ರಾಯಚೂರು: ರಾಜ್ಯದಲ್ಲಿ ವಾಹನ ಖರೀದಿ ಮೇಲಿನ ಅಧಿಕ ಶುಲ್ಕದಿಂದ ತಪ್ಪಿಸಿಕೊಳ್ಳಲು ಪುದುಚೇರಿಯಲ್ಲಿ ವಾಹನ ಖರೀದಿಸಿರುವ ಮಾಲೀಕರ ವಾಹನಗಳ ಮೇಲೆ ಪ್ರಾದೇಶಿಕ ಸಾರಿಗೆ ಇಲಾಖೆ ಹದ್ದಿನ ಕಣ್ಣು ಇಟ್ಟಿದೆ. ಕಳೆದ ಒಂದು ವಾರದಲ್ಲೇ ಕಲಬುರಗಿ ವಿಭಾಗದಲ್ಲಿ 54 ಐಶಾರಾಮಿ ವಾಹನಗಳನ್ನು ವಶಕ್ಕೆ ಪಡೆದಿದೆ.
ಆರ್‌ಟಿಒ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ದು, ಬೀದರ್ ಜಿಲ್ಲೆಯಲ್ಲಿ 28 ವಾಹನಗಳು, ಕಲಬುರಗಿ ಜಿಲ್ಲೆಯಲ್ಲಿ 16, ರಾಯಚೂರು ಜಿಲ್ಲೆಯಲ್ಲಿ ಮೂರು ಐಷಾರಾಮಿ ಕಾರುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ವಾಹನದ ಖರೀದಿ ದಾಖಲೆ, ಪುದುಚೇರಿಯಲ್ಲೇ ವಾಸವಾಗಿರುವ ದಾಖಲೆ ಹಾಗೂ ಕರ್ನಾಟಕದಲ್ಲಿ ವಾಸವಾಗಿರುವ ದಾಖಲೆಗಳನ್ನೂ ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ.
ವಾಹನ ಖರೀದಿ ಮೇಲಿನ ತೆರಿಗೆ ಉಳಿಸಲು ಪುದುಚೇರಿಯ ನಕಲಿ ವಿಳಾಸ ನೀಡಿದ್ದವರು ಈಗ ಪೇಚಿಗೆ ಸಿಲುಕಿದ್ದಾರೆ. ಆರ್‌ಟಿಇಒ ಅಧಿಕಾರಿಗಳು ಆಧಾರ್, ಡ್ರೈವಿಂಗ್ ಲೈಸೆನ್ಸ್ ಹಾಗೂ ಪುದುಚೇರಿಯಲ್ಲಿ ನಿಜವಾಗಿಯೂ ವ್ಯವಹಾರ ನಡೆಸುತ್ತಿದ್ದರೆ ಅದರ ದಾಖಲೆ ಪರಿಶೀಲಿಸುತ್ತಿರುವ ಕಾರಣ ಮಾಲೀಕರು ಕರ್ನಾಟಕ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ಶುಲ್ಕ ಕಟ್ಟುವುದು ಅನಿವಾರ್ಯವಾಗಿದೆ.
ರಾಜ್ಯದಲ್ಲಿ ₹ 10 ಲಕ್ಷ ಬೆಲೆಯ ಹೊಸ ಕಾರಿಗೆ ₹ 1.80 ಲಕ್ಷ ತೆರಿಗೆ ಹಾಗೂ ₹ 20 ಲಕ್ಷದ ಕಾರಿಗೆ ₹3.60 ಲಕ್ಷ ತೆರಿಗೆ ಪಾವತಿಸಬೇಕಾಗಲಿದೆ. ಒಂದು ವೇಳೆ ಪುದುಚೇರಿಯಲ್ಲಿ ಎರಡು ವರ್ಷ ಬಳಸಿ ಅದೇ ಕಾರನ್ನು ಕರ್ನಾಟಕಕ್ಕೆ ತಂದು ಒಂದು ವರ್ಷದಿಂದ ಇಲ್ಲಿಯೇ ಓಡಾಡಿಸುತ್ತಿದ್ದರೂ ಪ್ರಸಕ್ತ ವರ್ಷದ ವಾಹನದ ಮೌಲ್ಯ ಆಧರಿಸಿ ತೆರಿಗೆ ಕಟ್ಟಿಸಿಕೊಳ್ಳುವ ಕಾರ್ಯಾಚರಣೆ ಶುರುವಾಗಿದೆ.
‘ಕಲ್ಯಾಣ ಕರ್ನಾಟಕದಲ್ಲಿ ಕಲಬುರಗಿ ಹಾಗೂ ಬೀದರ್ ಜಿಲ್ಲೆಯಲ್ಲಿ ಪುದುಚೇರಿಯಲ್ಲಿ ನೋಂದಾಯಿಸಿದ ಕಾರುಗಳ ಸಂಖ್ಯೆ ಅಧಿಕ ಇವೆ. ಸರ್ಕಾರಕ್ಕೆ ತೆರಿಗೆ ವಂಚನೆ ಮಾಡುವಲ್ಲಿ ರಾಜಕಾರಣಿಗಳು ಮುಂಚೂಣಿಯಲ್ಲಿದ್ದಾರೆ’ ಎನ್ನುತ್ತಾರೆ ಬೀದರ್‌ನ ಆರ್‌ಟಿಒ ಕಚೇರಿಯ ಅಧಿಕಾರಿಗಳು.
ಕಲಬುರಗಿಯಲ್ಲಿ 16 ಕಾರುಗಳ ಮಾಲೀಕರಿಂದ ದಂಡ ರೂಪದಲ್ಲಿ ತೆರಿಗೆ ವಸೂಲಿ ಮಾಡಲಾಗಿದೆ. ಬೀದರ್‌ನಲ್ಲಿ 11 ಹಾಗೂ ರಾಯಚೂರಿನಲ್ಲಿ ಮೂರು ವಾಹನಗಳನ್ನು ವಶಪಡಿಸಿಕೊಂಡು ಮಾಲೀಕರಿಗೆ ನೋಟಿಸ್ ಕೊಡಲಾಗಿದೆ.
ತೆಲಂಗಾಣ, ಆಂಧ್ರಪ್ರದೇಶದ ವಾಹನಗಳು ಸದ್ಯ ನಿರಾಳ ನೆರೆ ರಾಜ್ಯದ ವಾಹನ ಮಾಲೀಕರಿಗೆ ಸದ್ಯಕ್ಕಿಲ್ಲ ಸಮಸ್ಯೆ ತೆರಿಗೆ ಸಂಗ್ರಹ ಹೆಚ್ಚಿಸಲು ರಾಜ್ಯ ಸರ್ಕಾರದಿಂದ ದಿಟ್ಟ ಕ್ರಮ
ಚೆಕ್‌ಪೋಸ್ಟ್‌ನಿಂದ ಮಾಹಿತಿ
ಕಾರು ಖರೀದಿ ವೇಳೆ ಕೆಲವರು ಪಾಂಡಿಚೇರಿಯ ನಕಲಿ ವಿಳಾಸ ಕೊಟ್ಟಿದ್ದಾರೆ. ಮಾಲೀಕರ ಆಧಾರ್ ಬ್ಯಾಂಕ್ ಖಾತೆ ರಹವಾಸಿ ಪತ್ರಗಳು ಎಲ್ಲವೂ ಕರ್ನಾಟಕದ್ದೇ ಆಗಿರುವ ಕಾರಣ ತೆರಿಗೆ ವಂಚಕರು ಸುಲಭವಾಗಿ ಆರ್‌ಟಿಇ ಅಧಿಕಾರಿಗಳ ಕೈಗೆ ಸಿಕ್ಕಿಕೊಳ್ಳುತ್ತಿದ್ದಾರೆ. ಆರ್‌ಟಿಒ ಚೆಕ್‌ಪೋಸ್ಟ್‌ನಲ್ಲಿ ಸಂಚರಿಸಿದ ತಕ್ಷಣ ನಂಬರ್ ಸ್ಕ್ಯಾನ್ ಮಾಡಿ ನೋಡಲಾಗುತ್ತಿದೆ. ಅದರಲ್ಲಿ ವಾಹನದ ಜನ್ಮಜಾತಕವೇ ಕಾಣಸಿಗುತ್ತಿದೆ. ಮಾಲೀಕರು ಕೊಡುವ ಪಾಂಡಿಚೇರಿಯಲ್ಲಿನ ವಾಸದ ದಾಖಲೆ ಹಾಗೂ ಕರ್ನಾಟಕದಲ್ಲಿರುವ ವಾಸ ದಾಖಲೆಗಳಿಗೂ ತಾಳೆಯಾಗುತ್ತಿಲ್ಲ. ಹೀಗಾಗಿ ಮಾಲೀಕರಿಂದ ತೆರಿಗೆ ಕಟ್ಟಿಸಿಕೊಳ್ಳಲಾಗುತ್ತಿದೆ.
ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ
ಪಾಂಡಿಚೇರಿಯಲ್ಲಿ ಕಾರು ಖರೀದಿಸಿದವರು ಆರ್‌ಟಿಒ ಸಿಬ್ಬಂದಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಕಾರಣ ಗಡಿಯಲ್ಲಿರುವ ಆರ್‌ಟಿಒ ಚೆಕ್‌ಪೋಸ್ಟ್‌ಗಳಲ್ಲಿ ಕಾರುಗಳು ಸಂಚರಿಸಿದ ಅವಧಿಯಲ್ಲಿ ನೋಂದಣಿ ದಾಖಲು ಮಾಡಲಾಗುತ್ತಿದೆ. ಟೋಲ್ ಕೇಂದ್ರಗಳಲ್ಲೂ ಇವುಗಳ ಮೇಲೆ ನಿಗಾ ಇಡಲಾಗಿದೆ. ಪಾಂಡಿಚೇರಿಯಲ್ಲಿ ಖರೀದಿಸಿದ ಕಾರು ಕರ್ನಾಟಕ ಪ್ರವೇಶಿಸಿದ ತಕ್ಷಣ ಟೋಲ್‌ಗೇಟ್‌ನಲ್ಲಿ ಮೊಬೈಲ್‌ಗೆ ಮೆಸೇಜ್ ಬರುತ್ತದೆ. ಮರಳಿ ಹೋದರೂ ಮೆಸೇಜ್ ಬರುತ್ತದೆ. ಹೀಗಾಗಿ ಒಂದು ಕಾರು ಯಾವಾಗಿನಿಂದ ರಾಜ್ಯದಲ್ಲಿ ಸುತ್ತಾಡುತ್ತಿದೆ ಎಂಬ ದಾಖಲೆಗಳು ಸಿಗುತ್ತಿವೆ. ಆರ್‌ಟಿಒ ಅಧಿಕಾರಿಗಳು ಮೊಬೈಲ್ ಮೆಸೇಜ್‌ಗಳನ್ನು ಪರಿಶೀಲಿಸುತ್ತಿರುವ ಕಾರಣ ಇಲಾಖೆ ಬೀಸಿರುವ ಚಕ್ರವ್ಯೂಹದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.