ADVERTISEMENT

ತಲೆ ಎತ್ತಲಿವೆ 30 ಸೌರ ವಿದ್ಯುತ್ ಘಟಕ : ಸಂಸದ ಸುರೇಶ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2023, 7:19 IST
Last Updated 7 ನವೆಂಬರ್ 2023, 7:19 IST
ರಾಮನಗರ ತಾಲ್ಲೂಕಿನ ಮಾಯಗಾನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ಜನಸಂಪರ್ಕ ಸಭೆ ನಡೆಸಿದ ಸಂಸದ ಡಿ.ಕೆ. ಸುರೇಶ್ ಅವರು, ಸಾರ್ವಜನಿಕರ ಅಹವಾಲು ಆಲಿಸಿದರು. ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್, ಮುಖಂಡರಾದ ಕೆ. ರಾಜು, ಪಿ. ನಾಗರಾಜ್, ಪಂಚಾಯಿತಿ ಅಧ್ಯಕ್ಷೆ ಗೀತಾ ಇದ್ದಾರೆ
ರಾಮನಗರ ತಾಲ್ಲೂಕಿನ ಮಾಯಗಾನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ಜನಸಂಪರ್ಕ ಸಭೆ ನಡೆಸಿದ ಸಂಸದ ಡಿ.ಕೆ. ಸುರೇಶ್ ಅವರು, ಸಾರ್ವಜನಿಕರ ಅಹವಾಲು ಆಲಿಸಿದರು. ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್, ಮುಖಂಡರಾದ ಕೆ. ರಾಜು, ಪಿ. ನಾಗರಾಜ್, ಪಂಚಾಯಿತಿ ಅಧ್ಯಕ್ಷೆ ಗೀತಾ ಇದ್ದಾರೆ   

ರಾಮನಗರ: ‘ರೈತರು ಎದುರಿಸುವ ವಿದ್ಯುತ್ ಸಮಸ್ಯೆಗೆ ಪರಿಹಾರವಾಗಿ ಜಿಲ್ಲೆಯಾದ್ಯಂತ 30 ಕಡೆ ಸೌರ ವಿದ್ಯುತ್ ಉತ್ಪಾದನಾ ಘಟಕಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಘಟಕಗಳು ಕಾರ್ಯಾರಂಭಿಸಿದರೆ ರೈತರು ಎದುರಿಸುತ್ತಿರುವ ವಿದ್ಯುತ್ ಸಮಸ್ಯೆ ಬಗೆಹರಿಯಲಿದ್ದು, ಬೆಳಿಗ್ಗೆಯಿಂದ ಸಂಜೆವರೆಗೆ ಸಿಗಲಿದೆ’ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದರು.

ತಾಲ್ಲೂಕಿನ ಮಾಯಗಾನಹಳ್ಳಿ ಮತ್ತು ಬಿಳಗುಂಬ ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ನಡೆದ ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ‘ಮಳೆ ಕೊರೆತೆಯಿಂದಾಗಿ ರಾಜ್ಯದಲ್ಲಿ ಬರ ಆವರಿಸಿದೆ. ನದಿಗಳಲ್ಲಿ ನೀರಿಲ್ಲದಿರುವುದರಿಂದ, ಜಲಾಶಯಗಳಲ್ಲಿ ಸಹ ನೀರಿನ ಸಂಗ್ರಹ ಕಡಿಮೆಯಾಗಿದ್ದು, ವಿದ್ಯುತ್ ಉತ್ಪಾದನೆಯು ತೀವ್ರ ಕುಸಿತ ಕಂಡಿದೆ. ಇದರಿಂದಾಗಿ ವಿದ್ಯುತ್‌ ಕೊರತೆ ತಲೆದೋರಿದೆ’ ಎಂದರು.

‘ಮಳೆ ಅಭಾವದಿಂದ ಉಂಟಾಗಿರುವ ವಿದ್ಯುತ್ ಕೊರತೆಯನ್ನು ಟೀಕಿಸುವ ವಿರೋಧ ಪಕ್ಷದವರು, ತಾವು ಅಧಿಕಾರದಲ್ಲಿದ್ದಾಗ ಇಂತಹ ಪರಿಸ್ಥಿತಿಯನ್ನು ನಿಭಾಯಿಸುವುದಕ್ಕಾಗಿ ಪರ್ಯಾಯ ವಿದ್ಯುತ್ ಉತ್ಪಾದನೆಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ರೈತರ ಸಮಸ್ಯೆ ಆಲಿಸದೆ ಮನಸೋ ಇಚ್ಛೆ ಆಡಳಿತ ನಡೆಸಿದರು. ನಾವು ಅವರಂತೆ ವೃಥಾ ಕಾಲಹರಣ ಮಾಡದೆ, ಪರ್ಯಾಯ ವ್ಯವಸ್ಥೆ ಮಾಡುತ್ತಿದ್ದೇವೆ’ ಎಂದು ತಿರುಗೇಟು ನೀಡಿದರು.

ADVERTISEMENT

ಮನೆ ಮಂಜೂರು: ‘ಹಿಂದೆ ಅಧಿಕಾರ ನಡೆಸಿದವರು ವಸತಿ ರಹಿತರಿಗೆ ಒಂದೇ ಒಂದು ಮನೆಯನ್ನು ಕೊಡಲಿಲ್ಲ. ಮನೆ ಕಟ್ಟಿಕೊಳ್ಳಲು ನಿವೇಶನ ವಿತರಿಸಲಿಲ್ಲ. ಸಾಗುವಳಿದಾರರಿಗೆ ಸಾಗುವಳಿ ಚೀಟಿ ಹಂಚಿಕೆ ಸೇರಿದಂತೆ ಜನ ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲಿಲ್ಲ. ನಾವು ಅಧಿಕಾರಕ್ಕೆ ಬಂದ ನಂತರ, ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ 80–100 ಮನೆಗಳನ್ನು ಮಂಜೂರು ಮಾಡಿದ್ದೇವೆ’ ಎಂದು ತಿಳಿಸಿದರು.

‘ರಾಜ್ಯದ ಜನರು ನಮ್ಮ ಮೇಲೆ ವಿಶ್ವಾಸವಿಟ್ಟು, ಬಹುಮತದೊಂದಿಗೆ ಅಧಿಕಾರ ಕೊಟ್ಟಿದ್ದಾರೆ. ಅವರ ಆಶೀರ್ವಾದವಿರುವವರೆಗೆ ಜನಸೇವೆ ಮಾಡುತ್ತೇವೆ. ಸಾರ್ವಜನಿಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಪ್ರಯತ್ನಿಸುತ್ತೇವೆ. ಯಾರು ಏನೇ ಟೀಕೆ ಮಾಡಿದರೂ, ನಾವು ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದರು.

‘ಬಡವರರ ಸಮಸ್ಯೆ ಬಗೆಹರಿಸಿ ಎಂದರೆ, ಕೆಲ ಅಧಿಕಾರಿಗಳು ಕಾನೂನಿನ ಪಾಠ ಮಾಡುತ್ತಾರೆ. ಕಾಸು ಕೊಟ್ಟರೆ ಯಾವ ಕಾನೂನನ್ನು ಸಹ ಲೆಕ್ಕಕ್ಕೆ ಇಟ್ಟುಕೊಳ್ಳದೆ ಕೆಲಸ ಮಾಡುತ್ತಾರೆ. ಸರ್ಕಾರಿ ಸಂಬಳ ಪಡೆಯುವ ನಾವು ಇರುವುದೇ ಜನರ ಸೇವೆ ಮಾಡಲು. ಜನರ ಸಮಸ್ಯೆ ಕುರಿತ ಅರ್ಜಿಯನ್ನು ವಿಳಂಬ ಮಾಡದೆ, ಕಾಲಮಿತಿಯೊಳಗೆ ಪರಿಹರಿಸಬೇಕು’ ಎಂದು ಸಲಹೆ ನೀಡಿದರು.

ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಮಾತನಾಡಿ, ‘ಕಾಂಗ್ರೆಸ್ ಎಲ್ಲ ಜಾತಿ ಮತ್ತು ಸಮುದಾಯದವರ ಪಕ್ಷ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಮತ್ತು ನುಡಿದಂತೆ ನಡೆಯುವ ಪಕ್ಷ ಎಂಬ ಹೆಗ್ಗಳಿಕೆ ಹೊಂದಿದೆ. ರಾಜ್ಯದಲ್ಲಿ ಪಕ್ಷ ಅಧಿಕಾರ ಬಂದ ಬಳಿಕ, ಚುನಾವಣೆಗೂ ಮುಂಚೆ ತಾನು ಕೊಟ್ಟಿದ್ದ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಜನರ ಅಭಿವೃದ್ಧಿಯೇ ನಮ್ಮ ಮೊದಲ ಆದ್ಯತೆ’ ಎಂದು ಹೇಳಿದರು.

ಮಾಯಗಾನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷ ಎಂ.ವಿ. ವೆಂಕಟೇಶ್ ಮೂರ್ತಿ, ಬಮೂಲ್ ನಿದೇರ್ಶಕ ಪಿ. ನಾಗರಾಜು, ತಹಶೀಲ್ದಾರ್ ತೇಜಸ್ವಿನಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರದೀಪ್, ಪಿಡಿಒ ಮಾದೇಗೌಡ, ಕಾಂಗ್ರೆಸ್ ಮುಖಂಡರಾದ ಕೆ. ರಾಜು, ಗಾಣಕಲ್ ನಟರಾಜ್, ವೀರಭದ್ರಸ್ವಾಮಿ ಹಾಗೂ ಇತರರು ಇದ್ದರು.

ಹಕ್ಕಿಪಿಕ್ಕಿ ಜನಾಂಗ ಸೇರಿದಂತೆ ಬಡ ಹಾಗೂ ಮಧ್ಯಮ ವರ್ಗದವರಿಗೆ ನಿವೇಶನ ಹಂಚುತ್ತಿರುವುದನ್ನು ಸಹಿಸದವರು ರಿಯಲ್ ಎಸ್ಟೇಟ್ ಮಾಡುತ್ತಿದ್ದಾರೆ ಎಂದು ಟೀಕಿಸುತ್ತಿದ್ದಾರೆ. ಅದಕ್ಕೆಲ್ಲಾ ನಾವು ಕೇರ್ ಮಾಡುವುದಿಲ್ಲ
– ಡಿ.ಕೆ. ಸುರೇಶ್ ಸಂಸದ

‘ವಿದ್ಯುತ್ ಕೇಂದ್ರದ ಬಳಿ ಘಟಕ’

‘ಜಿಲ್ಲೆಯಲ್ಲಿರುವ ಸುಮಾರು 30 ವಿದ್ಯುತ್ ವಿತರಣಾ ಕೇಂದ್ರಗಳ ಬಳಿ ಕನಿಷ್ಠ 5ರಿಂದ 8 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಸೌರ ವಿದ್ಯುತ್ ಘಟಕಗಳನ್ನು ನಿರ್ಮಾಣ ಮಾಡಲಾಗುವುದು. ಇದರಿಂದಾಗಿ ಮಳೆ ಕೊರತೆ ಸೇರಿದಂತೆ ಎಂತಹ ಸಂದರ್ಭದಲ್ಲೂ ವಿದ್ಯುತ್ ಸಮಸ್ಯೆ ಉಂಟಾಗುವುದಿಲ್ಲ. ಜಿಲ್ಲೆಯಲ್ಲಿರುವ ವಿದ್ಯುತ್ ಬೇಡಿಕೆ ಮತ್ತು ಪೂರೈಕೆ ನಡುವಣ ಅಂತರವೂ ಗಣನೀಯವಾಗಿ ಕಡಿಮೆಯಾಗಲಿದೆ. ರೈತರ ಕೃಷಿ ಚಟುವಟಿಕೆಗಳಿಗೆ ಹಗಲಿನಲ್ಲೇ ವಿದ್ಯುತ್ ಪೂರೈಕೆಯಾಗಲಿದೆ’ ಎಂದು ಡಿ.ಕೆ. ಸುರೇಶ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.