ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಲಾಗಿದೆ. ಅಂದಿನಿಂದ ಈವರೆಗೆ ನೆಪ ಹೇಳುತ್ತಿದ್ದು, ತಾತ್ಕಾಲಿಕ ನಕ್ಷೆ ನೀಡುತ್ತಿಲ್ಲ. ತಾರತಮ್ಯ ಮಾಡಿದ್ದಕ್ಕೆ ಮನನೊಂದು ಸುಡಾ ಕಚೇರಿಯ ಮುಂದೆ ಡೀಸೇಲ್ ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದೇನೆ’ ಎಂದು ತಿಳಿಸಿದರು.
‘ನಮ್ಮ ತಾಯಿ ರತ್ನಮ್ಮ ಗುಂಡಪ್ಪ ಹೆಸರಿನಲ್ಲಿ 20 ಗುಂಟೆ ಜಮೀನಿದ್ದು, ಅದನ್ನು ಬಡಾವಣೆ ಮಾಡುವ ಉದ್ದೇಶದಿಂದ 2019ರಲ್ಲಿ ತಾತ್ಕಾಲಿಕ ನಕ್ಷೆಗೆ ₹ 43 ಸಾವಿರ ಶುಲ್ಕ ಪಾವತಿಸಿದ್ದೇನೆ. ಆದರೆ ತಕರಾರು ಬಂದ್ದಿದ್ದರಿಂದ ನಕ್ಷೆ ಕೊಡದೆ ಹಿಸ್ಸಾ ನಂಬರ್ ಬದಲಿಸಬೇಕು ಎಂದು ತಿಳಿಸಿದರು. ಅದರಂತೆ ಅನುಸರಿಸಿ ಪುನಃ ಶುಲ್ಕ ಪಾವತಿಸಿ, ತಾತ್ಕಾಲಿಕ ನಕ್ಷೆಗೆ ವಿನಂತಿಸಿದ್ದೆ. ಆದರೆ 2024 ರಲ್ಲಿ ಬಿನ್ ಶೇತಕಿ ಮಾಡಿದ ಅಮರೇಶ ವಜ್ರಪ್ಪ ಮತ್ತು ನಾಗರಾಜ ವಜ್ರಪ್ಪ ಅವರಿಗೆ ತಾತ್ಕಾಲಿಕ ನಕ್ಷೆ ನೀಡಲಾಗಿದೆ. ಇದರಿಂದ ಹಿಂದಿನ ಎಲ್ಲ ಅಧಿಕಾರಿಗಳು ಸೇರಿದಂತೆ ಪ್ರಸ್ತುತ ಯೋಜನಾ ಸದಸ್ಯ ಪರಶುರಾಮ ತಮಗೆ ಅನ್ಯಾಯ ಮಾಡಿದ್ದಾರೆ. ಈ ರೀತಿ ಆತ್ಮಹತ್ಯೆಗೆ ಯತ್ನಿಸಿದರೆ ಬೇರೆಯವರಿಗಾದರೂ ಒಳ್ಳೆಯದಾಗುತ್ತದೆ ಎಂದು ಈ ಕೃತ್ಯಕ್ಕೆ ಮುಂದಾಗಿದ್ದೇನೆ ಎಂದು ತಿಳಿಸಿದರು.
ಅಧ್ಯಕ್ಷರ ಸ್ಪಷ್ಟೀಕರಣ: ‘7–8 ವರ್ಷಗಳಿಂದ ಕಚೇರಿ ಮತ್ತು ರತ್ನಮ್ಮರ ನಡುವೆ 21 ಪತ್ರ ವ್ಯವಹಾರ ನಡೆದಿವೆ. ನಗರಾಭಿವೃದ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದ ನಂತರ ತಮಗೆ ಕಡತಗಳು ಬಂದಿಲ್ಲ. ಅವರ ಪಕ್ಕದ ನಿವೇಶನದಾರರಿಗೆ ತಾತ್ಕಾಲಿಕ ನಕ್ಷೆಗೆ ಅನುಮತಿ ನೀಡಿದ್ದಾರೆ. ಅದನ್ನು ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸುಡಾ ಅಧ್ಯಕ್ಷ ಬಾಬುಗೌಡ ಬಾದರ್ಲಿ ಸ್ಪಷ್ಟಪಡಿಸಿದರು.
ಶಾಸಕ ಹಂಪನಗೌಡ ಬಾದರ್ಲಿ, ತಹಶೀಲ್ದಾರ್ ಅರುಣ್ ಎಚ್.ದೇಸಾಯಿ, ಡಿವೈಎಸ್‍ಪಿ ಚಂದ್ರಶೇಖರ, ಪೊಲೀಸ್ ಇನ್ಸ್‍ಪೆಕ್ಟರ್ ವೀರಾರೆಡ್ಡಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.