ADVERTISEMENT

ಅಸ್ಪೃಶ್ಯತೆ ನಿವಾರಣೆಗೆ ಬೀದಿನಾಟಕ ಅಸ್ತ್ರ- ಮಹಾಲಿಂಗಪ್ಪ ಇಂಗಳದಾಳ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2022, 7:20 IST
Last Updated 9 ಮಾರ್ಚ್ 2022, 7:20 IST
ಸಿಂಧನೂರು ತಾಲ್ಲೂಕಿನ ಉದ್ಬಾಳ (ಯು) ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಂಗಳವಾರ ನಡೆದ ಅಸ್ಪೃಶ್ಯತಾ ನಿವಾರಣೆ ಕುರಿತು ಜಾಗೃತಿ ಜಾಥಾ ಮತ್ತು ಬೀದಿ ನಾಟಕ ವಿದ್ಯಾರ್ಥಿಗಳ ಗಮನ ಸೆಳೆಯಿತು
ಸಿಂಧನೂರು ತಾಲ್ಲೂಕಿನ ಉದ್ಬಾಳ (ಯು) ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಂಗಳವಾರ ನಡೆದ ಅಸ್ಪೃಶ್ಯತಾ ನಿವಾರಣೆ ಕುರಿತು ಜಾಗೃತಿ ಜಾಥಾ ಮತ್ತು ಬೀದಿ ನಾಟಕ ವಿದ್ಯಾರ್ಥಿಗಳ ಗಮನ ಸೆಳೆಯಿತು   

ಸಿಂಧನೂರು: ಅಸ್ಪೃಶ್ಯತೆ ಒಳಗೊಂಡಂತೆ ಸಮಾಜದಲ್ಲಿರುವ ಅನಿಷ್ಠ ಪದ್ದತಿಗಳನ್ನು ಹೋಗಲಾಡಿಸಲು ಬೀದಿ ನಾಟಕಗಳು ಅಸ್ತ್ರವಾಗಲಿ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಹಾಲಿಂಗಪ್ಪ ಇಂಗಳದಾಳ ಹೇಳಿದರು.

ತಾಲ್ಲೂಕಿನ ಉದ್ಬಾಳ (ಯು) ಗ್ರಾಮದಲ್ಲಿ ಜಿಲ್ಲಾಡಳಿತ ಹಾಗೂ ಸಿಂಚನ ಸಾಂಸ್ಕೃತಿಕ ಕಲಾ ಸಂಘ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಸ್ಪೃಶ್ಯತಾ ನಿವಾರಣೆ ಕುರಿತ ಜಾಗೃತಿ ಜಾಥಾ ಮತ್ತು ಬೀದಿ ನಾಟಕ ಕಾರ್ಯಕ್ರಮಕ್ಕೆ ಕ್ಯಾದಿಗೆ, ಹಲಗೆ ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

‘ಜಾತಿ ಪದ್ಧತಿ, ಅಸ್ಪೃಶ್ಯತೆ ಜೀವಂತವಾಗಿರುವ ತನಕ ದೇಶದ ಸರ್ವತೋಮುಖ ಬೆಳವಣಿಗೆ ಅಸಾಧ್ಯ. ನಮ್ಮಲ್ಲಿ ಹರಿಯುವ ರಕ್ತ, ನಾವು ಕುಡಿಯುವ ನೀರು, ಉಸಿರಾಡುವ ಗಾಳಿ, ಜೀವಿಸುವ ನೆಲ ಎಲ್ಲವೂ ಒಂದೇ ಆಗಿದ್ದಾಗ ಮನುಷ್ಯರನ್ನು ಮಾತ್ರ ಜಾತಿಯ ಹೆಸರಿನಲ್ಲಿ ಪ್ರತ್ಯೇಕಿಸುವುದು ಸರಿಯಲ್ಲ. ಈ ಅನಿಷ್ಠ ಪದ್ಧತಿಗಳನ್ನು ಹೋಗಲಾಡಿಸಲು ಸಾರ್ವಜನಿಕರ ಸಹಕಾರ ಮತ್ತು ಜಾಗೃತಿ ಮೂಡಿಸುವುದು ಅವಶ್ಯಕ’ ಎಂದು ತಿಳಿಸಿದರು.

ADVERTISEMENT

‘ಸಮಾಜ ಪರಿವರ್ತನೆಗೆ ಬಹುದೊಡ್ಡ ಪಾತ್ರ ವಹಿಸಿದ್ದ ಬೀದಿ ನಾಟಕಗಳು ಇಂದು ಕಡಿಮೆಯಾಗಿವೆ. ಕಲಾವಿದರು ಜನಪ್ರಿಯತೆಯ ಬೆನ್ನುಬಿದ್ದು ಖಾಸಗಿ ವಾಹಿನಿಗಳ ರಿಯಾಲಿಟಿ ಶೋಗಳಿಗೆ ಹೋಗುತ್ತಿದ್ದಾರೆ. ಬೀದಿ ನಾಟಕ ಸಾಹಿತ್ಯಕ್ಕೆ ಇತರ ಸಾಹಿತ್ಯ ಪ್ರಕಾರಗಳಿಗಿಂದ ಭಿನ್ನವಾದ ಶಕ್ತಿ ಮತ್ತು ಧ್ವನಿ ಇದೆ. ಲೇಖಕರು, ಬರಹಗಾರರು, ಕಲಾವಿದರು ಬೀದಿ ನಾಟಕ ಮಾಧ್ಯಮವನ್ನು ಬಳಸಿಕೊಂಡು ಸಾಮಾಜಿಕ ಬದಲಾವಣೆಯ ನಿಟ್ಟಿನಲ್ಲಿ ಮುಂದಾಗಬೇಕು. ಜೊತೆಗೆ ಮಕ್ಕಳನ್ನು ಶಿಕ್ಷಣವಂತರನ್ನಾಗಿಸಿ, ಸಂಘಟಿತರಾದರೆ ಅಸ್ಪೃಶ್ಯತೆ ನಿವಾರಣೆ ಸಾಧ್ಯವಾಗುತ್ತದೆ’ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯ ರಾಮಣ್ಣ ಉದ್ಬಾಳ, ಸಂಘದ ಅಧ್ಯಕ್ಷ ಮೌಲಪ್ಪ ಮಾಡಸಿರವಾರ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ತಿಮ್ಮಣ್ಣ ರಾಮತ್ನಾಳ, ಶಿಕ್ಷಕ ಮಂಜಪ್ಪ ಇದ್ದರು.

ನಂತರ ಹಂಚಿನಾಳ ಕೆ, ಚನ್ನಳ್ಳಿ, ಮಾವಿನಮಡ್ಗು, ಕೆಂಗಲ್, ಹೆಡಗಿನಾಳ, ಆಯನೂರು, ವಿರುಪಾಪುರ ಗ್ರಾಮಗಳಲ್ಲಿ ಬೀದಿ ನಾಟಕ ಮೂಲಕ ಜಾಗೃತಿ ಮೂಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.