ರಾಯಚೂರಿನ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಿದ ಗ್ರಾಹಕರು
-ಪ್ರಜಾವಾಣಿ ಚಿತ್ರ; ಶ್ರೀನಿವಾಸ ಇನಾಮದಾರ್
ರಾಯಚೂರು: ಮಾಗಿಯ ಚಳಿ ವಾತಾವರಣವನ್ನೇ ತಂಪುಗೊಳಿಸಿದೆ. ಬಿಸಿಲ ಧಗೆ ಇಲ್ಲದ ಕಾರಣ ತರಕಾರಿಗಳು ಬೇಗ ಬಾಡುತ್ತಿಲ್ಲ. ತರಕಾರಿ ಸುಲಭವಾಗಿ ದೊರೆಯುತ್ತಿರುವ ಕಾರಣ ದರವೂ ಕೊಂಚ ಕಡಿಮೆಯಾಗಿದೆ.
ಈರುಳ್ಳಿ, ಬೀಟ್‌ರೂಟ್, ಟೊಮೆಟೊ ಬೆಲೆ ಸ್ಥಿರವಾಗಿದೆ. ಸಬ್ಬಸಗಿ, ಕರಿಬೇವು, ಮೆಂತೆ, ಕೊತಂಬರಿ, ಪಾಲಕ ಮೊದಲಾದ ಸೊಪ್ಪಿನ ದರಗಳಲ್ಲೂ ಬದಲಾವಣೆ ಆಗಿಲ್ಲ.
ಬೆಳ್ಳುಳ್ಳಿ, ಆಲೂಗಡ್ಡೆ, ಗಜ್ಜರಿ, ಮೆಣಸಿನಕಾಯಿ, ಎಲೆಕೋಸು, ಹೂಕೋಸು, ಬೀನ್ಸ್, ಹಿರೇಕಾಯಿ, ಬೆಂಡೆಕಾಯಿ, ತೊಂಡೆಕಾಯಿ, ಡೊಣಮೆಣಸಿನಕಾಯಿ, ತುಪ್ಪದ ಹಿರೇಕಾಯಿ, ಚವಳೆಕಾಯಿ, ಸೌತೆಕಾಯಿ ದರ ಕೊಂಚ ಕಡಿಮೆಯಾಗಿದೆ. ಗ್ರಾಹಕರ ಅಚ್ಚುಮೆಚ್ಚಿನ ತರಕಾರಿ ಕೈಗೆಟಕುವ ಬೆಲೆಯಲ್ಲಿ ದೊರಕುತ್ತಿವೆ.
ಕಾರ್ತಿಕ ಅಮಾವಾಸ್ಯೆ ಪ್ರಯುಕ್ತ ಹಲವೆಡೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ
ಬದನೆಕಾಯಿ ಹಾಗೂ ನುಗ್ಗೆಕಾಯಿ ದರ ಮಾತ್ರ ದುಪ್ಪಟ್ಟಾಗಿದೆ. ಚಳಿಯಲ್ಲಿ ದೇಹದ ಉಷ್ಣಾಂಶ ಕಾಪಾಡಿಕೊಳ್ಳಲು ಗ್ರಾಹಕರು ನುಗ್ಗೆಕಾಯಿಯನ್ನು ಹುಡುಕಿ–ಹುಡುಕಿ ಖರೀದಿಸುತ್ತಿದ್ದಾರೆ. ಹೀಗಾಗಿ ಅದರ ದರ ಹೆಚ್ಚಳವಾಗಿದೆ.
ಬೆಳಗಾವಿ ಜಿಲ್ಲೆಯಿಂದ ಹಸಿ ಮೆಣಸಿನಕಾಯಿ, ಕೊತಂಬರಿ, ಮೆಂತೆ ಸೊಪ್ಪು, ಗೆಣಸು ಇಲ್ಲಿಯ ತರಕಾರಿ ಸಗಟು ಮಾರುಕಟ್ಟೆಗೆ ಬಂದಿದೆ. ಆಂಧ್ರಪ್ರದೇಶ ಹಾಗೂ ತೆಲಂಗಾಣದ ಜಿಲ್ಲೆಗಳಿಂದ ರಾಯಚೂರು ಮಾರುಕಟ್ಟೆಗೆ ಬದನೆಕಾಯಿ, ಹಿರೇಕಾಯಿ, ಗಜ್ಜರಿ, ಅವರೆಕಾಯಿ, ಸೋರೆಕಾಯಿ, ಸೌತೆಕಾಯಿ, ಎಲೆಕೋಸು, ಹೂಕೋಸು, ನಾಸಿಕ್‌ನಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಆವಕವಾಗಿದೆ.
‘ಬೆಳಗಾವಿ, ಹೈದರಾಬಾದ್‌ನಿಂದ ಹೆಚ್ಚಿನ ತರಕಾರಿ ಬಂದಿದೆ. ಜಿಲ್ಲೆಯ ವಿವಿಧೆಡೆಯಿಂದ ಸ್ವಲ್ಪ ಮಟ್ಟಿಗೆ ತರಕಾರಿ ಮಾರುಕಟ್ಟೆಗೆ ಬಂದಿದೆ. ಈ ವಾರವೂ ಬೆಳ್ಳುಳ್ಳಿ, ನುಗ್ಗೆಕಾಯಿ ಬಿಟ್ಟರೆ ಉಳಿದ ತರಕಾರಿ ಗ್ರಾಹಕರ ಕೈಗೆಟುವ ಬೆಲೆಯಲ್ಲಿ ದೊರೆಯುತ್ತಿವೆ’ ಎಂದು ತರಕಾರಿ ವ್ಯಾಪಾರಿ ಕೆ.ಶಶಿಕುಮಾರ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.