ADVERTISEMENT

ಸಿಂಧನೂರು: ರಾಜ್ಯ ಮಟ್ಟದ ಲಾನ್ ಟೆನ್ನಿಸ್ ಟೂರ್ನಿ ನ. 4, 5ರಂದು

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2023, 14:10 IST
Last Updated 2 ನವೆಂಬರ್ 2023, 14:10 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಸಿಂಧನೂರು: ‘ಪದವಿ ಪೂರ್ವ ಶಿಕ್ಷಣ ಇಲಾಖೆ ರಾಯಚೂರು, ಪಾಟೀಲ ಪದವಿ ಪೂರ್ವ ಕಾಲೇಜು ಹಾಗೂ ಎಫ್‍ಆರ್‌ಎಫ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ನ.4 ಮತ್ತು 5ರಂದು ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಲಾನ್ ಟೆನ್ನಿಸ್ ಟೂರ್ನಿ ಏರ್ಪಡಿಸಲಾಗಿದೆ’ ಎಂದು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಡಾ.ಎಸ್.ಶಿವರಾಜ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ‘13 ಜಿಲ್ಲೆಗಳಿಂದ 25 ತಂಡಗಳು ಹೆಸರು ನೋಂದಾಯಿಸಿವೆ. ಆದರೆ ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಿಂದ ಯಾವ ವಿದ್ಯಾರ್ಥಿಗಳು ಭಾಗವಹಿಸದಿರುವುದು ಬೇಸರದ ಸಂಗತಿ. ಟೂರ್ನಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ₹65 ಸಾವಿರ ಮಾತ್ರ ನೀಡಲಿದೆ. ಉಳಿದ ಎಲ್ಲ ಖರ್ಚನ್ನೂ ದೇಣಿಗೆ ಮೂಲಕ ಸಂಗ್ರಹಿಸಿ ಪಾಟೀಲ ಶಿಕ್ಷಣ ಸಂಸ್ಥೆ ನೇತೃತ್ವ ವಹಿಸಿದೆ’ ಎಂದರು.

ADVERTISEMENT

‘ಟೂರ್ನಿಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು 17 ವರ್ಷದ ಒಳಗೆ ಇರಬೇಕು. ಪಿಯು ಅಭ್ಯಾಸ ಮಾಡುತ್ತಿರಬೇಕು. ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಗೆಲುವು ಸಾಧಿಸಿರಬೇಕು. ನ.4 ರಂದು ಸಿಂಗಲ್ಸ್, ಡಬಲ್ಸ್ ಮತ್ತು ರಿವರ್ಸ್ ಸಿಂಗಲ್ಸ್ ಪಂದ್ಯಗಳು ನಡೆದರೆ, ನ.5 ರಂದು ಫೈನಲ್ ಪಂದ್ಯಾವಳಿ ನಡೆಯಲಿದೆ. ನ.3ರ ಸಂಜೆ 5 ಗಂಟೆಯೊಳಗೆ ಬಂದರೆ ಮಾತ್ರ ಆಟಗಾರರಿಗೆ ಅವಕಾಶ ನೀಡಲಾಗುವುದು. ವಿದ್ಯಾರ್ಥಿನಿಯರಿಗೆ ಪಾಟೀಲ ಶಿಕ್ಷಣ ಸಂಸ್ಥೆಯಲ್ಲಿ ಹಾಗೂ ವಿದ್ಯಾರ್ಥಿಗಳಿಗೆ ಸಂಗಮ್ ಪ್ಯಾಲೇಸ್‍ನಲ್ಲಿ ವಸತಿ ಮತ್ತು ಊಟದ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.

ಪಾಟೀಲ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಆರ್.ಸಿ.ಪಾಟೀಲ ಮಾತನಾಡಿ, ‘ಟೂರ್ನಿಯಲ್ಲಿ ವಿಜೇತರಾದವರಿಗೆ ನೀಟ್, ಸಿಇಟಿಯಲ್ಲಿ ಮೀಸಲಾತಿ ಸಿಗಲಿದೆ’ ಎಂದು ತಿಳಿಸಿದರು.

ಎಫ್‍ಆರ್‌ಎಸ್ ಕ್ಲಬ್‍ನ ಸದಸ್ಯರಾದ ಎಸ್.ಶರಣೇಗೌಡ, ವಿಶ್ವನಾಥ ಮಾ.ಪಾ, ವಿವಿಧ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರಾದ ಮುರುಡಯ್ಯ, ಮಂಜುನಾಥ ಸೋಮಲಾಪುರ, ಸತ್ಯನಾರಾಯಣ ಶ್ರೇಷ್ಠಿ, ನಾಗರಾಜ ಮುಕ್ಕುಂದಾ, ಪರಶುರಾಮ ಮಲ್ಲಾಪುರ, ವೆಂಕಟರಾವ್ ಎಂ, ಮಂಜುನಾಥ, ಜಡಿಸ್ವಾಮಿ, ಸಿದ್ದಪ್ಪ ಖೈರವಾಡಿಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.