
ರಾಮನಗರ: ತಾಲ್ಲೂಕಿನ ಅಂಜನಾಪುರ ಗ್ರಾಮದಲ್ಲಿ ಬಸವೇಶ್ವರ ಸ್ವಾಮಿಯ ಅಗ್ನಿಕೊಂಡ ಮಹೋತ್ಸವ ಹಾಗೂ ಹಬ್ಬ ಮಂಗಳವಾರ ವಿಜೃಂಭಣೆಯಿಂದ ಜರುಗಿತು. ಹತ್ತು ವರ್ಷಗಳ ನಂತರ ಜರುಗಿದ ಹಬ್ಬದಿಂದಾಗಿ ಗ್ರಾಮದಲ್ಲಿ ಸಂಭ್ರಮದ ವಾತಾವರಣ ಕಂಡುಬಂತು. ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ಬಸವೇಶ್ವರ ಸ್ವಾಮಿಯ ಅಗ್ನಿಕೊಂಡ ಮಹೋತ್ಸವವನ್ನು ಕಣ್ತುಂಬಿಕೊಂಡರು.
ಮಹೋತ್ಸವದ ಹಿನ್ನೆಲೆಯಲ್ಲಿ ಗ್ರಾಮದ ದೇವಸ್ಥಾನ ಬೀದಿ, ಮನೆಗಳು ವಿದ್ಯುತ್ ದೀಪಾಲಂಕಾರದಿಂದ ಅಲಂಕೃತಗೊಂಡಿದ್ದವು. ಹೂ, ಹೊಂಬಾಳೆ ತಂಬಿಟ್ಟಿನ ಆರತಿ ಮೆರವಣಿಗೆಯೊಂದಿಗೆ ಗ್ರಾಮದೇವರ ಜತೆ ಅರ್ಚಕ ಶಿವಕುಮಾರಸ್ವಾಮಿ ಅವರು, ಕೈಯಲ್ಲಿ ಬಸವೇಶ್ವರ ದೇವರನ್ನು ಹಿಡಿದು ಅಗ್ನಿಕೊಂಡ ಪ್ರವೇಶಿಸಿದರು.
ಕೊಂಡದ ಸುತ್ತಲೂ ಜಮಾಯಿಸಿದ್ದ ಭಕ್ತರು ‘ಜೈ ಬಸವೇಶ್ವರ’, ‘ಜೈ ಜೈ ಬಸವೇಶ್ವರ’ ಎಂದು ಜೈಕಾರ ಕೂಗಿ ಭಕ್ತಿ ಮೆರೆದರು. ಬೇವೂರು ಮಠದ ಮೃತ್ಯುಂಜಯ ಸ್ವಾಮೀಜಿ, ಚನ್ನಪಟ್ಟಣ ವಿರಕ್ತ ಮಠದ ಶಿವರುದ್ರ ಸ್ವಾಮೀಜಿ, ರೇವಣಸಿದ್ದೇಶ್ವರ ಬೆಟ್ಟದ ದಾಸೋಹ ಮಠದ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಗ್ರಾಮ ದೇವತೆಗಳ ಅದ್ದೂರಿ ಮೆರವಣಿಗೆ ಜರುಗಿತು. ಮಹಿಳೆಯರು ಪೂರ್ಣಕುಂಭದೊಂದಿಗೆ ಹೆಜ್ಜೆ ಹಾಕಿದರು. ವಿವಿಧ ಜನಪದ ಕಲಾ ಮೇಳಗಳು ಮೆರವಣಿಗೆಗೆ ಮೆರುಗು ತಂದವು.
ಅಗ್ನಿಕೊಂಡದ ಹಿಂದಿನ ದಿನ ಮಂಗಳವಾರ ಬೆಳಿಗ್ಗೆ ಮಾರಮ್ಮ ದೇವಾಲಯದಲ್ಲಿ ಗಣಪತಿ ಪೂಜೆ, ಸ್ವಸ್ತಿವಾಹನ, ಅಂಕುರಾರ್ಪಣೆ, ಧ್ವಜಾರೋಹಣ, ನವಗ್ರಹ ಹೋಮ ನಡೆಯಿತು. ಸಂಜೆ 4 ಗಂಟೆಗೆ ಅಗ್ನಿಕೊಂಡಕ್ಕೆ ಯಳವಾರ ಸೌದೆಗಳನ್ನು ತಂದು ಜೋಡಿಸಿ ರಾತ್ರಿ 10 ಗಂಟೆಗೆ ಅರ್ಚಕರು ಪೂಜೆ ಸಲ್ಲಿಸಿದ ನಂತರ ಅಗ್ನಿಕೊಂಡಕ್ಕೆ ಅಗ್ನಿಸ್ಪರ್ಶ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.