ಮಸ್ಕಿ(ರಾಯಚೂರು ಜಿಲ್ಲೆ): ನ್ಯಾಯಾಂಗ ಬಂಧನದಲ್ಲಿದ್ದ ವಿಚಾರಣಾಧೀನ ಕೈದಿಯೊಬ್ಬ ಡಿಎಆರ್ ಪೊಲೀಸರನ್ನು ನೂಕಿ ಪರಾರಿಯಾದ ಘಟನೆ ಗುರುವಾರ ಪಟ್ಟಣದ ಸಿವಿಲ್ ಮತ್ತು ಜೆಎಂಎಫ್‌ಸಿ ಕೋರ್ಟ್ ಆವರಣದ ಮುಂದೆ ನಡೆದಿದೆ.
ದೊಡ್ಡ ದುರಗೇಶ ಪರಾರಿಯಾದ ಕೈದಿ. ಕಳ್ಳತನ ಪ್ರಕರಣವೊಂದರ ವಿಚಾರಣೆಗೆ ಹೋಗಿದ್ದ ಬಳಗಾನೂರು ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧಿತರಾಗಿದ್ದ ದೊಡ್ಡ ದುರಗೇಶ ಹಾಗೂ ಸಣ್ಣ ದುರಗೇಶನನ್ನು 20 ದಿನಗಳ ಹಿಂದೆ ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ನ್ಯಾಯಾಂಗ ಬಂಧನದ ಅವಧಿ ಮುಗಿದಿದ್ದರಿಂದ ಗುರುವಾರ ಕೋರ್ಟ್‌ಗೆ ಹಾಜರುಪಡಿಸಲು ಕರೆ ತರಲಾಗಿತ್ತು. ನ್ಯಾಯಾಧೀಶರು ಆರೋಪಿಗಳ ನ್ಯಾಯಾಂಗ ಬಂಧನವನ್ನು ವಿಸ್ತರಿಸಿ ಆದೇಶಿಸಿದರು.
ಜಿಲ್ಲಾ ಕಾರಾಗೃಹದಿಂದ ದೊಡ್ಡ ದುರಗೇಶನನ್ನು ಐವರು ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸರು ನ್ಯಾಯಾಲಯಕ್ಕೆ ಕರೆತಂದಿದ್ದರು. ನ್ಯಾಯಾಲಯ ಸಭಾಂಗಣದಿಂದ ಹೊರಬಂದ ಬಳಿಕ ದೊಡ್ಡ ದುರಗೇಶ ಪೊಲೀಸರನ್ನು ನೂಕಿ ಜಾಲಿ ಗಿಡಗಳ ನಡುವೆ ಹೋಗಿ ಪರಾರಿಯಾಗಿದ್ದಾನೆ. ಪೊಲೀಸರು ಬೆನ್ನಟ್ಟಿದರೂ ಕೈದಿ ಸಿಗಲಿಲ್ಲ ಎಂದು ತಿಳಿದು ಬಂದಿದೆ.
‘ಕೈದಿ ಪರಾರಿಯಾದ ಪ್ರಕರಣ ಸಂಬಂಧ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಇಲಾಖೆ ಶಿಸ್ತು ಕ್ರಮ ಕೈಗೊಳ್ಳಲಿದೆ. ಈ ಬಗ್ಗೆ ಇಲಾಖೆ ತನಿಖೆ ಆರಂಭವಾಗಿದೆ. ತಪ್ಪಿಸಿಕೊಂಡ ಆರೋಪಿ ದೊಡ್ಡ ದುರಗೇಶನ ಪತ್ತೆಗಾಗಿ ಇಬ್ಬರು ಡಿವೈಎಸ್ಪಿಗಳ ನೇತೃತ್ವದಲ್ಲಿ ನಾಲ್ಕು ತಂಡ ರಚಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.
ಕಳ್ಳತನ ಪ್ರಕರಣದ ವಿಚಾರಣೆಗಾಗಿ ಮಸ್ಕಿ ಪಟ್ಟಣದ ಆರೋಪಿಗಳ ಮನೆ ಬಳಿ 2024ರ ಜನವರಿಯಲ್ಲಿ ತೆರಳಿದ್ದ ಇಬ್ಬರು ಪೊಲೀಸರ ಮೇಲೆ ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಒಂದು ವರ್ಷದ ನಂತರ ಬಳಗಾನೂರು ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.