ADVERTISEMENT

ಬೆಳಗಾವಿ ಅಧಿವೇಶನ|ಪಾರಂಪರಿಕ ವೈದ್ಯರಿಗೆ ಮಾನ್ಯತೆ ನೀಡಿ: ಮಾನಪ್ಪ ವಜ್ಜಲ್‌ಗೆ ಮನವಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 7:38 IST
Last Updated 23 ನವೆಂಬರ್ 2025, 7:38 IST
ಲಿಂಗಸುಗೂರಿನಲ್ಲಿ ಶಾಸಕ ಮಾನಪ್ಪ ವಜ್ಜಲ್ ಅವರಿಗೆ ಮನವಿ ಸಲ್ಲಿಸಲಾಯಿತು
ಲಿಂಗಸುಗೂರಿನಲ್ಲಿ ಶಾಸಕ ಮಾನಪ್ಪ ವಜ್ಜಲ್ ಅವರಿಗೆ ಮನವಿ ಸಲ್ಲಿಸಲಾಯಿತು   

ಲಿಂಗಸುಗೂರು: ‘ಪಾರಂಪರಿಕ ವೈದ್ಯರಿಗೆ ಮಾನ್ಯತೆ ನೀಡುವಂತೆ ಬೆಳಗಾವಿ ಅಧಿವೇಶನದಲ್ಲಿ ಧ್ವನಿ ಎತ್ತಿ ಸರ್ಕಾರದ ಗಮನ ಸೆಳೆಯಬೇಕು’ ಎಂದು ಒತ್ತಾಯಿಸಿ ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್‌ನ ಪದಾಧಿಕಾರಿಗಳು ಶಾಸಕ ಮಾನಪ್ಪ ವಜ್ಜಲ್ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

‘ಪಾರಂಪರಿಕ ವೈದ್ಯ ಪದ್ಧತಿ ಭಾರತೀಯ ವೈದ್ಯ ಪರಂಪರೆಯ ಮೂಲ ತಳಹದಿಯಾಗಿದೆ. ಪಾರಂಪರಿಕ ವೈದ್ಯರು ತಮ್ಮ ಪೂರ್ವಜರು ಹೇಳಿಕೊಟ್ಟ ನಿರ್ದಿಷ್ಟವಾದ ಒಂದೆರಡು ರೋಗಗಳಿಗೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಗುವ ಗಿಡಮೂಲಿಕೆ ಹಾಗೂ ನಾರು ಬೇರಿನ ಕಷಾಯ ಚೂರ್ಣಗಳಿಂದ ಚಿಕಿತ್ಸೆ ನೀಡುತ್ತಾ ಬಂದಿದ್ದಾರೆ’ ಎಂದರು.

‘ಕೋವಿಡ್‌ ಸಂದರ್ಭದಲ್ಲಿ ಪಾರಂಪರಿಕ ವೈದ್ಯರು ಗ್ರಾಮೀಣ ಭಾಗದಲ್ಲಿ ಉಚಿತವಾಗಿ ಮಾತ್ರೆ ಹಾಗೂ ಕಷಾಯ ವಿತರಣೆ ಮಾಡುವ ಮೂಲಕ ರೋಗದ ತೀವ್ರತೆಯನ್ನು ತಗ್ಗಿಸಿ ರೋಗ ನಿಯಂತ್ರಿಸುವಲ್ಲಿ ಮುಖ್ಯ ಪಾತ್ರವಹಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಪದವಿ ಹೊಂದಿದ ವೈದ್ಯರು ಸೇವೆ ಸಲ್ಲಿಸಲು ಹಿಂದೇಟು ಹಾಕುತ್ತಿರುವ ಸಂದರ್ಭಗಳಲ್ಲಿ ಪಾರಂಪರಿಕ ವೈದ್ಯರುಗಳೇ ಅಲ್ಲಿನ ಜನಗಳಿಗೆ ಗಿಡಮೂಲಿಕೆಗಳ ಉಪಚಾರ ಮಾಡಿ ರೋಗ ಗುಣಪಡಿಸುತ್ತಿದ್ದಾರೆ. ಪಾರಂಪರಿಕ ವೈದ್ಯ ಪದ್ಧತಿಗೆ ಸರ್ಕಾರ ಹಾಗೂ ಸಮಾಜದ ಸಹಕಾರ ಅಗತ್ಯವಾಗಿದೆ. ಈ ವೈದ್ಯ ಪದ್ಧತಿ ಉಳಿಸಲು ವೈದ್ಯರಿಗೆ ಮಾನ್ಯತೆ ನೀಡುವಂತೆ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರವನ್ನು ಒತ್ತಾಯಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ತಿನ ಅಧ್ಯಕ್ಷ ಆನಂದ ಹೇರೂರು, ಕಾರ್ಯದರ್ಶಿ ಕುಮಾರಸ್ವಾಮಿ ಕಸಬಾಲಿಂಗಸುಗೂರು, ತಾಲ್ಲೂಕು ಘಟಕದ ಅಧ್ಯಕ್ಷ ಪರಮನಗೌಡ ಸಹದೇವಪ್ಪ, ರಮೇಶ ಮಟ್ಟೂರ, ಮೌನೇಶ ಉಪ್ಪೇರಿ, ಹನುಮಂತ ಮಟ್ಟೂರು, ದೇವೇಂದ್ರಪ್ಪ ಬಡಿಗೇರ, ಮೌನೇಶ ಬಡಿಗೇರ, ಸುರೇಶ ಮದುಗಲ್, ವಿರೂಪಾಕ್ಷಪ್ಪ, ಹನುಮಂತರಾಯ, ಚೆನ್ನಪ್ಪ ಬೇಡರಕಾರಲಕುಂಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.