ರಾಯಚೂರು: ಜಿಲ್ಲೆಯಲ್ಲಿ ಮಂಗಳವಾರ ಕೆಎಸ್‌ಆರ್‌ಟಿಸಿ ಸಿಬ್ಬಂದಿಯ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶೇ 50ರಷ್ಟು ಬಸ್‌ಗಳು ಮಾತ್ರ ಸಂಚಾರಕ್ಕೆ ಇಳಿದವು. ರಾಯಚೂರಿನ ಕೇಂದ್ರ ಬಸ್ ನಿಲ್ದಾಣ ಸೇರಿದಂತೆ ಜಿಲ್ಲೆಯ ತಾಲ್ಲೂಕು ಕೇಂದ್ರಗಳಲ್ಲಿನ ಬಸ್ ನಿಲ್ದಾಣಗಳಲ್ಲೂ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು.
ಆಂಧ್ರಪ್ರದೇಶ ಹಾಗೂ ತೆಲಂಗಾಣದ ಬಸ್‌ಗಳು ಓಡಾಡಿದರೂ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದ ಕಾರಣ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ನಿಗದಿತ ಸಮಯಕ್ಕೆ ಹೊರಡಲಿಲ್ಲ. ಹೀಗಾಗಿ ದೂರದ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು.
ರಸ್ತೆ ಸಾರಿಗೆ ನೌಕರರ ಮುಷ್ಕರ ಇದೆ ಎಂದು ಮೊದಲೇ ತಿಳಿದ ಕಾರಣ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ನಗರ ಪ್ರದೇಶಕ್ಕೆ ಬಂದಿರಲಿಲ್ಲ. ಪ್ರೌಢಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇತ್ತು. ಮಾರುಕಟ್ಟೆ ಪ್ರದೇಶದಲ್ಲಿ ಜನ ಜಂಗುಳಿ ಕಡಿಮೆ ಇರುವುದು ಕಂಡುಬಂದಿತು.
ಲಿಂಗಸುಗೂರಿನಲ್ಲಿ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ದೂರದ ಊರಿಗೆ ಹೋಗುವ ಪ್ರಯಾಣಿಕರ ಪರದಾಡಿದರು. ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ಓಡಾಟ ಕಂಡುಬಂದಿತು. ಮಾನ್ವಿಯಲ್ಲಿ ಬಸ್ ಸಂಚಾರ ವಿರಳವಾಗಿತ್ತು. ಮಸ್ಕಿಯಲ್ಲಿ ಅಲ್ಲೊಂದು ಇಲ್ಲೊಂದು ಈಶಾನ್ಯ ಸಾರಿಗೆ ಸಂಸ್ಥೆ ಬಸ್‌ಗಳು ಸಂಚರಿಸಿದವು. ಖಾಸಗಿ ಕ್ಯಾಬ್‌ಗಳು ರಸ್ತೆಗೆ ಇಳಿದವು.
ಮುದಗಲ್‌ನಲ್ಲಿ ಬಸ್ ಸಂಚಾರ ಸಂಪೂರ್ಣ ಸ್ತಬ್ಧವಾಗಿತ್ತು. ವಿದ್ಯಾರ್ಥಿಗಳು, ಸರ್ಕಾರಿ, ಖಾಸಗಿ ನೌಕರರು ಬಸ್ಸಿಗಾಗಿ ಪರದಾಟಬೇಕಾಯಿತು.
ಸಾರಿಗೆ ನೌಕರರು ಮುಷ್ಕರಕ್ಕೆ ತೆರಳುತ್ತಿರುವ ವಿಷಯ ಮೊದಲೇ ತಿಳಿದ ಕಾರಣ ದ್ವಿಚಕ್ರವಾಹನದಲ್ಲಿ ಕಾಲೇಜಿಗೆ ಬಂದಿದ್ದೇವು ಎಂದು ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಕ್ರಿಯಿಸಿದರು.
ಸಿಂಧನೂರಿನಲ್ಲಿ ಮುಷ್ಕರದ ಬಿಸಿ: ಪ್ರಯಾಣಿಕರ ಪರದಾಟ
ರಾಜ್ಯ ಸಾರಿಗೆ ನಿಗಮಗಳ ನೌಕರರ ಸಂಘಟನೆ ಕರೆ ನೀಡಿದ ಮುಷ್ಕರಕ್ಕೆ ಸಿಂಧನೂರಿನಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಯಿತು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಬಸ್‌ಗಳು ಚಲಿಸಲಿಲ್ಲ ಹೀಗಾಗಿ ಪ್ರಯಾಣಿಕರು ಪರದಾಡಿದರು. ಸಾರಿಗೆ ಘಟಕ ಹಾಗೂ ಬಸ್ ನಿಲ್ದಾಣದಲ್ಲಿ ಬಸ್‌ಗಳನ್ನು ಸಾಲುಗಟ್ಟಿನಿಲ್ಲಿಸಲಾಗಿತ್ತು. ಸಾರಿಗೆ ಸಂಸ್ಥೆಯ ಕಾಯಂ ನೌಕರರು ಕರ್ತವ್ಯಕ್ಕೆ ಹಾಜರಾಗಲಿಲ್ಲ. ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡ ನೌಕರರು ಕರ್ತವ್ಯ ನಿರ್ವಹಿಸಿದರು.
ಸೆಪ್ಟೆಂಬರ್ 4ರಂದು ಕರ್ತವ್ಯ ನಿರ್ವಹಿಸಿದ ಕಂಡಕ್ಟರ್ ಮತ್ತು ಚಾಲಕರನ್ನು ಈ ದಿನವೂ ಒತ್ತಾಯಪೂರ್ವಕವಾಗಿ ಕರ್ತವ್ಯ ನಿರ್ವಹಿಸುವಂತೆ ಮಾಡಿದ್ದಾರೆ ಎಂದು ಬಸ್ ನಿರ್ವಾಹಕರೊಬ್ಬರು ತಮ್ಮ ಅಳಲು ತೋಡಿಕೊಂಡರು.
ಬಸ್ ನಿಲ್ದಾಣದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ | ಬಸ್ ನಿಲ್ದಾಣ ಬಳಿ ವ್ಯಾಪಾರ ವಹಿವಾಟು ಸ್ಥಗಿತ | ಶಕ್ತಿ ಯೋಜನೆಗಳ ಫಲಾನುಭವಿಗಳು ಕಾಣಸಿಗಲಿಲ್ಲ
ದೇವದುರ್ಗ ಘಟಕದ 34 ಬಸ್‌ಗಳು ಓಡಾಡುತ್ತಿದ್ದವು. ಮುಷ್ಕರ ಹಿನ್ನೆಲೆಯಲ್ಲಿ ಬೆಳಿಗ್ಗೆ ಕೇವಲ 9 ಬಸ್‌ಗಳು ಸಂಚರಿಸಿದವುರಾಮನಗೌಡ ದೇವದುರ್ಗ ಘಟಕ ವ್ಯವಸ್ಥಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.