ಸಿರವಾರ: ಪಟ್ಟಣದ ಪೊಲೀಸ್ ಠಾಣೆಯ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ ಕಿರುಕುಳ ನೀಡುತ್ತಿದ್ದಾರೆ ಎಂದು ಆಪಾದಿಸಿ, ಡೆತ್ನೋಟ್ ಬರೆದಿಟ್ಟು ಯುವಕನೊಬ್ಬ ನಾಪತ್ತೆಯಾಗಿದ್ದಾನೆ.
ತಾಯಣ್ಣ ನೀಲಗಲ್ ನಾಪತ್ತೆಯಾದ ಯುವಕ. ’ಪಿಎಸ್ಐ ಗೀತಾಂಜಲಿ ಶಿಂಧೆ ಅವರು ಮೂರು ತಿಂಗಳಿಂದ ವಿನಾಕಾರಣ ಠಾಣೆಗೆ ಕರೆಸಿ ನನಗೆ ಕಿರುಕುಳ ನೀಡುತ್ತಿದ್ದರು’ ಎಂದು ತಾಯಣ್ಣ ಆರೋಪ ಮಾಡಿದ್ದಾರೆ.
ಸಂಬಂಧಿಕರ ಜಮೀನಿನ ಭತ್ತ ಕಟಾವು ಮಾಡಿರುವ ಬಗ್ಗೆ ತಾಯಣ್ಣ ವಿರುದ್ಧ ದೂರು ದಾಖಲಿಸಲಾಗಿತ್ತು. ಈ ಕಾರಣಕ್ಕಾಗಿ ತಾಯಣ್ಣನನ್ನು ಡಿಸೆಂಬರ್ 2 ರಂದುಠಾಣೆಗೆ ಕರೆಸಿ, ಬಹಳ ಹೊತ್ತು ಲಾಕಪ್ನಲ್ಲಿ ಕೂರಿಸಿದ್ದರು. ಇದರಿಂದ ಮನನೊಂದಿರುವುದಾಗಿ ಯುವಕ ತಿಳಿಸಿದ್ದಾನೆ.
ನಾಪತ್ತೆಯಾಗಿರುವ ತಾಯಣ್ಣನ ವಿರುದ್ಧ 4 ಕ್ರಿಮಿನಲ್ ಹಾಗೂ 5 ಸಿವಿಲ್ ಪ್ರಕರಣಗಳಿವೆ.
‘ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಇದಕ್ಕೆ ಪಿಎಸ್ಐ ಗೀತಾಂಜಲಿ ಶಿಂಧೆ ಅವರೇ ಕಾರಣ. ನನಗೆ ನಿರಂತರ ಕಿರುಕುಳ ನೀಡುತ್ತಿದ್ದು, ದೌರ್ಜನ್ಯ ಎಸಗುತ್ತಿದ್ದಾರೆ. ಇದರಿಂದ ಭಯಭೀತನಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನಗೆ ಹೊರಗಡೆ ಹೋದಾಗಲೆಲ್ಲ ಜೀಪ್ ನಿಲ್ಲಿಸಿ, ನನಗೆ ಹೊಡೆದಂತಹ ಅನೇಕ ಪ್ರಸಂಗಗಳು ಇವೆ. ಅದನ್ನು ಈವರೆಗೂ ನಾನು ಯಾರಿಗೂ ಹೇಳಿಕೊಂಡಿರಲಿಲ್ಲ. ಇದೀಗ ನಾನು ಬಹಳಷ್ಟು ನೊಂದಿದ್ದೇನೆ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಪತ್ರದಲ್ಲಿ ಬರೆಯಲಾಗಿದೆ.
ಎರಡು ಪುಟಗಳ ಸುದೀರ್ಘ ಡೆತ್ ನೋಟ್ ಬರೆದಿರುವ ತಾಯಣ್ಣ ಅವರು ಕೊನೆಯಲ್ಲಿ ನನ್ನ ಎಲ್ಲ ಕುಟುಂಬ ಸದಸ್ಯರನ್ನು ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಇದೇ ನನ್ನ ಕೊನೆಯ ಬರಹ ನೋಡಿಕೊಳ್ಳಿ. ಮಿಸ್ ಯು ಅಮ್ಮ ಎಂದು ಬರೆದಿದ್ದಾರೆ. ಕುಟುಂಬದವರು ಆತಂಕದಿಂದ ಹುಡುಕಾಟ ಆರಂಭಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.