ಅಮರೇಶ ನಾಯಕ
ಹಟ್ಟಿಚಿನ್ನದ ಗಣಿ: ಇಲ್ಲಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶೌಚಾಲಯ ಇಲ್ಲದೇ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.
ಕಾಲೇಜು ಆರಂಭವಾಗಿ 42 ವರ್ಷಗಳು ಕಳೆದಿವೆ. ಕಲಾ, ವಾಣಿಜ್ಯ, ವಿಜ್ಞಾನ ವಿಭಾಗಗಳಿವೆ. 195ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ.
ಐವರು ಕಾಯಂ ಸಿಬ್ಬಂದಿ, 7 ಜನ ಅತಿಥಿ ಉಪನ್ಯಾಸಕರಿದ್ದಾರೆ. 16 ಕೊಠಡಿಗಳಿದ್ದು, 4 ಮಾತ್ರ ಬಳಕೆ ಯೋಗ್ಯವಾಗಿವೆ.
12 ಕೊಠಡಿಗಳು ಶಿಥಿಲಗೊಂಡು ಕಬ್ಬಿಣದ ಸರಳುಗಳು ಕಾಣುತ್ತಿವೆ. ಬೀಳುವ ಹಂತ ತಲುಪಿವೆ.
ಇಲ್ಲಿನ ಉಪನ್ಯಾಸಕಿಯರಿಗೂ ಶೌಚಾಲಯವಿಲ್ಲ. ನೀರಿನ ಕೊರತೆಯ ಕಾರಣಕ್ಕೆ ಹಳೆ ಶೌಚಾಲಯಕ್ಕೆ ಬೀಗ ಹಾಕಲಾಗಿದೆ. ಕಾಲೇಜಿನಲ್ಲಿ ಕುಡಿಯುವ ನೀರಿನ ವ್ಯವಸ್ಧೆ ಇಲ್ಲ. ಮನೆಯಿಂದ ಬಾಟಲಿನಲ್ಲಿ ನೀರು ತರಬೇಕು. ಇಲ್ಲವಾದರೆ ಸಹಪಾಠಿಗಳ ಹತ್ತಿರ ಕೇಳಿ ನೀರು ಕುಡಿಯಬೇಕಾದ ಸ್ಧಿತಿ ಇದೆ ಎನ್ನುತ್ತಾರೆ ಇಲ್ಲಿನ ವಿದ್ಯಾರ್ಥಿಗಳು.
ಕಾಲೇಜಿನಲ್ಲಿರುವ ಸಮಸ್ಯೆ ಬಗೆಹರಿಸಿ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯ ಒದಗಿಸಬೇಕು ಎಂಬುದು ಪಾಲಕರ ಒತ್ತಾಯವಾಗಿದೆ.
ಕಾಲೇಜಿನ ಹುಡುಗರಿಗೆ ಶೌಚಾಲಯಕ್ಕೆ ಮೈದಾನವೇ ಆಸರೆಯಾಗಿದೆ. ಶೌಚಕ್ಕೆ ಹೊರಗಡೆ ಬಂದು ಅನಾಹುತಗಳು ಜರುಗಿದರೆ ಅದಕ್ಕೆ ಯಾರು ಹೊಣೆ? ಈ ಕಾಲೇಜಿನಲ್ಲಿ ಬಡ ಮಕ್ಕಳು ಮಾತ್ರ ಕಲಿಯುತ್ತಿದ್ದಾರೆ. ಅಧಿಕಾರಿಗಳು ಗಮನಹರಿಸಿ ಸಮಸ್ಯೆ ಬಗೆಹರಿಸಲಿ ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
ಶೌಚಾಲಯ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿದ ಬಳಿಕ ಕಾಮಗಾರಿ ಆರಂಭಿಸಲಾಗುವುದುಕಮಲಾಬಾಯಿ, ಪ್ರಾಚಾರ್ಯೆ ಸರ್ಕಾರಿ ಪಿಯು ಕಾಲೇಜು
ಕಾಲೇಜು ವಿದ್ಯಾರ್ಥಿಗಳಿಗೆ ₹12 ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಾಣಕ್ಕೆ ಆದಷ್ಟು ಬೇಗ ಚಾಲನೆ ನೀಡಲಾಗುವುದುರಮೇಶ ಉಳಿಮೇಶ್ವರ, ಕಾರ್ಯಾಧ್ಯಕ್ಷ, ಕಾಲೇಜು ಉಸ್ತುವಾರಿ ಸಮಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.