ADVERTISEMENT

ರಾಯಚೂರು| ತುಂಗಭದ್ರೆಗೆ ಅಂಬಾ ಆರತಿ: ದಸರಾಕ್ಕೆ ಚಾಲನೆ

ಕುಂಭ-ಕಳಸ, ಕಲಾ ತಂಡಗಳೊಂದಿಗೆ ಅದ್ದೂರಿ ಮೆರವಣಿಗೆ: ತುಂಗಭದ್ರಾ ನದಿಗೆ ಬಾಗಿನ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 5:32 IST
Last Updated 23 ಸೆಪ್ಟೆಂಬರ್ 2025, 5:32 IST
ಸಿಂಧನೂರು ತಾಲ್ಲೂಕಿನ ಮುಕ್ಕುಂದಾ ಗ್ರಾಮದ ಬಳಿ ತುಂಗಭದ್ರಾ ನದಿಗೆ ಬಾಗಿನ ಸಮರ್ಪಣೆ ಮಾಡಲಾಯಿತು
ಸಿಂಧನೂರು ತಾಲ್ಲೂಕಿನ ಮುಕ್ಕುಂದಾ ಗ್ರಾಮದ ಬಳಿ ತುಂಗಭದ್ರಾ ನದಿಗೆ ಬಾಗಿನ ಸಮರ್ಪಣೆ ಮಾಡಲಾಯಿತು   

ಸಿಂಧನೂರು: ತಾಲ್ಲೂಕಿನ ಮುಕ್ಕುಂದಾ ಗ್ರಾಮದ ಬಳಿ ಇರುವ ತುಂಗಭದ್ರಾ ನದಿಗೆ ಬಾಗಿನ ಸಮರ್ಪಿಸಿ ವಾರಣಾಸಿಯ ಅರ್ಚಕರು ಏಕಕಾಲಕ್ಕೆ ತುಂಗಭದ್ರೆಗೆ ಅಂಬಾ ಆರತಿ ಬೆಳಗುವ ಮೂಲಕ ಸಿಂಧನೂರು ದಸರಾ ಉತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.

ಮೊದಲಿಗೆ ಗ್ರಾಮದ ಆರಾಧ್ಯ ದೈವ ಮುರಾರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಅಲ್ಲಿಂದ ನೂರಾರು ಮಹಿಳೆಯರು ಪೂರ್ಣ ಕುಂಭ-ಕಳಸವನ್ನು ಹೊತ್ತು ವಿವಿಧ ಕಲಾ ತಂಡಗಳ ವಾದ್ಯ–ಮೇಳಗಳೊಂದಿಗೆ ಕರಿವೀರೇಶ್ವರ ದೇವಸ್ಥಾದವರೆಗೆ ಅದ್ದೂರಿ ಮೆರವಣಿಗೆ ನಡೆಸಿದರು.

ನಂತರ ತುಂಗಭದ್ರಾ ನದಿ ತೀರದಲ್ಲಿ ವಿಶೇಷ ಪೂಜೆ ಹಾಗೂ ಹೋಮ–ಹವನ ನಡೆಸಲಾಯಿತು.

ADVERTISEMENT

ಶಾಸಕ ಹಂಪನಗೌಡ ಬಾದರ್ಲಿ ಮತ್ತು ಅವರ ಪತ್ನಿ ಗುಂಡಮ್ಮ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ನಾಡಗೌಡ, ಲಿಂಗಸುಗೂರು ಉಪವಿಭಾಗಾಧಿಕಾರಿ ಬಸವಣೆಪ್ಪ ಕಲಶೆಟ್ಟಿ, ತಹಶೀಲ್ದಾರ್ ಅರುಣ್ ಎಚ್.ದೇಸಾಯಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ, ಡಿವೈಎಸ್‍ಪಿ ಬಿ.ಎಸ್.ತಳವಾರ ಅವರು ನದಿಗೆ ಬಾಗಿನ ಸಮರ್ಪಿಸಿದರು.

ಇದೇ ವೇಳೆ ವಾರಣಾಸಿಯ ಪ್ರಖ್ಯಾತ ಅರ್ಚಕರು ನದಿಯ ಮಧ್ಯದಲ್ಲಿ ಹಾಕಿದ್ದ ವೇದಿಕೆಯ ಮೇಲೆ ನಿಂತು ಸುರಿಯುವ ಮಳೆಯಲ್ಲೂ ತುಂಗಭದ್ರೆಗೆ ಅಂಬಾ ಆರತಿ ಬೆಳಗುತ್ತಿದ್ದಂತೆ ನೆರೆದಿದ್ದ ಸಾವಿರಾರು ಜನರು ಜಯಘೋಷ ಕೂಗಿ ಶ್ರದ್ಧಾ ಭಕ್ತಿ ಮೆರೆದರು.

ಶಾಸಕ ಹಂಪನಗೌಡ ಮಾತನಾಡಿ ‘ತುಂಗಾ ಮಾತೆ ಮತ್ತು ಅಂಬಾ ಮಾತೆಯ ಆಶೀರ್ವಾದ ಇಡೀ ದೇಶ, ರಾಜ್ಯ ಮತ್ತು ನಮ್ಮ ಕಲ್ಯಾಣ ಕರ್ನಾಟಕ ಭಾಗಕ್ಕೆ ಇರಲಿ. ತುಂಗಭದ್ರೆಯು ಸದಾಕಾಲ ಹರಿಯುತ್ತ ಈ ಭಾಗ ಹಸಿರಿನಿಂದ ಕಂಗೊಳಿಸಲಿ’ ಎಂದು ಪ್ರಾರ್ಥಿಸಿದರು.

ನಂತರ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ,‘ವಿಜಯನಗರದ ಅರಸರು ಮುಕ್ಕುಂದಾ ಗ್ರಾಮದಿಂದಲೇ ದಸರಾ ಆಚರಣೆ ಆರಂಭಿಸಿದರು ಎನ್ನುವ ಐತಿಹ್ಯವಿದೆ’ ಎಂದು ಸ್ಮರಿಸಿದರು.

ಯದ್ದಲದೊಡ್ಡಿಯ ಸುವರ್ಣಗಿರಿ ವಿರಕ್ತಮಠದ ಮಹಾಲಿಂಗ ಸ್ವಾಮಿ, ವೆಂಕಟಗಿರಿ ಕ್ಯಾಂಪಿನ ಸಿದ್ದಾಶ್ರಮದ ಸಿದ್ದರಾಮೇಶ್ವರ ಶರಣರು, ರೌಡಕುಂದಾ ಹಿರೇಮಠ ಸಂಸ್ಥಾನ ಮಠದ ಶಿವಯೋಗಿ ಶಿವಾಚಾರ್ಯ, ಅಮರಯ್ಯಸ್ವಾಮಿ ಅಲಬನೂರು, ನಗರಸಭೆ ಅಧ್ಯಕ್ಷೆ ಮಂಜುಳಾ ಪಾಟೀಲ, ಪೌರಾಯುಕ್ತ ಪಾಂಡುರಂಗ ಇಟಗಿ, ರೈಲ್ವೆ ಭೂಸ್ವಾಧೀನ ವಿಶೇಷ ಅಧಿಕಾರಿ ಶೃತಿ.ಕೆ, ಅಂಬಾಮಠದ ಅಂಬಾದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ ರಂಗನಗೌಡ ಗೊರೇಬಾಳ ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು.

ಸಿಂಧನೂರು ತಾಲ್ಲೂಕಿನ ಮುಕ್ಕುಂದಾ ಗ್ರಾಮದ ಬಳಿ ತುಂಗಭದ್ರಾ ನದಿಗೆ ವಾರಣಾಸಿಯ ಅರ್ಚಕರು ಅಂಬಾ ಆರತಿ ಬೆಳಗಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.