ADVERTISEMENT

‘ಕಾಯ್ದೆಗಳ ಅಧ್ಯಯನ ಅಗತ್ಯ’

ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2020, 4:30 IST
Last Updated 11 ಅಕ್ಟೋಬರ್ 2020, 4:30 IST
ರಾಯಚೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಪೊಲೀಸರಿಗಾಗಿ ಆಯೋಜಿಸಿದ್ದ ಎನ್‌ಡಿಪಿಎಸ್‌ ಕಾಯ್ದೆಯ ಕುರಿತ ಕಾರ್ಯಾಗಾರವನ್ನು ಪ್ರಧಾನ ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಮುಸ್ತಫಾ ಹುಸೇನ್ ಉದ್ಘಾಟಿಸಿದರು
ರಾಯಚೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಪೊಲೀಸರಿಗಾಗಿ ಆಯೋಜಿಸಿದ್ದ ಎನ್‌ಡಿಪಿಎಸ್‌ ಕಾಯ್ದೆಯ ಕುರಿತ ಕಾರ್ಯಾಗಾರವನ್ನು ಪ್ರಧಾನ ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಮುಸ್ತಫಾ ಹುಸೇನ್ ಉದ್ಘಾಟಿಸಿದರು   

ರಾಯಚೂರು: ಜಿಲ್ಲೆಯಲ್ಲಿನ ಗಾಂಜಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಅದರ ನಿಯಂತ್ರಣಕ್ಕೆ ವಿವಿಧ ಕಾಯ್ದೆ ಸೆಕ್ಷನ್ ಅಡಿ ಪೊಲೀಸರು ಹೆಚ್ಚಿನ ಕಾನೂನಿನ ಅರಿವು ಪಡೆದು ಭಿನ್ನವಾಗಿ ತನಿಖೆ ಮಾರ್ಗ ಅನುಸರಿಸಬೇಕು ಎಂದು ಪ್ರಧಾನ ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಮುಸ್ತಫಾ ಹುಸೇನ್ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ( ಎನ್‌ಡಿಪಿಎಸ್) ಕಾಯ್ದೆಯ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.

ಗಾಂಜಾ ಪ್ರಕರಣದಲ್ಲಿ ಆರೋಪಿಯ ವಿರುದ್ಧ ಸೆಕ್ಷನ್ 20 ಎ ದಾಖಲಿಸಬೇಕು. ಸೆಕ್ಷನ್ ಬಿ ಕ್ಲಾಸ್ 1 ಕಾಯ್ದೆಯಡಿ ಗಾಂಜಾ ಅರೋಪಿಗಳಿಗೆ 10 ವರ್ಷ ಜೈಲು ಹಾಗೂ ₹ 1 ಲಕ್ಷದವರೆಗೆ ದಂಡ ವಿಧಿಸಬಹುದಾಗಿದೆ ಎಂದರು.

ADVERTISEMENT

ಹಲವಾರು ಗಾಂಜಾ ಪ್ರಕರಣಗಳಲ್ಲಿ ಪೊಲೀಸರು ದಾಳಿ ಮಾಡಿದಾಗ ಸಮರ್ಪಕ ಸೆಕ್ಷನ್ ನಡಿ ಪ್ರಕರಣ ದಾಖಲಿಸಿಕೊಳ್ಳುವಲ್ಲಿ ವಿಫಲರಾಗುತ್ತಾರೆ. ಇದರಿಂದ ನ್ಯಾಯಾಲಯದಲ್ಲಿ ತೀರ್ಪು ನೀಡುವಾಗ ಪ್ರಕರಣದಲ್ಲಿನ ಹಾಕಲಾದ ಸೆಕ್ಷನ್
ಅಡಿ ಶಿಕ್ಷೆ ನೀಡಬೇಕಿದ್ದು ಕಡಿಮೆ ಪ್ರಮಾಣದ ಶಿಕ್ಷೆಯಾಗುತ್ತಿದೆ. ಇದರಿಂದ ಗಾಂಜಾ ಬೆಳೆಯುವ ಪ್ರಕರಣ ಸಂಪೂರ್ಣವಾಗಿ ನಿಯಂತ್ರಣವಾಗುತ್ತಿಲ್ಲ ಎಂದು ಕಾಯ್ದೆಗಳ ಬಗ್ಗೆ ವಿವರಿಸಿದರು.

ಜಿಲ್ಲೆಯಲ್ಲಿ ಹಲವೆಡೆ ಹತ್ತಿ ಜೊತೆಗೆ ಗಾಂಜಾ ಸಹ ಒಂದು ಬೆಳೆಯನ್ನಾಗಿ ಮಾಡಿಕೊಂಡು ಕೆಲವರು ಜಮೀನುಗಳಲ್ಲಿ ಬೆಳೆಯುತ್ತಿರುವುದು ಪತ್ತೆಯಾಗುತ್ತಿದೆ. ತನಿಖೆ ಸಮರ್ಪಕವಾಗಿ ನಡೆಸಲು ಅಗತ್ಯ ದಾಖಲೆ ಹಾಗೂ ಸಾಕ್ಷಿಗಳನ್ನು ಕಲೆಹಾಕಿದಾಗ ಮಾತ್ರ ಆರೋಪಿಗಳಿಗೆ ಸರಿಯಾದ ಪ್ರಮಾಣದ ಶಿಕ್ಷೆ ಪ್ರಮಾಣದ ನೀಡಬಹುದು. ಪೊಲೀಸರು ಎನ್‌ಡಿಪಿಎಸ್‌ ಕಾಯ್ದೆ ಬಗ್ಗೆ ಸಮಪರ್ಕವಾಗಿ ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ಮಾತನಾಡಿ, ಜಿಲ್ಲೆಯಲ್ಲಿ ಗಾಂಜಾ ಮಾರಾಟ ಮತ್ತು ಬೆಳೆ ಬೆಳೆಯುತ್ತಿರುವ ಅಡ್ಡೆ ಮೇಲೆ ದಾಳಿ ಮಾಡಿ ಇದುವರೆಗೂ 50 ಜನ ಆರೋಪಿಗಳನ್ನು ಬಂಧಿಸಿ, 100 ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಎರಡನೇ ಹೆಚ್ಚುವರಿ ನ್ಯಾಯಾಧೀಶ ನರಸಿಂಹಮೂರ್ತಿ, ಒಂದನೇ ಹೆಚ್ಚುವರಿ ನ್ಯಾಯಾಧೀಶ ಅವಿನಾಶ ಘಾಳಿ ಅವರು ಉಪನ್ಯಾಸ ನೀಡಿದರು.

ಜಿಲ್ಲಾ ಸರ್ಕಾರಿ ಅಭಿಯೋಜಕ ಟಿ.ಸುದರ್ಶನ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹರಿಬಾಬು ಇದ್ದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ಎಂ.ಸಿ.ನಾಡಗೌಡ ಸ್ವಾಗತಿಸಿದರು. ಮಾನ್ವಿ ಪೊಲಿಸ್ ಠಾಣೆಯ ಸಿಪಿಐ ದತ್ರಾತ್ರೇಯ ಕರ್ನಾಡ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.