ಸಿಂಧನೂರು: ‘ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿ ಅಪಾರ ಪ್ರಮಾಣದ ನೀರು ಪೋಲಾಗುತ್ತಿರುವುದಕ್ಕೆ ಅಧಿಕಾರಿಗಳ ನಿಷ್ಕಾಳಜಿಯೇ ಕಾರಣ. ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಸಿಪಿಐಎಂಎಲ್ ರಾಜ್ಯ ಘಟಕದ ಕಾರ್ಯದರ್ಶಿ ಡಿ.ಎಚ್.ಪೂಜಾರ್ ಒತ್ತಾಯಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಈ ವರ್ಷ ಜಲಾಶಯ ಭರ್ತಿಯಾದ ಕಾರಣ ರೈತರು ಎರಡು ಬೆಳೆ ಬೆಳೆಯಬಹುದು ಎನ್ನುವ ಆಶಾಭಾವನೆ ಹೊಂದಿದ್ದರು. ಗೇಟ್ ಕೊಚ್ಚಿ ಹೋಗಿ ನೀರು ಪೋಲಾಗುತ್ತಿರುವುದರಿಂದ ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ಆಂಧ್ರಪ್ರದೇಶ ಮತ್ತು ತೆಲಂಗಾಣದ 12 ಲಕ್ಷ ರೈತರ ನಿರೀಕ್ಷೆ ಬುಡಮೇಲಾಗಿದೆ’ ಎಂದರು.
ಎಲ್ಲ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಕ್ರಿಮಿನಲ್ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಬೇಕು. ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಹೇಳಿದರು.
ಹೈದರಾಬಾದ್‌ನಲ್ಲಿರುವ ತುಂಗಭದ್ರಾ ಮಂಡಳಿಯ ಕೇಂದ್ರ ಕಚೇರಿಯನ್ನು ಮುನಿರಾಬಾದ್‍ಗೆ ಸ್ಥಳಾಂತರಿಸಬೇಕು. ಈ ಕುರಿತು ಶಾಸಕರು, ಸಂಸದರು ಧ್ವನಿ ಎತ್ತಬೇಕು. ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಿಕೊಂಡು ಜಲಾಶಯವನ್ನು ಶಾಶ್ವತವಾಗಿ ದುರಸ್ತಿ ಮಾಡಿಸಬೇಕು. ಜಲಾಶಯದ ನಿರ್ವಹಣೆಗೆ ತಜ್ಞ ಎಂಜಿನಿ ಯರ್‌ಗಳನ್ನು ನಿಯೋಜಿಸಬೇಕು. ಇಲ್ಲದಿದ್ದರೆ ಕಾವೇರಿ ಮಾದರಿ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ಜಿಲ್ಲಾ ಸಮಿತಿ ಸದಸ್ಯರಾದ ರಮೇಶ ಪಾಟೀಲ ಬೇರಿಗಿ, ಚಿಟ್ಟಿಬಾಬು ಬೂದಿಹಾಳ ಕ್ಯಾಂಪ್, ಜಿಲ್ಲಾ ಕಾರ್ಯದಶಿ ಬಿ.ಎನ್.ಯರದಿಹಾಳ, ಸದಸ್ಯೆ ರೇಣುಕಮ್ಮ ಬೂದಿಹಾಳ ಕ್ಯಾಂಪ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.