ADVERTISEMENT

ಮಂತ್ರಾಲಯದಲ್ಲಿ ಪುಷ್ಕರ ಪುಣ್ಯ ಸ್ನಾನಕ್ಕೆ ತಡೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2020, 9:15 IST
Last Updated 21 ನವೆಂಬರ್ 2020, 9:15 IST
ಪುಷ್ಕರ ಪುಣ್ಯ ಸ್ನಾನ ಮಾಡುವ ಸ್ಥಳದಲ್ಲಿ ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಪುಷ್ಕರ ಪುಣ್ಯ ಸ್ನಾನ ಮಾಡುವ ಸ್ಥಳದಲ್ಲಿ ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.    

ರಾಯಚೂರು: ಮಂತ್ರಾಲಯದ ಬಳಿ ತುಂಗಭದ್ರಾ ಪುಷ್ಕರ ಪುಣ್ಯ ಸ್ನಾನ ಮಾಡುವುದನ್ನು ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯ ಪೊಲೀಸರು ಶನಿವಾರದಿಂದ ತಡೆ ಒಡ್ಡಿದ್ದಾರೆ.

ಕೋವಿಡ್‌ –19 ತಡೆ ಮುನ್ನಚ್ಚೆರಿಕೆ ಕ್ರಮಗಳನ್ನು ಪಾಲನೆ ಮಾಡುವಂತೆ ಜಿಲ್ಲಾಡಳಿತದಿಂದ ಸೂಚಿಸಲಾಗಿದೆ. ಪುಷ್ಕರ ಸ್ನಾನದ ಮಾಡುವಾಗ ನಿಯಮ ಪಾಲನೆ ಆಗುವುದಿಲ್ಲ ಎನ್ನುವುದನ್ನು ಅರಿತು, ನದಿತಟದತ್ತ ಜನರು ಹೋಗುವುದನ್ನು ಪೊಲೀಸರು ಸಂಪೂರ್ಣ ಸ್ಥಗಿತ ಮಾಡಿದ್ದಾರೆ.

ಪುಷ್ಕರ ಸ್ನಾನ ಆರಂಭದ ದಿನದಂದು ಶುಕ್ರವಾರ ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ನದಿಯಲ್ಲಿ ಮಿಂದು, ಕಳಸ ಪೂಜೆ ನೆರವೇರಿಸಿ ಸ್ನಾನಕ್ಕೆ ಚಾಲನೆ ನೀಡಿದ್ದರು. ಮೊದಲ ದಿನವೇ ಜನರು ಕೋವಿಡ್‌ ನಿಯಮ ಪಾಲನೆ ಮಾಡದೆ ನದಿಗೆ ಇಳಿದಿದ್ದರು.

ADVERTISEMENT

ವಾರಾಂತ್ಯ ಶನಿವಾರ ಮತ್ತು ಭಾನುವಾರ ಭಾರಿ ಸಂಖ್ಯೆಯಲ್ಲಿ ಜನರು ಮಂತ್ರಾಲಯ ಬರುವ ನಿರೀಕ್ಷೆ ಇದೆ.

ಇದೀಗ ಪುಷ್ಕರಸ್ನಾನಕ್ಕೆ ಅವಕಾಶ ಇಲ್ಲದಿರುವುದಕ್ಕೆ ಭಕ್ತರು ನಿರಾಸೆ ಅನುಭವಿಸುವಂತಾಗಿದೆ. ಶ್ರಾದ್ಧಪೂಜೆ, ಪಿಂಡಪ್ರದಾನ, ತರ್ಪಣ ಬಿಡುವುದು ಸೇರಿದಂತೆ ವಿವಿಧ ಧಾರ್ಮಿಕ ಕ್ರಿಯೆಗಳನ್ನು ನೆರವೇರಿಸಲು ಪುಷ್ಕರದ ದಿನಗಳು ವಿಶೇಷವಾಗಿರುತ್ತವೆ ಎನ್ನುವುದು ನಂಬಿಕೆ.
ಎಂದಿನಂತೆ ಸರದಿಯಲ್ಲಿ ಅಂತರ ಪಾಲನೆಯೊಂದಿಗೆ ರಾಯರ ದರ್ಶನ ಮಾಡುವುದಕ್ಕೆ ಜನರಿಗೆ ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.