
ರಾಮನಗರದೊಳಗೆ ಹರಿಯುವ ಅರ್ಕಾವತಿ ನದಿ ದಂಡ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗಿದೆ
ಪ್ರಜಾವಾಣಿ ಚಿತ್ರಗಳು
ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲಾ ಕೇಂದ್ರವಾಗಿರುವ ರಾಮನಗರದ ಮಧ್ಯೆ ಹರಿದು ಕಾವೇರಿ ಸೇರುವ ಅರ್ಕಾವತಿ ನದಿ ದಂಡೆಗೆ ಹೊಸ ಸ್ವರೂಪ ಸಿಗುವ ಲಕ್ಷಣಗಳು ಗೋಚರಿಸುತ್ತಿವೆ. ಜಿಲ್ಲೆಯ ಜೀವನದಿಯಾಗಿರುವ ಅರ್ಕಾವತಿಯ ಎರಡೂ ದಂಡೆಗಳಿಗೆ ₹156 ಕೋಟಿ ವೆಚ್ಚದಲ್ಲಿ ಹೊಸ ರೂಪ ನೀಡುವ ಕೆಲಸ ಸದ್ದಿಲ್ಲದೆ ಶುರುವಾಗಿದೆ.
ಅರ್ಕಾವತಿಯು ನಾಗರಿಕ ಸಮಾಜದ ಕೊಳಚೆಯನ್ನು ತನ್ನೊಳಗೆ ಹುದುಗಿಸಿಕೊಂಡು ಹರಿಯುತ್ತಿದೆ. ನಗರವನ್ನು ಸೀಳಿಕೊಂಡು ಹೋಗುವ ನದಿಯೊಡಲು ಹಾಗೂ ಎರಡು ಕಡೆಯ ದಂಡೆಗಳು ಕುರುಚಲು ಗಿಡಗಳಿಂದ ಆವೃತ್ತವಾಗಿವೆ. ಮಳೆಗಾಲದಲ್ಲಿ ತುಂಬಿ ಹರಿಯುವ ನದಿಯು, ಬೇಸಿಗೆಯಾಗುತ್ತಿದ್ದಂತೆ ಕಳೆಗುಂದುತ್ತದೆ. ನದಿಯೊಡಲು ಕಳೆಗಳಿಂದ ತುಂಬಿ ಹುಲ್ಲುಗಾವಲಿನಂತಾಗುತ್ತದೆ.
ಮಹತ್ವಕಾಂಕ್ಷಿ ಯೋಜನೆ: ನಗರದೊಳಗೆ ಹರಿಯುವ ನದಿ ಪಾತ್ರವನ್ನು ಲಂಡ್‌ನ ಥೇಮ್ಸ್ ನದಿ ದಂಡೆ ಮಾದರಿಯಲ್ಲಿ ಅಭಿವೃದ್ದಿಪಡಿಸಬೇಕೆಂಬ ಕೂಗು ಹಲವು ವರ್ಷಗಳಿಂದ ಕೇಳಿ ಬರುತ್ತಲೇ ಇದೆ. 2024ರ ಬಜೆಟ್‌ನಲ್ಲಿ ಆ ಕೂಗಿಗೆ ಸ್ಪಷ್ಟ ದಿಕ್ಕು ಸಿಕ್ಕಿತು. ಅರ್ಕಾವತಿ ರಿವರ್ ಫ್ರಂಟ್ ಡೆವಲಪ್‌ಮೆಂಟ್ (ಅರ್ಕಾವತಿ ನದಿ ದಂಡೆ ಅಭಿವೃದ್ಧಿ) ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಿಸಿದ್ದರು.
ನದಿ ದಂಡೆ ಅಭಿವೃದ್ಧಿಯ ಹೊಣೆ ಹೊತ್ತ ಕಾವೇರಿ ನೀರಾವರಿ ನಿಗಮವು ನದಿ ದಂಡೆ ಅಭಿವೃದ್ದಿ ಯೋಜನೆಗೆ ವಿಸೃತ ಯೋಜನಾ ವರದಿ (ಡಿಪಿಆರ್) ತಯಾರಿಸಿ, ಜಲ ಸಂಪನ್ಮೂಲ ಇಲಾಖೆಗೆ ಕಳಿಸಿ ಅನುಮೋದನೆ ಪಡೆಯಿತು. ಅದರ ಬೆನ್ನಲ್ಲೇ ಯೋಜನೆಗೆ ಟೆಂಡರ್ ಕೂಡ ಕರೆದು ಅಂತಿಮಗೊಳಿಸಲಾಯಿತು.
ಡಿಪಿಆರ್‌ಗೆ ಮೆಚ್ಚುಗೆ: ‘ಡಿಪಿಆರ್ ಸಿದ್ದಪಡಿಸುವ ಕೆಲಸದ ಜೊತೆ ಜೊತೆಗೆ ನದಿ ದಂಡೆಯ ಗಡಿ ಗುರುತಿಸಿ, ಅಭಿವೃದ್ದಿಗೆ ನೀಲನಕ್ಷೆ ಸಿದ್ದಪಡಿಸಲಾಗಿದೆ. ಆ ಕುರಿತು ತಯಾರಿಸಿದ ಗ್ರಾಫಿಕ್ಸ್ ವಿಡಿಯೊಗೆ ಸಚಿವರು, ಶಾಸಕರು ಹಾಗೂ ಮೇಲಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದು ಕಾವೇರಿ ನೀರಾವರಿ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಮೋಹನ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಈ ಯೋಜನೆಯು ಅಂದಾಜು ₹156 ಕೋಟಿ ಮೊತ್ತದ್ದಾಗಿದೆ. ಎಲ್ಲಾ ಹಂತದಲ್ಲೂ ಡಿಪಿಆರ್‌ಗೆ ಅನುಮೋದನೆ ಸಿಕ್ಕ ಬಳಿಕ, ಅಂದಾಜು ಮೊತ್ತದಲ್ಲಿ ವ್ಯತ್ಯಾಸವಾಗಿದೆ. ಅಂತಿಮವಾಗಿ ₹124 ಕೋಟಿ ಮೊತ್ತಕ್ಕೆ ಯೋಜನೆಯ ಟೆಂಡರ್ ಆಗಿದೆ. ನದಿ ದಂಡೆಯಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ಭರದಿಂದ ನಡೆಯುತ್ತಿದೆ’ ಎಂದು ಹೇಳಿದರು.
ಅಂದಹಾಗೆ ಯೋಜನೆಯ ಟೆಂಡರ್ ಅನ್ನು ಎಸ್.ಆರ್. ರವಿ ಮತ್ತು ಸ್ಟಾರ್ ಇನ್‌ಫ್ರಾಸ್ಟ್ರಕ್ಚರ್ ಕಂಪನಿಗಳು ಪಡೆದುಕೊಂಡಿದ್ದು, ಜಂಟಿಯಾಗಿ ಕೆಲಸವನ್ನು ಕೈಗೆತ್ತಿಕೊಂಡಿವೆ. ಸ್ಟಾರ್ ಕಂಪನಿಯು ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ವೆಂಕಟರಮಣೇಗೌಡ (ಸ್ಟಾರ್ ಚಂದ್ರು ) ಅವರಿಗೆ ಸೇರಿದ್ದು ಎಂಬುದು ಗಮನಾರ್ಹ.
ಹೊಸ ಸ್ಪರ್ಶ: 20027ರಲ್ಲಿ ಜಿಲ್ಲೆಯಾಗಿ ರೂಪುಗೊಂಡ ರಾಮನಗರವು ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಮರುನಾಮಕರಣಗೊಂಡು 18 ವರ್ಷಗಳನ್ನು ಪೂರೈಸಿದೆ. ಆದರೆ, ರಾಜಧಾನಿ ಪಕ್ಕದಲ್ಲಿದ್ದರೂ ಜಿಲ್ಲಾ ಕೇಂದ್ರವು ಹೇಳಿಕೊಳ್ಳುವಂತೆ ಅಭಿವೃದ್ಧಿಗೊಂಡಿಲ್ಲ. ಅರ್ಕಾವತಿ ನದಿ ದಂಡೆ ಅಭಿವೃದ್ಧಿ ಯೋಜನೆಯು ನಗರಕ್ಕೆ ಇನ್ನು ಮುಂದೆ ಸಿಗಲಿರುವ ಹೊಸ ಅಭಿವೃದ್ಧಿಗೆ ಮುನ್ನುಡಿಯಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸ್ಥಳೀಯ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಯೋಜನೆ ಕುರಿತು ಹೆಚ್ಚಿನ ಆಸ್ಥೆ ವಹಿಸಿದ್ದಾರೆ. ಪ್ರತಿ ಕಾರ್ಯಕ್ರಮದಲ್ಲೂ ಯೋಜನೆಯನ್ನು ಪ್ರಸ್ತಾಪಿಸದೆ ಅವರ ಭಾಷಣ ಪೂರ್ಣಗೊಳ್ಳುವುದಿಲ್ಲ. ಅವರ ಈ ಆಸ್ಥೆಗೆ ಜಲ ಸಂಪನ್ಮೂಲ ಇಲಾಖೆ ಸಚಿವರೂ ಆಗಿರುವ ಜಿಲ್ಲೆಯವರೇ ಆದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬಲವಿದೆ.
ಪಟ್ಟಣದ ಪೊರೆ ಕಳಬೇಕಿದೆ: ‘ರಾಮನಗರ ಜಿಲ್ಲೆಯಾಗಿ ಘೋಷಣೆಯಾದಾಗಿನಿಂದ ಇಲ್ಲಿಯವರೆಗೆ ತನ್ನ ಪಟ್ಟಣ ಅಥವಾ ತಾಲ್ಲೂಕು ಕೇಂದ್ರದ ಪೊರೆಯನ್ನು ಇಂದಿಗೂ ಕಳಚಿಕೊಂಡಿಲ್ಲ. ಜಿಲ್ಲಾ ಕೇಂದ್ರವೊಂದು ಹೊಂದಿರಬೇಕಾದ ನಗರೀಕರಣ ಇಲ್ಲಿ ಘಟಿಸಿಲ್ಲ. ಅದಕ್ಕೆ ಜಿಲ್ಲೆಯನ್ನು ಆಳಿದ ಘಟನಾನುಘಟಿ ನಾಯಕರ ಜಾಣ ನಿರ್ಲಕ್ಷ್ಯವೂ ಕಾರಣ’ ಎಂದು ನಿವೃತ್ತ ನೌಕರ ಸಿದ್ದರಾಜು ಅಭಿಪ್ರಾಯಪಟ್ಟರು.
‘ನಗರದೊಳಗೆ ನದಿಯೊಂದು ಹರಿದು ಹೋಗಿರುವುದು ಆ ನಗರದ ಸೌಂದರ್ಯವನ್ನು ಹಿಮ್ಮಡಿಗೊಳಿಸುತ್ತದೆ. ಆದರೆ, ರಾಮನಗರದ ಮಟ್ಟಿಗೆ ನದಿಯ ಅಂದಗೆಡಿಸಲಾಗಿದೆ. ನದಿಯು ನಗರದ ಕೊಳಚೆಯನ್ನು ಬೇರೆಡೆಗೆ ಒಯ್ಯುವ ಸಾಧನವಾಗಿ ಮಾರ್ಪಟ್ಟಿದೆ. ನಗರ ವ್ಯಾಪ್ತಿಯುದ್ದಕ್ಕೂ ನದಿಗೆ ಹೊಸ ರೂಪ ನೀಡಿದರೆ ನದಿ ಜೊತೆಗೆ ನಗರದ ಸ್ವರೂಪವೇ ಬದಲಾಗಲಿದೆ’ ಎಂದು ಹೇಳಿದರು.
ಅರ್ಕಾವತಿ ನದಿ ದಂಡೆ ಅಭಿವೃದ್ದಿ ಯೋಜನೆಯು ಅವಧಿ ಎರಡು ವರ್ಷದ್ದಾಗಿದೆ. ಈಗಾಗಲೇ ಕಾಮಗಾರಿ ಭರದಿಂದ ನಡೆಯುತ್ತಿದೆ. ನಿಗದಿತ ಅವಧಿಯೊಳಗೆ ಅಭಿವೃದ್ಧಿ ಕೆಲಸಗಳನ್ನು ಮುಗಿಸಲು ಕ್ರಮ ಕೈಗೊಳ್ಳಲಾಗಿದೆ– ಮೋಹನ್ ಕಾರ್ಯನಿರ್ವಾಹಕ ಎಂಜಿನಿಯರ್ ಕಾವೇರಿ ನೀರಾವರಿ ನಿಗಮ ಬೆಂಗಳೂರು ದಕ್ಷಿಣ ಜಿಲ್ಲೆ
ನದಿ ದಂಡೆಯ ಎರಡೂ ಬದಿ ಸಿಮೆಂಟ್ ತಡೆಗೋಡೆಗಳ ನಿರ್ಮಾಣ
ದಂಡೆಯುದ್ದಕ್ಕೂ ಮೈದಳೆಯಲಿದೆ ಹಸಿರು ಉದ್ಯಾನ
ಪಾರ್ಕ್‌ನ ಅಂದ ಹೆಚ್ಚಿಸಲಿದೆ ನೀರಿನ ಕಾರಂಜಿ
ಮಕ್ಕಳ ಪಾರ್ಕ್ ವ್ಯಾಯಾಮ ಸ್ಥಳ ನಡಿಗೆ ಪಥ ಸೈಕಲ್ ಪಾಥ್‌ಗೆ ಆದ್ಯತೆ
ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರ್ಮಾಣವಾಗಲಿದೆ ಬಯಲು ರಂಗ ಮಂದಿರ
ದಂಡೆಯುದ್ದಕ್ಕೂ ವರ್ಣರಂಜಿತ ದೀಪಗಳ ಅಳವಡಿಕೆ
ನದಿ ಕಡೆಗೆ ಬರುವ ನೀರು ಸಂಸ್ಕರಿಸಿ ಬಿಡಲು ಎಸ್‌ಟಿಪಿ (ಕೊಳಚೆ ನೀರು ಸಂಸ್ಕರಣ ಘಟಕ) ನಿರ್ಮಾಣ
ದಂಡೆಯಲ್ಲಿ ಸ್ಟ್ರೀಟ್ ಫುಡ್ ಮಾರಾಟಕ್ಕೆ ಸಿಗಲಿದೆ ಸೂಕ್ತ ವ್ಯವಸ್ಥೆ
‘ನಗರದೊಳಗೆ ಹರಿಯುವ ಅರ್ಕಾವತಿ ನದಿಗೆ ಹೊಸ ರೂಪ ನೀಡುವ ನಿಟ್ಟಿನಲ್ಲಿ ಅರ್ಕಾವರಿ ರಿವರ್ ಫ್ರಂಟ್ ಯೋಜನೆ ರೂಪಿಸಲಾಗಿದೆ. ಥೇಮ್ಸ್ ನದಿ ತಟ ಅಭಿವೃದ್ಧಿ ಮಾದರಿಯಲ್ಲಿ ನದಿ ದಂಡೆಗಳನ್ನು ಅಭಿವೃದ್ಧಿಪಡಿಸುವ ಮಹಾನ್ ಆಶಯವನ್ನು ಈ ಯೋಜನೆ ಹೊಂದಿದೆ. ಆ ನಿಟ್ಟಿನಲ್ಲಿ ಡಿಪಿಆರ್ ತಯಾರಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಯೋಜನೆ ಪೂರ್ಣಗೊಂಡರೆ ಬೆಂಗಳೂರು ದಕ್ಷಿಣ ಜಿಲ್ಲಾ ಕೇಂದ್ರವಾಗಿರುವ ರಾಮನಗರಕ್ಕೆ ಹೊಸ ರೂಪ ಸಿಗಲಿದೆ. ನಗರದೊಳಗೆ ನದಿ ನೀರು ಮಲಿನಕ್ಕೂ ಸಂಪೂರ್ಣ ಕಡಿವಾಣ ಹಾಕುವುದಕ್ಕೆ ಯೋಜನೆಯಡಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ’ ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ತಿಳಿಸಿದರು.
ಯೋಜನೆಯಡಿ ಅರ್ಕಾವತಿ ನದಿ ಹರಿಯುವ ಬೆಂಗಳೂರು–ಮೈಸೂರು ಹಳೆ ರಾಷ್ಟ್ರೀಯ ಹೆದ್ದಾರಿಯ (ವಿಶಾಲ್ ಮಾರ್ಟ್ ಬಳಿ) ಸೇತುವೆಯಿಂದ ಆರಂಭಗೊಂಡು ಸಾಯಿಬಾಬಾ ದೇವಸ್ಥಾನದ ಹಿಂಭಾಗದಲ್ಲಿರುವ ಮತ್ತೊಂದು ಸೇತುವೆವರೆಗೆ ನದಿ ದಂಡೆಯನ್ನು ಅಭಿವೃದ್ಧಿಪಡಿಸಲಾಗುತ್ತದೆ. ಎರಡೂ ಸೇತುವೆಗಳ ನಡುವಣ ಅಂತರ 1.75 ಕಿ.ಮೀ. ಇದೆ. ಯೋಜನೆಯಡಿ ಎರಡೂ ಬದಿಯ ದಂಡೆಗಳ 3.5 ಕಿ.ಮೀ. ಉದ್ದ ಅಭಿವೃದ್ಧಿ ಕಾಣಲಿದೆ. ಈಗಾಗಲೇ ನಗರದ ಮುಖ್ಯರಸ್ತೆಯಲ್ಲಿರುವ ನದಿ ಸೇತುವೆ ಬಳಿ ದೊಡ್ಡ ಸಿಮೆಂಟ್ ತಡೆಗೋಡೆಗಳ ನಿರ್ಮಾಣ ನಡೆಯುತ್ತಿದೆ.
ಉದ್ದೇಶಿತ ಯೋಜನೆಗೆ ಈಗಿರುವ ನದಿ ದಂಡೆಯ ಜಾಗ ಸಾಲದು. ಅಭಿವೃದ್ಧಿ ಚಟುವಟಿಕೆಗಳಿಗೆ ಹೆಚ್ಚುವರಿ ಜಾಗದ ಅಗತ್ಯವಿರುವುದರಿಂದ ನದಿಗೆ ಹೊಂದಿಕೊಂಡಂತಿರುವ ಖಾಸಗಿಯವರಿಗೆ ಸೇರಿದ ಸುಮಾರು 40 ಮೀಟರ್ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಬೇಕಿದೆ. ಈ ಕುರಿತು ಕಾವೇರಿ ನೀರಾವರಿ ನಿಗಮವು ಅಗತ್ಯ ಭೂಮಿಯ ಕುರಿತು ಲೆಕ್ಕಾಚಾರ ಹಾಕಿದ್ದು ಮುಂದೆ ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಭೂ ಸ್ವಾಧೀನಕ್ಕೆ ಮಾಲೀಕರಿಗೆ ಸೂಕ್ತ ಪರಿಹಾರ ನೀಡಲು ಇಲಾಖೆಯ ಮೇಲಿನ ಹಂತದಲ್ಲಿ ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಾಯಿ ಬಾಬಾ ದೇಗುಲದ ಹಿಂಭಾಗದಲ್ಲಿ ಬಾಲಗೇರಿ ಮತ್ತು ಕೋರ್ಟ್ ರಸ್ತೆಗೆ ಸಂಪರ್ಕ ಕಲ್ಪಿಸುವುದಕ್ಕಾಗಿ ಈಗಾಗಲೇ ಅರ್ಕಾವತಿ ನದಿಗೆ ನಿರ್ಮಿಸಿರುವ ಸೇತುವೆ ಚಿಕ್ಕದಾಗಿರುವ ಜೊತೆಗೆ ಹಳೆಯದಾಗಿದೆ. ನದಿ ದಂಡೆ ಅಭಿವೃದ್ಧಿ ಯೋಜನೆಯಡಿ ಈಗಿರುವ ಸೇತುವೆ ಸ್ಥಳದಲ್ಲೇ ಹೊಸ ಸೇತುವೆ ನಿರ್ಮಾಣ ಮಾಡಲಾಗುವುದು. ಇದರಿಂದಾಗಿ ನದಿಯಾಚೆ ಮತ್ತು ಈಚೆಗಿನ ಭಾಗದಲ್ಲಿ ಜನ ಹಾಗೂ ವಾಹನಗಳ ಓಡಾಟವು ಮತ್ತಷ್ಟು ಸರಾಗವಾಗಿ ನಡೆಯಲಿದೆ ಎಂದು ನಿಗಮದ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.