ADVERTISEMENT

ದೇವದುರ್ಗ: ತಾಂಡಾ ನಿವಾಸಿಗಳಿಗಿಲ್ಲ ಶುದ್ಧ ನೀರು

ಯಮುನೇಶ ಗೌಡಗೇರಾ
Published 11 ಡಿಸೆಂಬರ್ 2024, 5:32 IST
Last Updated 11 ಡಿಸೆಂಬರ್ 2024, 5:32 IST
ದೇವದುರ್ಗ ತಾಲ್ಲೂಕಿನ ಸಾಸ್ವಿಗೇರಾ ತಾಂಡಾದಲ್ಲಿ ನಿರ್ಮಿಸಿದ ಶುದ್ಧ ನೀರಿನ ಘಟಕ
ದೇವದುರ್ಗ ತಾಲ್ಲೂಕಿನ ಸಾಸ್ವಿಗೇರಾ ತಾಂಡಾದಲ್ಲಿ ನಿರ್ಮಿಸಿದ ಶುದ್ಧ ನೀರಿನ ಘಟಕ   

ದೇವದುರ್ಗ: ಕೆ.ಇರಬಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಸ್ವಿಗೇರಾ ತಾಂಡಾದಲ್ಲಿ 2018-19ನೇ ಸಾಲಿನ ಸಂಸದರ ಆದರ್ಶ ಗ್ರಾಮ ಯೋಜನೆಯಡಿ ನಿರ್ಮಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕ ನಿರುಪಯುಕ್ತವಾಗಿದೆ. ಸಂಸದರು ಬದಲಾಗಿ ಹೊಸ ಸಂಸದರು ಬಂದರೂ ತಾಂಡಾದ ಜನರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ.

ಕೆ.ಇರಬಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿನನಾಯಕ ತಾಂಡಾ, ಪಿತಾ ನಾಯಕ ತಾಂಡಾ, ಸಾಸ್ವಿಗೇರಾ ತಾಂಡಾ ಮತ್ತು ಮರಡಿ ತಾಂಡಾದ ನಿವಾಸಿಗಳು ಪ್ರತಿ ನಿತ್ಯ 4 ಕಿ.ಮೀ ದೂರದ ಕೋತಿಗುಡ್ಡ ಹಾಗೂ ಸಿರವಾರ ಕ್ರಾಸ್‌ಗೆ ತೆರಳಿ ನೀರು ತರಬೇಕಾದ ಪರಿಸ್ಥಿತಿ ಇದೆ.

ತಾಲ್ಲೂಕು ಕೇಂದ್ರದಿಂದ 7 ಕಿ.ಮೀ ದೂರದಲ್ಲಿರುವ ಈ 4 ತಾಂಡಾಗಳಲ್ಲಿ 1500ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. 800ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ದ್ವಿಚಕ್ರ ವಾಹನ ಇರುವವರು ಪಕ್ಕದ ಗ್ರಾಮಗಳಿಗೆ ತೆರಳಿ ಶುದ್ಧ ಕುಡಿಯುವ ನೀರು ತರುತ್ತಾರೆ. ಬಡವರು, ದ್ವಿಚಕ್ರ ವಾಹನ ಇಲ್ಲದವರು ಗ್ರಾಮದಲ್ಲಿನ ಬೋರ್‌ವೆಲ್ ನೀರು ಮತ್ತು ನಾರಾಯಣಪುರ ಬಲದಂಡೆ ಉಪ ಕಾಲುವೆಯ ನೀರು ಕುಡಿಯುತ್ತಿದ್ದಾರೆ.

ADVERTISEMENT

ನಾಲ್ಕೈದು ವರ್ಷಗಳ ಹಿಂದೆ ನೀರು ತಪಾಸಣೆ ತಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ತಾಂಡಾ ಮತ್ತು ಗ್ರಾಮಳಿಗೆ ಭೇಟಿ ನೀಡಿ ಹಲವು ಕೊಳವೆಬಾವಿಗಳಿಗೆ ಕೆಂಪು ಬಣ್ಣ ಬಳೆದು ಕುಡಿಯಲು ಯೋಗ್ಯವಿಲ್ಲ ಎಂದು ಬರೆದಿದ್ದರು. ಆದರೆ, ಗ್ರಾಮದಲ್ಲಿನ ಜನರಿಗೆ ಕುಡಿಯುವ ನೀರಿಗೆ ಹಾಹಾಕಾರವಿದೆ. ಅನಿವಾರ್ಯವಾಗಿ ಆ ಬೋರ್‌ವೆಲ್‌ಗಳ ನೀರನ್ನೇ ಬಳಸುವ ಸ್ಥಿತಿ ನಿರ್ಮಾಣವಾಗಿದೆ.

ಸದಾ ಅಂತರ್ಜಲ ಕುಸಿತದ ಸಮಸ್ಯೆ ಇರುವ ದೇವದುರ್ಗ ತಾಲ್ಲೂಕಿನ ಕೆಲವು ಗ್ರಾಮಗಳ ಕುಡಿಯುವ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿ ಕಂಡುಬರುತ್ತದೆ. ಬಹುತೇಕ ಜನರ ಹಲ್ಲುಗಳಲ್ಲಿ ಕಲೆ ಕಾಣಿಸಿಕೊಳ್ಳುತ್ತದೆ. ಮೂಳೆ ರೋಗದಿಂದ ಬಳಲುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ನಡೆಸಿದ ಸಮೀಕ್ಷಾ ವರದಿಯಲ್ಲಿ ಸ್ಪಷ್ಟವಾಗಿದೆ.

ಜಲಜೀವನ ಮಿಷನ್‌ ಯೋಜನೆಯಡಿ ಪ್ರತಿ ಮನೆಗೂ ಕುಡಿಯುವ ನೀರು ಒದಗಿಸುವ ಉದ್ದೇಶವಿದೆ. ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಕಾಮಗಾರಿ ಮುಕ್ತಾಯಗೊಂಡು ಎರಡು ವರ್ಷ ಕಳೆದರೂ ನಲ್ಲಿಗಳಲ್ಲಿ ನೀರು ಹರಿಯುತ್ತಿಲ್ಲ.

ಕೆಆರ್‌ಐಡಿಎಲ್‌ನವರು ಘಟಕವನ್ನು ಪಂಚಾಯಿತಿಗೆ ಹಸ್ತಾಂತರಿಸಿದ್ದಾರೆ. ಯಂತ್ರಗಳಲ್ಲಿ ದೋಷ ಹಾಗೂ ಶುದ್ಧ ಘಟಕದ ಶೆಟರ್ ಸಮಸ್ಯೆಯಾಗಿದೆ. ದುರಸ್ತಿಗೊ ಳಿಸಿ ಆರಂಭ ಮಾಡಲು ಸೂಚಿಸುವೆ ಎಂದು ತಾಲ್ಲೂಕು ಪಂಚಾಯಿತಿ ಇಒ ಬಸವರಾಜ ಹಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ವಾರದಲ್ಲಿ ಯಂತ್ರ ಹಾಗೂ ಶೆಟರ್ ದುರಸ್ತಿಗೊಳಿಸಿ ಪ್ರಾರಂಭ ಮಾಡುವಂತೆ ಪಿಡಿಒಗೆ ಸೂಚಿಸುವೆ
ಬಸವರಾಜ ಹಟ್ಟಿ ಇಒ ತಾಲ್ಲೂಕು ಪಂಚಾಯಿತಿ
ಸಂಸದರ ಆದರ್ಶ ಗ್ರಾಮ ಯೋಜನೆ ಇತರೆ ಗ್ರಾಮಗಳಿಗೆ ಆದರ್ಶವಾಗಬೇಕಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಾಲ್ಕು ವರ್ಷ ಕಳೆದರೂ ತಾಂಡಾದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ
ಯಲ್ಲಗೌಡ ಕೆ ಇರಬಗೇರಾ ತಾಲ್ಲೂಕು ಅಧ್ಯಕ್ಷ ಜಯ ಕರ್ನಾಟಕ ಸಂಘಟನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.