ADVERTISEMENT

ರಾಯಚೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಜಿಲ್ಲಾಧಿಕಾರಿ ಕಚೇರಿ ಎದುರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 5:36 IST
Last Updated 25 ಡಿಸೆಂಬರ್ 2025, 5:36 IST
ರಾಯಚೂರು ಜಿಲ್ಲಾಧಿಕಾರಿ ಕಚೇರಿ ಎದುರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು
ರಾಯಚೂರು ಜಿಲ್ಲಾಧಿಕಾರಿ ಕಚೇರಿ ಎದುರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು   

ರಾಯಚೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

'ವಿಶೇಷ ವರ್ಗದಲ್ಲಿ ಗುರುತಿಸಿದ ಮನೆ ಕೆಲಸದ ಮಹಿಳೆಯರು, ವಿಧವೆ, ವಿಧುರ, ಅಂಗವಿಕಲ, ಬೀದಿ ಬದಿ ವ್ಯಾಪಾರಿಗಳು, ಅಲೆಮಾರಿಗಳು, ಸಫಾಯಿ ಕರ್ಮಾಚಾರಿಗಳು ಮತ್ತು ಪೌರ ಕಾರ್ಮಿಕರಿಗೆ ನಿವೇಶನ ನೀಡುವಂತೆ ಅರ್ಜಿ ಸಲ್ಲಿಸಿದ್ದರೂ ಜಿಲ್ಲಾಡಳಿತ ಕ್ರಮ ವಹಿಸಿಲ್ಲ. ನೈಜ ಫಲಾನುಭವಿಗಳನ್ನು ಗುರುತಿಸುವುದು ಮತ್ತು ನಿವೇಶನ ಒದಗಿಸಲು ಅಗತ್ಯ ಭೂಮಿ ಖರೀದಿಗೆ ಸರ್ಕಾರ ಮುಂದಾಗಬೇಕು’ ಎಂದು ವೇದಿಕೆ ಅಧ್ಯಕ್ಷ ಜನಾರ್ಧನ ಹಳ್ಳಿಬೆಂಚಿ ಒತ್ತಾಯಿಸಿದರು.

‘ವಿಶೇಷ ವರ್ಗದವರ ಸಮಸ್ಯೆ ಕುರಿತು ಚರ್ಚಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸುವ ಕುರಿತು ಜಿಲ್ಲಾಡಳಿತ ಆಸಕ್ತಿ ತೋರುತ್ತಿಲ್ಲ’ ಎಂದು ಪ್ರತಿಭಟನಕಾರರು ಆರೋಪಿಸಿದರು.

ADVERTISEMENT

‘ಈಗಾಗಲೇ ಮಹಾನಗರ ಪಾಲಿಕೆಗೆ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ ವಿಶೇಷ ವರ್ಗದ ಫಲಾನುಭವಿಗಳ ಅರ್ಜಿ ಪರಿಶೀಲಿಸಿ ನಿವೇಶನ ಮಂಜೂರು ಮಾಡುವುದು, ದೇವರಾಜ ಅರಸು ವಿಶೇಷ ವರ್ಗದಡಿಯಲ್ಲಿ ನಿವೇಶನ ರಹಿತರ ಪಟ್ಟಿಯನ್ನು ಶೀಘ್ರದಲ್ಲಿ ಮಹಾನಗರ ಪಾಲಿಕೆಯಿಂದ ಜಿಲ್ಲಾಡಳಿತಕ್ಕೆ ಕಳುಹಿಸಲು ಅಧಿಕಾರಿಗಳಿಗೆ ಸೂಚಿಸಬೇಕು. ಸರ್ಕಾರದ ಆದೇಶದ ಪ್ರಕಾರ ವಿಶೇಷ ವರ್ಗದವರಿಗೆ ನಿವೇಶನ ಮಂಜೂರಿಗಾಗಿ ಶೀಘ್ರದಲ್ಲಿ ಸರ್ಕಾರಿ ಅಥವಾ ಖಾಸಗಿ ಜಮೀನನ್ನು ಖರೀದಿಸಿ ನಿವೇಶನ ರಹಿತ ಬಡಕುಟುಂಬಗಳಿಗೆ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

ವೇದಿಕೆ ಕಾರ್ಯದರ್ಶಿ ನೂರ್‌ಜಾನ್‌, ಸಂಘಟನಾ ಕಾರ್ಯದರ್ಶಿ ಬಸವರಾಜ ಹೊಸೂರು, ರಾಜಶೇಖರ, ಜಂಬಣ್ಣ, ಮಹೇಶ, ಮಾಧವರಡ್ಡಿ, ನಿತಿನ್‌, ನಾಗರಾಜ, ಪವನ್‌, ಚಂದ್ರಶೇಖರ ದೇವಿನಗರ ಸೇರಿದಂತೆ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.