ADVERTISEMENT

ವಿವಿಧ ಬೇಡಿಕೆ ಈಡೇರಿಸಲು ಒತ್ತಾಯ

ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2019, 13:32 IST
Last Updated 10 ಜುಲೈ 2019, 13:32 IST
ರಾಯಚೂರಿನಲ್ಲಿ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಸದಸ್ಯರು ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಬುಧವಾರ ಪ್ರತಿಭಟನೆ ನಡೆಸಿದರು
ರಾಯಚೂರಿನಲ್ಲಿ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಸದಸ್ಯರು ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಬುಧವಾರ ಪ್ರತಿಭಟನೆ ನಡೆಸಿದರು   

ರಾಯಚೂರು: ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಪ್ರಾರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಸದಸ್ಯರು ನಗರದ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಬಾಕಿ ಗೌರವಧನ, ಕೋಳಿಮೊಟ್ಟೆ ಹಾಗೂ ತರಕಾರಿ ಹಣ ಬಿಡುಗಡೆ ಮಾಡಬೇಕು. ಕೇಂದ್ರ ಸರ್ಕಾರದಿಂದ 2018ರ ಅಕ್ಟೋಬರ್‌ನಲ್ಲಿ ಹೆಚ್ಚಳವಾದ ಗೌರವಧನ ಬಿಡುಗಡೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದರು.

ನಿವೃತ್ತಿ ಸೌಲಭ್ಯವನ್ನು ಬದಲಾಯಿಸಿ ಎಲ್‌ಐಸಿ ಆಧಾರಿತ ಪಿಂಚಣಿ ನೀಡಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರಿಗೆ ನೀಡುವ ಎನ್‌ಪಿಎಸ್‌ ಮಾನದಂಡಗಳನ್ನು ಅನುಸರಿಸಬೇಕು. ನಿವೃತ್ತಿಯಾದ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಇಡಿಗಂಟು ತ್ವರಿತವಾಗಿ ಬಿಡುಗಡೆ ಮಾಡಬೇಕು. ಜೇಷ್ಠತೆ ಆಧಾರದ ಮೇಲೆ ಕನಿಷ್ಠ ವೇತನ ಜಾರಿಗೊಳಿಸಬೇಕು. ಆಂಧ್ರಪ್ರದೇಶ, ತಮಿಳುನಾಡು, ಹರಿಯಾಣ, ತೆಲಂಗಾಣ, ಗೋವಾ, ಪಾಂಡಿಚೇರಿ ಹಾಗೂ ಕೇರಳ ರಾಜ್ಯದಲ್ಲಿ ₹11 ರಿಂದ 12 ಸಾವಿರಕ್ಕೆ ವೇತನ ಹೆಚ್ಚಳ ಮಾಡಲಾಗಿದ್ದು, ರಾಜ್ಯದಲ್ಲಿಯೂ ಗೌರವಧನ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಮಾತೃಪೂರ್ಣ ಯೋಜನೆಯ ಜಾರಿ ನಂತರ ಸಹಾಯಕಿಯರ ಕೆಲಸ ದುಪ್ಪಟ್ಟುಗೊಂಡಿರುವುದರಿಂದ ಕಾರ್ಯಕರ್ತೆಯರಿಗೆ ನೀಡುವ ಗೌರವಧನ ಶೇ 75 ರಷ್ಟು ನೀಡಬೇಕು. ರಾಜ್ಯದ ಮಾನವ ಸಂಪನ್ಮೂಲ ಬೆಳವಣಿಗೆಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವ ಐಸಿಡಿಎಸ್‌ ಯೋಜನೆ ಬಲಪಡಿಸಬೇಕು ಎಂದು ಆಗ್ರಹಿಸಿದರು.

ಲಿಂಗಸುಗೂರು ತಾಲ್ಲೂಕಿನಲ್ಲಿ 15 ಅಂಗನವಾಡಿ ಕಾರ್ಯಕರ್ತೆ ಸಹಾಯಕಿ ಹುದ್ದೆಗಳು ಖಾಲಿಯಿದ್ದು, ದೇವದುರ್ಗದಲ್ಲಿ 18, ರಾಯಚೂರಿನಲ್ಲಿ 20 ಹುದ್ದೆಗಳು ಖಾಲಿಯಿವೆ. ಜಿಲ್ಲೆಯಲ್ಲಿ ಖಾಲಿಯಿರುವ 50ಕ್ಕೂ ಅಧಿಕ ಹುದ್ದೆಗಳನ್ನು ತುಂಬಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಪೂರ್ಣ ಪ್ರಮಾಣದ ಮಾತೃ ಇಲಾಖೆಯ ಉಪನಿರ್ದೇಶಕರನ್ನು ನೇಮಿಸಬೇಕು ಎಂದರು.

ವಾರಕ್ಕೊಮ್ಮೆ ಕೇಂದ್ರಗಳಿಗೆ ಮೊಟ್ಟೆಗಳನ್ನು ಪೂರೈಸಬೇಕು. ನಿಗದಿತ ಸಮಯಕ್ಕೆ ಗ್ಯಾಸ್‌ ಪೂರೈಕೆ ಮಾಡಬೇಕು. ಲಿಂಗಸುಗೂರಲ್ಲಿ 6, ದೇವದುರ್ಗದಲ್ಲಿ 10 ಹಾಗೂ ರಾಯಚೂರಿನಲ್ಲಿ 10 ನೌಕರರು ಮರಣ ಹೊಂದಿದ್ದು, ಕುಟುಂಬದವರಿಗೆ ತ್ವರಿತವಾಗಿ ಪರಿಹಾರ ಹಣ ಮಂಜೂರು ಮಾಡಬೇಕು. ಲಿಂಗಸುಗೂರು ತಾಲ್ಲೂಕಿನಲ್ಲಿ 6ಜನ ಮರಣದ ಸಂದರ್ಭದಲ್ಲಿ ಶವಸಂಸ್ಕಾರಕ್ಕೆ ನೀಡಬೇಕಾದ ತಲಾ ₨5 ಸಾವಿರ ಹಣ ನೀಡಿಲ್ಲ. ತ್ವರಿತವಾಗಿ ನೀಡಬೇಕು ಎಂದು ಆಗ್ರಹಿಸಿದರು.

ಲಿಂಗಸುಗೂರು ತಾಲ್ಲೂಕಿನಲ್ಲಿ ಎರಡ್ಮೂರು ವರ್ಷಗಳಿಂದ ಖಾಲಿಯಿರುವ 40ಕ್ಕೂ ಅಧಿಕ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಬೇಕು. ಸಿಡಿಪಿಒ ಕಚೇರಿಯಲ್ಲಿ ಅವಶ್ಯಕತೆಗೆ ಅನುಗುಣವಾಗಿ ಸಿಬ್ಬಂದಿ ಇಲ್ಲದ ಪರಿಣಾಮ ನಿಧಾನಗತಿಯಲ್ಲಿ ಕೆಲಸಗಳು ನಡೆಯುತ್ತಿದ್ದು, ಅಗತ್ಯ ಸಿಬ್ಬಂದಿ ಒದಗಿಸಬೇಕು. 2016ರಲ್ಲಿ ಮರಣ ಹೊಂದಿದ ಕಾರ್ಯಕರ್ತೆಯ ಪುತ್ರಿ ಅನುಕಂಪದ ಆಧಾರದಲ್ಲಿ ಬ್ರೇಸ್ತವಾರಪೇಟೆಯ ಪಿಂಜರವಾಡಿ ಕೇಂದ್ರದ ಹುದ್ದೆಗೆ ಅರ್ಜಿ ಸಲ್ಲಿಸಿದ್ದು, ಪರಿಶೀಲನೆ ನಡೆಸಿ ನಿಯೋಝನೆ ಮಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷೆ ಎಚ್.ಪದ್ಮಾ, ಕಾರ್ಯದರ್ಶಿ ರಂಗಮ್ಮ ಅನ್ವರ, ತಾಲ್ಲೂಕು ಕಾರ್ಯದರ್ಶಿ ಡಿ.ಎಸ್.ಶರಣಬಸವ, ಕೆಪಿಆರ್ಎಸ್‌ ಜಿಲ್ಲಾ ಕಾರ್ಯದರ್ಶಿ ಕೆ.ಜಿ.ವೀರೇಶ, ಕೂಲಿಕಾರರ ಸಂಘದ ಅಧ್ಯಕ್ಷ ಕರಿಯಪ್ಪ ಅಚ್ಚೊಳ್ಳಿ, ಗಿರಿಯಪ್ಪ, ಜಿಲಾನಿಪಾಷ, ಪಾರ್ವತಿ ಮನ್ಸಲಾಪುರ, ನಗನೂರು ಲಕ್ಷ್ಮೀ, ಮಹೇಶ್ವರಿ, ರಮಾ, ಸುಜಾತ, ಮರಿಯಮ್ಮ, ರಾಜೇಶ್ವರಿ, ಜಾನಿಕಮ್ಮ, ವರಲಕ್ಷ್ಮೀ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.