ಪ್ರತಿಕೂಲ ವಾತಾವರಣದಿಂದಾಗಿ ಕಡಲೆ ಬೆಳೆಗೆ ಹಳದಿ ಬಣ್ಣದ ರೋಗ ಆವರಿಸುತ್ತಿದೆ
ತುರ್ವಿಹಾಳ: ಪೂರಕ ವಾತಾವರಣದ ಕೊರತೆಯಿಂದಾಗಿ ಈ ಬಾರಿ ಕಡಲೆ ಬೆಳೆಗೆ ಹಳದಿ ರೋಗದ ಬಾಧೆ ಆವರಿಸಿದ್ದು, ಇದರಿಂದಾಗಿ ಇಳುವರಿ ಕುಂಠಿತಗೊಳ್ಳುವ ಆತಂಕ ರೈತರಲ್ಲಿ ಮೂಡುತ್ತಿದೆ.
ಇಲ್ಲಿನ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ ತುರ್ವಿಹಾಳ ಪಟ್ಟಣ ಅರ್ಧ ಭಾಗ, ಗುಂಡಾ, ಊಮಲೂಟಿ, ಕಲಮಂಗಿ, ಹತ್ತಿಗುಡ್ಡ, ಚಿಕ್ಕವೇರ್ಗಿ, ಹಿರೇಬೇರ್ಗಿ, ಭೋಗಾಪೂರ, ಬಪೂರ ಇತರೆ ಒಟ್ಟು 20 ಗ್ರಾಮಗಳಲ್ಲಿ ಮಳೆಯನ್ನು ಅವಲಂಬಿಸಿ ಬೇಸಾಯ ಮಾಡುತ್ತಿದ್ದಾರೆ.
ಈ ಗ್ರಾಮಗಳ ವ್ಯಾಪ್ತಿಯಲ್ಲಿ 4 ಸಾವಿರ ಎಕರೆ ಪ್ರದೇಶದಲ್ಲಿ ಕಡಲೆ ಬಿತ್ತನೆ ಮಾಡಿದ್ದಾರೆ. ಕಡಲೆ ಬೆಳೆಗೆ ಪ್ರತಿಕೂಲ ವಾತಾವರಣ ಉಂಟಾಗಿ ಹಳದಿ ರೋಗ, ನೆಟೆರೋಗ ಬಂದು ಗಿಡಗಳು ಒಣಗಿ ಹೋಗುತ್ತಿವೆ. ಕಡಲೆ ಬೆಳೆದ ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯ ಭೀತಿ ಕಾಡುತ್ತಿದೆ.
ಕಳೆದ ವರ್ಷ ಬರಗಾಲದಲ್ಲೂ ಪ್ರತಿ ಎಕರೆಗೆ 7 ಕ್ವಿಂಟಲ್ ಕಡಲೆ ಬೆಳೆ ಇಳುವರಿ ಬಂದಿತ್ತು. ಜೊತೆಗೆ ಒಂದು ಕ್ವಿಂಟಲ್‌ಗೆ ₹6,000ರಿಂದ ₹6,500 ಮಾರಾಟ ಮಾಡಲಾಗಿತ್ತು. ಖರ್ಚು ಕಳೆದು ಸ್ವಲ್ಪ ಲಾಭ ಬಂದಿತ್ತು. ಈ ವರ್ಷ ಮಳೆ ಚೆನ್ನಾಗಿ ಬಂದಿದೆ ಆದರೆ ಚಳಿ ಇಲ್ಲದಾಗಿದೆ ಬರಿ ಮೋಡ ಕವಿದ ವಾತಾವರಣ ಹಾಗೂ ತುಂತುರು ಮಳೆಯಿಂದಾಗಿ ಕಡಲೆ ಗಿಡಗಳಿಗೆ ತೇವಾಂಶ ಹೆಚ್ಚಾಗಿ ಹಸಿರು ಬಣ್ಣದಿಂದ ಹಳದಿ ಬಣ್ಣಕ್ಕೆ ತಿರುಗಿ ಬಳಿಕ ಒಣಗಿ ಹೋಗುತ್ತಿವೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಈಗಾಗಲೇ ಬೀಜ ಗೊಬ್ಬರ ಹಾಗೂ ಬಿತ್ತನೆ ಕಾರ್ಯ ಸೇರಿದಂತೆ ಪ್ರತಿ ಎಕರೆಗೆ ₹10 ಸಾವಿರದಂತೆ ಖರ್ಚು ಮಾಡಲಾಗಿದೆ. ಇನ್ನೂ ಮುಂದೆ ಮೋಡಕವಿದ ವಾತಾವರಣ ಮುಂದುವರಿದರೆ ಬೆಳೆ ಸಂಪೂರ್ಣ ನಾಶವಾಗುತ್ತದೆ ಎನ್ನುತ್ತಾರೆ ರೈತರು.
ಕಡಲೆಗೆ ಬಿತ್ತನೆ ಮೊದಲೇ ಮಳೆಯಾದರೆ ಸಾಕು, ಹಂತ ಹಂತವಾಗಿ ಕೀಟನಾಶಕ ಸಿಂಪಡಿಸಿದರೆ ಉತ್ತಮ ಫಸಲು ಬರುತ್ತದೆ. ಮೋಡಕವಿದ ವಾತಾವರಣದಿಂದ ರೋಗ ಬರುತ್ತದೆಧರ್ಮಣ್ಣ ಕೃಷಿ ಅಧಿಕಾರಿ ತುರ್ವಿಹಾಳ
ಈ ವರ್ಷ ಕಡಿಮೆ ಪ್ರಮಾಣದಲ್ಲಿ ಕಡಲೆ ಬೆಳೆ ಬಿತ್ತನೆ ಮಾಡಿದ್ದರಿಂದ ಹೆಚ್ಚಿನ ಬೆಲೆ ಸಿಗುತ್ತದೆ ಎಂದು ಆಶಾಭಾವನೆ ಇತ್ತು. ವಾತಾವರಣ ವೈಪರಿತ್ಯದಿಂದ ಕಡಲೆ ಬೆಳೆ ಕೈಕೊಟ್ಟಿದೆಮರಿಸ್ವಾಮಿ ನವಲಹಳ್ಳಿ ಸ್ಥಳೀಯ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.