
ರಾಮನಗರ: ಕನ್ನಡದ ಜನಪ್ರಿಯ ‘ಬಿಗ್ ಬಾಸ್’ ರಿಯಾಲಿಟಿ ಷೋದಲ್ಲಿ ಅಳಿವಿನಂಚಿನಲ್ಲಿರುವ ರಣಹದ್ದುಗಳ ಬಗ್ಗೆ ಷೋ ನಿರೂಪಕ ಕಿಚ್ಚ ಸುದೀಪ್ ತಪ್ಪಾದ ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ಖಂಡಿಸಿರುವ ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್, ಸುದೀಪ್ ಅವರು ತಮ್ಮ ಮಾತಿನ ಕುರಿತು ಸರಿಯಾದ ಸ್ಪಷ್ಟೀಕರಣ ನೀಡಬೇಕು ಎಂದು ಒತ್ತಾಯಿಸಿದೆ.
ಈ ಕುರಿತು ಬೆಂಗಳೂರು ದಕ್ಷಿಣ ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ. ರಾಮಕೃಷ್ಣಪ್ಪ ಹಾಗೂ ವಲಯ ಅರಣ್ಯ ಸಂರಕ್ಷಣಾಧಿಕಾರಿ ಮಹಮ್ಮದ್ ಮನ್ಸೂರ್ ಅವರನ್ನು ಸೋಮವಾರ ಭೇಟಿ ಮಾಡಿ ಮನವಿ ಸಲ್ಲಿಸಿದ ಟ್ರಸ್ಟ್ ಪದಾಧಿಕಾರಿಗಳು, ರಣಹದ್ದುಗಳ ಕುರಿತ ತಪ್ಪು ಮಾಹಿತಿಗೆ ಸ್ಪಷ್ಟೀಕರಣ ನೀಡುವಂತೆ ಸುದೀಪ್ ಅವರಿಗೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.
ಮನವಿಯಲ್ಲಿ ಏನಿದೆ?:
ಕರ್ನಾಟಕದ ರಾಮನಗರದಲ್ಲಿರುವ ರಾಮದೇವರ ಬೆಟ್ಟವು ದೇಶದ ಏಕೈಕ ರಣಹದ್ದು ವನ್ಯಜೀವಿಧಾಮವಾಗಿದೆ. ಕಲರ್ಸ್ ಕನ್ನಡ ವಾಹಿನಿಯ ಬಿಗ್ ಬಾಸ್’ ಸೀಸನ್–12 ರ ‘ವಾರದಕಥೆ ಕಿಚ್ಚನ ಜೊತೆ’ ಸಂಚಿಕೆಯ ಟಾಸ್ಕ್‌ನಲ್ಲಿ ಕೆಲವು ಪ್ರಾಣಿಗಳ ಚಿತ್ರಗಳನ್ನು, ಅವುಗಳ ಸ್ವಭಾವ ಹೋಲುವ ಸ್ಪರ್ಧಿಗೆ ಹಾಕುವ ಚಟುವಟಿಕೆ ನೀಡಲಾಗಿತ್ತು.
ಆಗ ರಣಹದ್ದುವಿನ ಚಿತ್ರ ಕುರಿತು, ‘ಹೊಂಚು ಹಾಕಿ ಸಂಚು ಮಾಡಿ ಸರಿಯಾದ ಸಮಯಕ್ಕೆ ಲಬಕ್ಕನೆ ಹಿಡಿಯುವುದು’ ಎಂದು ನಿರೂಪಕ ಕಿಚ್ಚ ಸುದೀಪ್ ಹೇಳುತ್ತಾರೆ. ಇದು ತಪ್ಪು ಮಾಹಿತಿಯಾಗಿದೆ. ಬದಲಿಗೆ, ರಣಹದ್ದುಗಳು ಮಧ್ಯಮ ಹಾಗೂ ದೊಡ್ಡ ಗಾತ್ರದ ಸತ್ತ ಜೀವಿಗಳ ಶವವನ್ನು ಆಹಾರವಾಗಿ ಸೇವಿಸುತ್ತವೆ. ಬೇರೆ ಜೀವಿಗಳಿಗೆ ರಣಹದ್ದುಗಳು ಯಾವುದೇ ರೀತಿಯ ಹಾನಿ ಮಾಡುವುದಿಲ್ಲ. ಬೇಟೆಯಾಡಿ ತಿನ್ನುವುದಿಲ್ಲ.
ನಟ ಸುದೀಪ್ ತಮ್ಮ ಮಾತಿನ ಕುರಿತು ಸರಿಯಾದ ಸ್ಪಷ್ಟೀಕರಣ ನೀಡುವಂತೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿ ರಾಮನಗರ ವಲಯ ಅರಣ್ಯ ಸಂರಕ್ಷಣಾಧಿಕಾರಿ ಮಹಮ್ಮದ್ ಮನ್ಸೂರ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು
ಸತ್ತ ಜೀವಿಗಳನ್ನು ತಿನ್ನುವ ರಣಹದ್ದುಗಳು ನಮ್ಮ ಪರಿಸರವನ್ನು ಸ್ವಚ್ಛಗೊಳಿಸಿ, ಸಾಂಕ್ರಾಮಿಕ ರೋಗರುಜಿನಗಳು ಹರಡದಂತೆ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅಂತಹ ರಣಹದ್ದುಗಳ ಸಂತತಿ ಈಗಾಗಲೇ ಶೇ 99ರಷ್ಟು ಕ್ಷೀಣಿಸಿ ಅಳಿವಿನಂಚಿಲ್ಲಿದೆ. ಅವುಗಳ ಸಂತತಿ ಉಳಿಸುವ ನಿಟ್ಟಿನಲ್ಲಿ ನಮ್ಮ ಟ್ರಸ್ಟ್ ಸೇರಿದಂತೆ ಹಲವಾರು ಸಂಘ–ಸಂಸ್ಥೆಗಳು ಹಾಗೂ ಅರಣ್ಯ ಇಲಾಖೆ ಶ್ರಮಿಸುತ್ತಿದೆ.
ಹೀಗಿರುವಾಗ ರಿಯಾಲಿಟಿ ಷೋನಲ್ಲಿ ರಣಹದ್ದು ಬಗ್ಗೆ ತಪ್ಪು ಮಾಹಿತಿ ನೀಡಿರುವುದರಿಂದ ಅವುಗಳ ಸಂರಕ್ಷಣೆಗೆ ಹಿನ್ನಡೆಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ, ನಿರೂಪಕ ಸುದೀಪ ಅವರು ರಣಹದ್ದು ಬಗ್ಗೆ ಸರಿಯಾದ ಮಾಹಿತಿಯ ಸ್ಪಷ್ಟೀಕರಣ ನೀಡಬೇಕು. ಜನರಿಗೆ ಸತ್ಯಾಂಶ ತಿಳಿಸಿ, ಅಳಿವಿನಂಚಿನಲ್ಲಿರುವ ರಣಹದ್ದುಗಳ ಸಂರಕ್ಷಣೆಗೆ ಪಾತ್ರರಾಗಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಟ್ರಸ್ಟ್ ಅಧ್ಯಕ್ಷ ಚಂದ್ರೇಗೌಡ, ಕಾರ್ಯದರ್ಶಿ ಶಶಿ ಬಿ., ಸಲಹೆಗಾರರಾದ ಪ್ರೊ. ಶಿವನಂಜಯ್ಯ, ರಾಜೇಂದ್ರ ಡಿ., ಸಾಹಿತಿ ಹೊಸದೊಡ್ಡಿ ಸಿ. ರಮೇಶ್ ಹಾಗೂ ವನ್ಯಜೀವಿ ತಜ್ಞ ದರ್ಶನ್ ಇದ್ದರು.
ರಣಹದ್ದು ಸ್ವಭಾವ ಕುರಿತು ಬಿಗ್ ಬಾಸ್ ರಿಯಾಲಿಟಿ ಷೋನಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂಬುದು ಅಪರಾಧವೇನಲ್ಲ. ಆದರೂ, ಈ ಕುರಿತು ಸ್ಪಷ್ಟೀಕರಣ ನೀಡುವಂತೆ ಬಿಗ್ ಬಾಸ್ ಷೋ ಆಯೋಜಕರಿಗೆ ಪತ್ರ ಬರೆಯಲಾಗುವುದು,.– ಎಂ. ರಾಮಕೃಷ್ಣಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಬೆಂಗಳೂರು ದಕ್ಷಿಣ ಜಿಲ್ಲೆ