ADVERTISEMENT

‘ಶಿಕ್ಷಣವೇ ಮಹಿಳೆಯರ ಪಾಲಿನ ಪ್ರಗತಿಯ ದಾರಿ’ : ಡಾ.ನಾಗಲಕ್ಷ್ಮಿ ಚೌಧರಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 5:29 IST
Last Updated 19 ಸೆಪ್ಟೆಂಬರ್ 2025, 5:29 IST
ರಾಯಚೂರಿನ ಎಸ್‌ಎಸ್‌ಆರ್‌ಜಿ ಮಹಿಳಾ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗ ನಡೆಸಿದ ಪಿಯು ಹಾಗೂ ಪದವಿ ವಿದ್ಯಾರ್ಥಿನಿಯರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯೊಬ್ಬರು ಮಾತನಾಡಿದರು
ರಾಯಚೂರಿನ ಎಸ್‌ಎಸ್‌ಆರ್‌ಜಿ ಮಹಿಳಾ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗ ನಡೆಸಿದ ಪಿಯು ಹಾಗೂ ಪದವಿ ವಿದ್ಯಾರ್ಥಿನಿಯರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯೊಬ್ಬರು ಮಾತನಾಡಿದರು   

ರಾಯಚೂರು: ‘ಮಹಿಳೆಗೂ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಇದೆ. ಶಿಕ್ಷಣವೇ ಮಹಿಳೆಯರ ಪಾಲಿನ ಪ್ರಗತಿಯ ದಾರಿ. ’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ನಗರದ ಎಸ್‌ಎಸ್‌ಆರ್‌ಜಿ ಮಹಿಳಾ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಿಯು ಹಾಗೂ ಪದವಿ ವಿದ್ಯಾರ್ಥಿನಿಯರೊಂದಿಗಿನ ಸಂವಾದ ನಡೆಸಿ ಅವರು ಮಾತನಾಡಿದರು.

‘ಹೆಣ್ಣೇ ಜಾತಿ, ಹೆಣ್ಣೇ ಮತ, ಹೆಣ್ಣೇ ಧರ್ಮ. ನಾವೆಲ್ಲ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಕ್ಕಳು, ಹೆಣ್ಣು ಮಕ್ಕಳಿಗೆ ಯಾವುದೇ ಜಾತಿ ಇಲ್ಲ. ಸಂವಿಧಾನದಲ್ಲಿ ಹೆಣ್ಣು ಮಕ್ಕಳಿಗೆ ಎಲ್ಲರ ಬಗೆಯ ಹಕ್ಕನ್ನು ಕೊಡಲಾಗಿದೆ. ಅದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು’ ಎಂದು ತಿಳಿಸಿದರು.

ADVERTISEMENT

‘ವಿದ್ಯಾರ್ಥಿನಿಯರು ಧೈರ್ಯದಿಂದ ಇರಬೇಕು. ಧೈರ್ಯದಿಂದ ಮಾತನಾಡಿದಾಗ ಮಾತ್ರ ಯಾವುದೇ ಸಮಸ್ಯೆಯನ್ನು, ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತದೆ. ತಪ್ಪುಗಳಾದಾಗ ಪಾಲಕರಿಗೆ ತಿಳಿಸಬೇಕು. ಬಳಿಕ ಪೊಲೀಸರ ಸಹಾಯ ಪಡೆಯಬೇಕು. ಸರ್ಕಾರ ನೀಡಿದ ಸಹಾಯವಾಣಿಗಳ ಬಳಕೆ ಮಾಡಬೇಕು’ ಎಂದು ಅವರು ಸಲಹೆ ಮಾಡಿದರು.

‘ಹೆಣ್ಣು ಮಕ್ಕಳು ಆರೋಗ್ಯದಿಂದಿದ್ದು, ಶಿಕ್ಷಣ ಪಡೆದು, ಆರ್ಥಿಕವಾಗಿ ಸಬಲರಾದಾಗ ಮಾತ್ರ ಸಮಾಜ ಸುಧಾರಣೆ ಸಾಧ್ಯವಾಗುತ್ತದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದಾರೆ. ಇಂತಹ ವಿಷಯಗಳನ್ನು ಅರಿತು ಮುನ್ನಡೆಯಬೇಕು ಎಂದು ಅವರು ಸಲಹೆ ಮಾಡಿದರು.

ಬಸ್ಸಿನ ಸಮಸ್ಯೆ ಇದೆ: ಕಾಲೇಜಿನಿಂದ ಊರಿಗೆ ಹೋಗಿ ಬರಲು ನಮ್ಮೂರಿಗೆ ಸರಿಯಾದ ಬಸ್ಸಿನ ವ್ಯವಸ್ಥೆ ಇಲ್ಲ. ಬಸ್ಸಿಲ್ಲದ ವೇಳೆ ನಾನು ನಡೆದುಕೊಂಡೇ ಬರುತ್ತೇನೆ ಎಂದು ವಿದ್ಯಾರ್ಥಿನಿಯೊಬ್ಬಳು ಸಂವಾದದಲ್ಲಿ ತಿಳಿಸಿದರು.

ಸೆಲ್ಫಿಗೆ ಮುಗಿಬಿದ್ದ ವಿದ್ಯಾರ್ಥಿನಿಯರು: ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅವರು ನಿರಂತರವಾಗಿ ಗಂಟೆಗೂ ಹೆಚ್ಚು ಕಾಲ ಸಂವಾದ ನಡೆಸಿದರು. ‘ನೀವು ಆರಾಮಾಗಿರಬೇಕವ್ವ.. ನಿಮಗೆ ಒಳ್ಳೆಯದಾಗಬೇಕವ್ವ’ ಎಂದು ಆಪ್ತವಾಗಿ ಮಾತನಾಡಿ, ಮಾತು ಮುಗಿಸುವ ಕೊನೆಯಲ್ಲಿ ವೇದಿಕೆಯಿಂದಲೇ ಸೆಲ್ಪೀ ಪಡೆದುಕೊಂಡರು.

ವಿದ್ಯಾರ್ಥಿನಿಯರು ಅಧ್ಯಕ್ಷೆಯ ಬಳಿಗೆ ಆಗಮಿಸಿ ಸೆಲ್ಫಿ ತೆಗೆದುಕೊಂಡು ಖುಷಿ ಹಂಚಿಕೊಂಡರು.

ಅಭಿವೃದ್ಧಿ ಇಲಾಖೆಯ ಅಧಿಕಾರಿ ನವೀವಕುಮಾರ, ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಸ, ಕಾಲೇಜಿನ ವ್ಯವಸ್ಥಾಪಕ ಮಂಡಳಿಯ ಕಾರ್ಯದರ್ಶಿ ಗಿರೀಜಾ, ಸ್ತ್ರೀಶಕ್ತಿ ತಿ ಒಕ್ಕೂಟದ ತಾಲ್ಲೂಕು ಘಟಕದ ಅಧ್ಯಕ್ಷೆ ಈರಮ್ಮ ಗುಂಜಳ್ಳಿ, ಕಾಲೇಜಿನ ಪ್ರಾಚಾರ್ಯಾ ಸಂಜಯ ಪವಾರ, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ರಾಜೇಶ್ವರಿ, ಮಂಜುಳಾ ಅಮರೇಶ, ವಂದನಾ ಶಿವಕುಮಾರ, ಪ್ರತಿಭಾ ರೆಡ್ಡಿ, ಮಹಿಳಾ ಮತ್ತು ಮಕ್ಕಳ ಉಪಸ್ಥಿತರಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಗಿರಿಜವ್ವ ನಿರೂಪಿಸಿದರು.

ಹೆಣ್ಣುಮಕ್ಕಳು ಗೊತ್ತಿಲ್ಲದವರ ಜೊತೆಗೆ ಮಾತನಾಡಬಾರದು.ಬ್ಲಾಕ್ ಮೇಲ್ ಮಾಡುವವರು ಸಿಕ್ಕರೆ ನಮ್ಮ ಬದುಕು ಎಲ್ಲಿಗೆ ಹೋಗಿ ನಿಲ್ಲುತ್ತದೋ ತಿಳಿಯದು.
ಡಾ.ನಾಗಲಕ್ಷ್ಮಿ ಚೌಧರಿ ಮಹಿಳಾ ಆಯೋಗದ ಅಧ್ಯಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.