ರಾಮನಗರ: ನಿಗದಿತ ಸಮಯಕ್ಕೆ ಬಾರದ ಕೆಎಸ್‌ಆರ್‌ಟಿ ಬಸ್‌ನಿಂದಾಗಿ ಶಾಲಾ–ಕಾಲೇಜು ಹಾಗೂ ಕೆಲಸ–ಕಾರ್ಯಗಳಿಗೆ ಹೋಗುವವರಿಗೆ ತೊಂದರೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ತಾಲ್ಲೂಕಿನ ಅಕ್ಕೂರು ಗ್ರಾಮದಲ್ಲಿ ಮಂಗಳವಾರ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಬಸ್ ತಡೆದು ಪ್ರತಿಭಟನೆ ನಡೆಸಿದರು.
ಅಕ್ಕೂರು, ಎಚ್.ಜಿ. ದೊಡ್ಡಿ, ವಿರುಪಸಂದ್ರ ಹಾಗೂ ತಾವರೆಕೆರೆಯಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ವ್ಯಾಪಾರಿಗಳು ರಾಮನಗರಕ್ಕೆ ನಿತ್ಯ ಓಡಾಡುತ್ತಾರೆ. ಆದರೆ, ಬೆಳಿಗ್ಗೆ 8 ಗಂಟೆ ಸುಮಾರಿಗೆ ಈ ಮಾರ್ಗದಲ್ಲಿ ಸಂಚರಿಸುವ ಬಸ್ ವಿಳಂಬವಾಗಿ ಬರುತ್ತಿದೆ. ಕೆಲವೊಮ್ಮೆ ಬರುವುದೇ ಇಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಮೊದಲ ಬಸ್ ಹೊರತುಪಡಿಸಿದರೆ 8.15ಕ್ಕೆ ಬರುವ ಬಸ್ಸನ್ನೇ ಆಶ್ರಯಿಸಬೇಕು. ಅದೂ ಸಿಗದಿದ್ದರೆ 9.30ರ ಬಸ್‌ಗೆ ಕಾಯಬೇಕು. ಮೊದಲ ಬಸ್ ನಿಗದಿತ ಸಮಯಕ್ಕೆ ಬಾರದಿರುವುದರಿಂದ ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗಿಗಳಿಗೆ ಸರಿಯಾದ ಸಮಯಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ನಂತರದ ಬಸ್ಸಿನಲ್ಲಿ ಕಾಲಿಡಲಾಗಷ್ಟು ಜನ ತುಂಬಿರುತ್ತಾರೆ. ಇದರಿಂದಾಗಿ ಈ ಮಾರ್ಗದ ಪ್ರಯಾಣಿಕರು ನಿತ್ಯ ತೊಂದರೆ ಅನುಭವಿಸುವಂತಾಗಿದೆ ಎಂದು ಅಳಲು ತೋಡಿಕೊಂಡರು.
ಬಸ್ ಸಮಸ್ಯೆ ನಿವಾರಿಸುವಂತೆ ವಿದ್ಯಾರ್ಥಿಗಳು ರಾಮನಗರದ ಬಸ್ ಡಿಪೊ ವ್ಯವಸ್ಥಾಪಕರನ್ನು ಭೇಟಿ ಮಾಡಿ, ಮತ್ತೊಂದು ಬಸ್ಸು ಆರಂಭಿಸುವಂತೆ ಮನವಿ ಕೊಟ್ಟರೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಇದರಿಂದ ಬೇಸತ್ತ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಬಸ್ ತಡೆದು ಆಕ್ರೋಶ ವ್ಯಕ್ತಪಡಿಸಿದ್ದೇವೆ. ಸ್ದಳಕ್ಕೆ ಬಂದು ಸಮಸ್ಯೆ ಆಲಿಸದ ಡಿಪೊ ವ್ಯವಸ್ಥಾಪಕ, ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ. ಕಡೆಗೆ ಅಧಿಕಾರಿಗಳು ಮತ್ತೊಂದು ಬಸ್ ವ್ಯವಸ್ಥೆ ಮಾಡಿದ ಬಳಿಕ ಪ್ರತಿಭಟನೆ ನಿಲ್ಲಿಸಿದ್ದೇವೆ. ಬಸ್ಸಿನ ಸಮಸ್ಯೆ ನಿವಾರಿಸದಿದ್ದರೆ ಡಿಪೊ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.