ಸಾಂದರ್ಭಿಕ ಚಿತ್ರ
ರಾಯಚೂರು: ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕಳೆದ ಬಾರಿ 31ನೇ ಸ್ಥಾನದಲ್ಲಿದ್ದ ರಾಯಚೂರು ಜಿಲ್ಲೆ ಈ ಸಲ 32ನೇ ಸ್ಥಾನಕ್ಕೆ ಕುಸಿದಿದೆ. ಜಿಲ್ಲೆಗೆ ಶೇಕಡ 52.05ರಷ್ಟು ಫಲಿತಾಂಶ ಬಂದಿದೆ. ಜಿಲ್ಲೆ ಕಳೆದ ಎಂಟು ವರ್ಷಗಳಲ್ಲೇ ಅತ್ಯಂತ ಕಳಪೆ ಫಲಿತಾಂಶ ಪಡೆದಿದೆ.
2017ರಲ್ಲಿ ಶೇ.69.69ರಷ್ಟು ಫಲಿತಾಂಶ ಪಡೆದಿತ್ತು. ಆದರೆ, ಮರು ವರ್ಷವೇ 2018ರಲ್ಲಿ ಶೇ.68.89ಕ್ಕೆ ಕುಸಿಯಿತು. 2018ರಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 30ನೇ ಸ್ಥಾನದಲ್ಲಿದ್ದ ರಾಯಚೂರು ಜಿಲ್ಲೆ2019ರಲ್ಲಿ 29ನೇ ಸ್ಥಾನಕ್ಕೆ ಏರಿತ್ತು. 2022ರಲ್ಲಿ 32ನೇ ಸ್ಥಾನ, 2023ರಲ್ಲಿ ಶೇಕಡ 84.02 ಫಲಿತಾಂಶ ಪಡೆದು 30ನೇ ಸ್ಥಾನ ಹಾಗೂ 2024ರಲ್ಲಿ ಶೇಕಡ 63.49ರಷ್ಟು ಫಲಿತಾಂಶ ಪಡೆದು 31ನೇ ಸ್ಥಾನದಲ್ಲಿ ಇತ್ತು. ಪ್ರಸಕ್ತ ವರ್ಷ ಮತ್ತೆ ಒಂದು ಸ್ಥಾನ ಕುಸಿದು 31ನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ.
ಪರೀಕ್ಷೆಗೆ ಕುಳಿತ 28550 ವಿದ್ಯಾರ್ಥಿಗಳಲ್ಲಿ ಕೇವಲ 14,860 ಉತ್ತೀರ್ಣರಾಗಿದ್ದಾರೆ. 3,690 ವಿದ್ಯಾರ್ಥಿಗಳು ಫೇಲಾಗಿದ್ದಾರೆ.
ಶಾಲೆಯಲ್ಲಿ ಶಿಕ್ಷಕರು ಸರಿಯಾಗಿ ಪಾಠ ಮಾಡದ ಕಾರಣ ರಾಯಚೂರು ಜಿಲ್ಲೆಯ 17,140 ವಿದ್ಯಾರ್ಥಿಗಳು ಭಯದಿಂದಲೇ ಪರೀಕ್ಷೆಗೆ ಗೈರಾಗಿದ್ದರು. 1,119 ವಿದ್ಯಾರ್ಥಿಗಳು ಮಾತೃ ಭಾಷೆಯ ಪರೀಕ್ಷೆಗೂ ಬಂದಿರಲಿಲ್ಲ. ಗಣಿತ ಹಾಗೂ ಇಂಗ್ಲಿಷ್ ಪರೀಕ್ಷೆಗೆ ಅತಿ ಹೆಚ್ಚು ವಿದ್ಯಾರ್ಥಿಗಳು ಗೈರಾಗಿದ್ದರು.
ಅಧಿಕಾರಿಗಳಿಗೇ ಆಸಕ್ತಿ ಇಲ್ಲ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಜಿಲ್ಲಾ ಪಂಚಾಯಿತಿ ಅಧೀನದಲ್ಲೇ ಇದೆ. ಉತ್ತಮ ಫಲಿತಾಂಶ ಪಡೆಯಲು ಬೇರೆ ಜಿಲ್ಲೆಯಲ್ಲಿ ಹಮ್ಮಿಕೊಂಡಂತೆ ಪೂರ್ವಭಾವಿಯಾಗಿ ಯಾವುದೇ ಕಾರ್ಯಾಗಾರ, ವಿಶೇಷ ಮಕ್ಕಳ ಮೇಲೆ ನಿಗಾ ವಹಿಸಿರಲಿಲ್ಲ. ಜಿಲ್ಲಾಡಳಿತವೂ ಗಂಭೀರವಾಗಿರಲಿಲ್ಲ. ಬೇರೆ ಜಿಲ್ಲೆಗಳಲ್ಲಿ ಐಎಎಸ್ ಅಧಿಕಾರಿಗಳೇ ಮುತುವರ್ಜಿ ವಹಿಸುವುದು ವಾಡಿಕೆ. ರಾಯಚೂರು ಜಿಲ್ಲೆಯಲ್ಲಿ ಇಂತಹ ಪ್ರಯತ್ನಗಳು ಎರಡು ವರ್ಷಗಳಿಂದ ನಡೆಯುತ್ತಿಲ್ಲ.
ಶಾಲೆಯಲ್ಲಿ ಪಾಠ ಹೇಳಿಕೊಡುವುದಷ್ಟೇ ನಮ್ಮ ಜಬಾಬ್ದಾರಿ ಎಂದು ಶಿಕ್ಷಕರು ಹೇಳಿದರೆ, ಮಕ್ಕಳಿಗೆ ಸರಿಯಾ ಬೋಧನೆ ಮಾಡುವುದು ಶಿಕ್ಷಕರ ಹೊಣೆ ಎಂದು ಪಾಲಕರು ಹೇಳುತ್ತಾರೆ. ಶಿಕ್ಷಕರ ಹಾಗೂ ಪಾಲಕರ ನಿರಾಸಕ್ತಿಯೂ ಕಳಪೆ ಫಲಿತಾಂಶಕ್ಕೆ ಕಾರಣವಾಗಿದೆ.
ಕಳೆದ ವರ್ಷ ಒಂದೇ ವರ್ಷದ ಅವಧಿಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಮೂವರು ಉಪ ನಿರ್ದೇಶಕರು ವರ್ಗವಾಗಿ ಹೋಗಿದ್ದಾರೆ. ಅವರಿಗೆ ಜಿಲ್ಲೆಯಲ್ಲಿ ಕೆಲಸ ಮಾಡುವುದೇ ಇಷ್ಟವಿರಲಿಲ್ಲ. ಒಬ್ಬರು ಉಪ ನಿರ್ದೇಶಕರು ಸ್ಥಿರವಾಗಿದ್ದರೂ ಇಲಾಖೆಯಲ್ಲಿ ಜಡ್ಡುಕಟ್ಟಿದ ವ್ಯವಸ್ಥೆಯನ್ನೇ ಸರಿಪಡಿಸುವುದೇ ದೊಡ್ಡ ಕೆಲಸವಾಯಿತು.
ಶಿಕ್ಷಣ ಇಲಾಖೆ ಫಲಿತಾಂಶ ಸುಧಾರಣೆಗೆ ಯೋಜನಾ ಬದ್ಧ ಕಾರ್ಯಕ್ರಮ ಹಮ್ಮಿಕೊಳ್ಳಲೇ ಇಲ್ಲ. ಶಿಕ್ಷಕ ವರ್ಗದವರು ಸಹ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಲೇ ಇಲ್ಲ. ಶಿಕ್ಷಕರಲ್ಲೇ ವ್ಯಾಕರಣ ಸಮಸ್ಯೆ ಇದೆ. ಸರಿಯಾದ ಬೋಧನೆಯೂ ನಡೆಯಲಿಲ್ಲ. ಇದೆ ಕಾರಣಕ್ಕೆ ಜಿಲ್ಲೆ ಶಿಕ್ಷಣದ ವಿಷಯದಲ್ಲಿ ಹಿಂದುಳಿಯಲು ಕಾರಣ ಎಂದು ಪಾಲಕರು ದೂರುತ್ತಾರೆ.
ಶಿಕ್ಷಕರ ಕೊರತೆ ನೀಗಿಸುವುದೇ ಕಷ್ಟವಾಯಿತು: ಪ್ರೌಢಶಾಲೆಯಲ್ಲಿ 2415 ಮಂಜೂರಾತಿ ಶಿಕ್ಷಕರ ಮಂಜೂರಾತಿ ಹುದ್ದೆಗಳಿದ್ದರೂ 1046 ಶಿಕ್ಷಕರ ಹುದ್ದೆಗಳು ಖಾಲಿ ಇವೆ. 1369 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಶಿಕ್ಷಕರ ಕೊರತೆ ಮಧ್ಯೆಯೂ ಮಕ್ಕಳಿಗೆ ಸಕಾಲದಲ್ಲಿ ಪಾಠ ಮಾಡಿಸಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಕೆ.ಡಿಬಡಿಗೇರ ಹೇಳುತ್ತಾರೆ.
‘ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದ ಕಾರಣ ಸಕಾಲದಲ್ಲಿ ಮಕ್ಕಳಿಗೆ ಸರಿಯಾಗಿ ಬೋಧನೆ ಮಾಡಲು ಸಾಧ್ಯವಾಗಲಿಲ್ಲ‘ ಎಂದು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭುಲಿಂಗ ಗದ್ದಿ ಅಭಿಪ್ರಾಯಪಟ್ಟರು.
‘ಪ್ರಾಥಮಿಕ ಶಾಲಾ ಹಂತದಲ್ಲೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ಪ್ರಾಥಮಿಕ ಶಾಲೆಯಲ್ಲಿ ಏಳು ವರ್ಷ ಕಲಿಕೆಯಲ್ಲಿ ಹಿಂದುಳಿದವರನ್ನು ಮೂರು ವರ್ಷದಲ್ಲೇ ಮೇಲೆತ್ತರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಾಯಚೂರು ಜಿಲ್ಲೆಯಲ್ಲಿ ಗುಣಮಟ್ಟದ ಫಲಿತಾಂಶ ನಿರೀಕ್ಷಿಸಲು ಸಾಧ್ಯವಾಗಿಲ್ಲ‘ ಎಂದು ಶಿಕ್ಷಣ ತಜ್ಞ ಹಫಿಜುಲ್ಲಾ ವಿಶ್ಲೇಷಿಸುತ್ತಾರೆ.
‘ಪ್ರತಿಭೆಯ ಆಧಾರದ ಮೇಲೆ ಸರ್ಕಾರಿ ಶಾಲೆಗಳಲ್ಲಿ ನೇಮಕಗೊಂಡ ಶಿಕ್ಷರ ಮೇಲೆ ಪಾಲಕರ ನಿರೀಕ್ಷೆ ಅಧಿಕ ಇತ್ತು. ಆದರೆ, ಸರ್ಕಾರಿ ಪ್ರೌಢಶಾಲೆಗಳು ಖಾಸಗಿ ಶಾಲೆಗಳಿಗಿಂತಲೂ ಕಳಪೆ ಸಾಧನೆ ಮಾಡಿವೆ’ ಎಂದು ಪಾಲಕರು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.