ADVERTISEMENT

ಮತ್ತೆ ಕೊಚ್ಚಿ ಹೋದ ತಾತ್ಕಾಲಿಕ ರಸ್ತೆ: ಸಂಚಾರಕ್ಕೆ ತೊಂದರೆ

₹ 18 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ 7 ಸೇತುವೆ ನಿರ್ಮಾಣ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 20:20 IST
Last Updated 14 ಸೆಪ್ಟೆಂಬರ್ 2025, 20:20 IST
ಸಿಂಧನೂರು ತಾಲ್ಲೂಕಿನ ಬೂತಲದಿನ್ನಿ ಮತ್ತು ಕಲ್ಲೂರು ಗ್ರಾಮಗಳ ನಡುವಿನ ಹಳ್ಳದ ಪಕ್ಕದಲ್ಲಿ ನಿರ್ಮಿಸಿರುವ ತಾತ್ಕಾಲಿಕ ರಸ್ತೆ ಕೊಚ್ಚಿ ಹೋಗಿರುವ ದೃಶ್ಯ
ಸಿಂಧನೂರು ತಾಲ್ಲೂಕಿನ ಬೂತಲದಿನ್ನಿ ಮತ್ತು ಕಲ್ಲೂರು ಗ್ರಾಮಗಳ ನಡುವಿನ ಹಳ್ಳದ ಪಕ್ಕದಲ್ಲಿ ನಿರ್ಮಿಸಿರುವ ತಾತ್ಕಾಲಿಕ ರಸ್ತೆ ಕೊಚ್ಚಿ ಹೋಗಿರುವ ದೃಶ್ಯ   

ಸಿಂಧನೂರು: ತಾಲ್ಲೂಕಿನ ಬೂತಲದಿನ್ನಿ ಮತ್ತು ಕಲ್ಲೂರು ಗ್ರಾಮಗಳ ನಡುವಿನ ಹಳ್ಳದ ಪಕ್ಕದಲ್ಲಿ ನಿರ್ಮಿಸಿರುವ ತಾತ್ಕಾಲಿಕ ರಸ್ತೆ ಮಳೆಯಿಂದ ಕೊಚ್ಚಿ ಹೋಗಿದ್ದರಿಂದ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಯಿತು.

ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಯೋಜನೆಯಡಿ ₹ 18 ಕೋಟಿ ವೆಚ್ಚದಲ್ಲಿ ಜೇವರ್ಗಿ-ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ-150ಎ ವ್ಯಾಪ್ತಿಗೊಳಪಡುವ ಸಿಂಧನೂರು-ಮಸ್ಕಿ ಮಧ್ಯದಲ್ಲಿ ಏಳು ಸೇತುವೆಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿವೆ. ಬೂತಲದಿನ್ನಿ ಮತ್ತು ಕಲ್ಲೂರು ಗ್ರಾಮಗಳ ನಡುವಿನ ಹಳ್ಳಕ್ಕೆ ಸೇತುವೆ ನಿರ್ಮಾಣ ಕಾಮಗಾರಿ ಕುಂಟುತ್ತ ಸಾಗಿದೆ. ವಾಹನಗಳ ಸಂಚಾರಕ್ಕಾಗಿ ಪಕ್ಕದಲ್ಲಿ ನಿರ್ಮಿಸಿರುವ ತಾತ್ಕಾಲಿಕ ರಸ್ತೆ ಮಳೆಯಿಂದ ತಿಂಗಳ ಹಿಂದೆಯಷ್ಟೇ ಕೊಚ್ಚಿ ಹೋಗಿತ್ತು. ಆಗ ಹಳ್ಳಕ್ಕೆ ರಿಂಗ್ ಹಾಕಿ, ಮೇಲೆ ಕಂಕರ್ ಮತ್ತು ಮರಂ ಹಾಕಿ ರಸ್ತೆ ನಿರ್ಮಿಸಲಾಗಿತ್ತು.

ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆ ಬಿಟ್ಟು ಬಿಟ್ಟು ಸುರಿಯುತ್ತಿರುವುದು ಮತ್ತು ಕಾಲುವೆಯಿಂದ ಚೆಕ್ ಡ್ಯಾಂಗೆ ನೀರು ಹರಿಬಿಟ್ಟಿರುವುದರಿಂದ ಹಳ್ಳಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ತಾತ್ಕಾಲಿಕ ರಸ್ತೆ ಮೇಲಿನ ಮಣ್ಣು ಕೊಚ್ಚಿ ಹೋಗಿದೆ. ಭಾನುವಾರ ಬೆಳಿಗ್ಗೆ ತಾತ್ಕಾಲಿಕ ರಸ್ತೆ ಸಂಪೂರ್ಣ ನೀರುಮಯವಾಗಿತ್ತು. ಸಿಂಧನೂರು ಮತ್ತು ಮಸ್ಕಿ ಮುಖ್ಯರಸ್ತೆಯಲ್ಲಿ ಬಸ್, ಲಾರಿ, ಕ್ರೂಷರ್, ಕಾರು, ಸೇರಿದಂತೆ ನೂರಾರು ವಾಹನಗಳು ಒಂದರ ಹಿಂದೆ ಒಂದು ನಿಂತುಕೊಂಡಿದ್ದರಿಂದ ವಾಹನಗಳ ದಟ್ಟಣೆ ಹೆಚ್ಚಾಗಿತ್ತು.

ADVERTISEMENT

ದೂರದೂರಿಗೆ ತೆರಳುವ ಪ್ರಯಾಣಿಕರು ಬಸ್‍ನಲ್ಲಿ ಎರಡ್ಮೂರು ತಾಸುಗಳ ಕಾಲ ಕಾದು ಕುಳಿತಿದ್ದರು. ಸಿಂಧನೂರು-ಮಸ್ಕಿ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾದ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಮಸ್ಕಿ ಕಡೆಯಿಂದ ಸಿಂಧನೂರು ಕಡೆ ಬರುತ್ತಿದ್ದ ವಾಹನಗಳನ್ನು ದೇವರಗುಡಿ ಮಾರ್ಗವಾಗಿ ಕಳುಹಿಸಿದರು. ಅದರಂತೆ ಸಿಂಧನೂರು ಕಡೆಯಿಂದ ಮಸ್ಕಿ ಕಡೆಗೆ ಹೋಗುತ್ತಿದ್ದ ವಾಹನಗಳನ್ನು ಬಳಗಾನೂರು ಕ್ರಾಸ್ ಮೂಲಕ ಮಸ್ಕಿಗೆ ಕಳುಹಿಸಿ ಟ್ರಾಫಿಕ್ ಸಮಸ್ಯೆಯನ್ನು ಸುಗಮಗೊಳಿಸಲು ಪ್ರಯತ್ನಿಸಿದರು.

ರೊಚ್ಚಿಗೆದ್ದ ಜನರು

ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಿ ವರ್ಷವಾಗುತ್ತ ಬಂದರೂ ಗುತ್ತಿಗೆದಾರರು ಪೂರ್ಣಗೊಳಿಸಿಲ್ಲ. ಅವರ  ವಿರುದ್ಧ ಕ್ರಮಕೈಗೊಳ್ಳದೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಯೋಜನೆಯ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ತಕ್ಷಣವೇ ಗುಣಮಟ್ಟದ ತಾತ್ಕಾಲಿಕ ರಸ್ತೆಯನ್ನು ನಿರ್ಮಿಸಬೇಕು. ಸೇತುವೆ ನಿರ್ಮಾಣ ಕಾಮಗಾರಿ ಆದಷ್ಟು ಶೀಘ್ರ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಸಿಂಧನೂರು-ಮಸ್ಕಿ ಮುಖ್ಯರಸ್ತೆಯಲ್ಲಿ ವಾಹನಗಳ ಸಂಚಾರ ತಡೆದು ಪ್ರತಿಭಟಿಸಬೇಕಾಗುತ್ತದೆ ಎಂದು ಕಲ್ಲೂರು ಗ್ರಾಮದ ವೆಂಕೋಬ ನಾಯಕ ಪಾಂಡಪ್ಪ ಮಡಿವಾಳ ವೆಂಕಟೇಶ ಬೂತಲದಿನ್ನಿ ರವಿಗೌಡ ಮುಳ್ಳೂರು ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.