ಚನ್ನಪಟ್ಟಣ: ರೈತರ ತೋಟದಲ್ಲೇ ಬಾಳೆ ಗೊನೆ ನೇರವಾಗಿ ಖರೀದಿಸುವ ‘ಹಾಪ್ ಕಾಮ್ಸ್’ ಯೋಜನೆಗೆ ಚಾಲನೆ ನೀಡಲಾಗಿದೆ. ಈ ಸೌಲಭ್ಯವನ್ನು ರೈತರು ಬಳಸಿಕೊಳ್ಳಬೇಕೆಂದು ಹಾಪ್ ಕಾಮ್ಸ್ ಅಧ್ಯಕ್ಷ ಕೋಡಂಬಹಳ್ಳಿ ಶಿವಮಾದು ಮನವಿ ಮಾಡಿದರು.
ತಾಲೂಕಿನ ಕೆಂಗಲ್ ಬಳಿ ಹಾಪ್ ಕಾಮ್ಸ್ ಕಚೇರಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಮನಗರ ಮತ್ತು ಚನ್ನಪಟ್ಟಣ ತಾಲ್ಲೂಕಿನ ರೈತರು ಹೆಚ್ಚಾಗಿ ಬಾಳೆ ಬೆಳೆಯುತ್ತಾರೆ. ರೈತರಿಗೆ ಉತ್ತಮ ಬೆಲೆ ನೀಡುವ ಮತ್ತು ಸಾಗಣೆಗೆ ಅನುಕೂಲವಾಗುವ ರೀತಿಯಲ್ಲಿ ಅವರ ತೋಟಕ್ಕೆ ವಾಹನ ಸೌಲಭ್ಯ ಕಲ್ಪಿಸಿ ಬಾಳೆ ಹಣ್ಣು ಖರೀದಿಸಲು ಈ ಯೋಜನೆ ರೂಪಿಸಲಾಗಿದೆ ಎಂದರು.
ಜಿಲ್ಲೆಯ ರೈತರು ಹಾಪ್ ಕಾಮ್ಸ್ ಕಚೇರಿಗೆ ಬಾಳೆ ಹಣ್ಣು ತಂದು ಮಾರಾಟ ಮಾಡಲೂ ಅವಕಾಶವಿದೆ. ಅಲ್ಲದೆ, 100 ಗೊನೆಗಿಂತ ಹೆಚ್ಚು ಇದ್ದರೆ ಒಂದು ದಿನ ಮುಂಚಿತವಾಗಿ ಕಚೇರಿ ಅಧಿಕಾರಿಗಳಿಗೆ ಮಾಹಿತಿ ನೀಡಿ ವಿಳಾಸ ಕೊಟ್ಟರೆ ರೈತರ ಗ್ರಾಮಕ್ಕೆ ಬಂದು ತೋಟದಲ್ಲೇ ನೇರವಾಗಿ ಬಾಳೆ ಖರೀದಿಸಲಾಗುವುದು. ಇದರಿಂದ ರೈತರಿಗೆ ಸಾಗಣೆ ಖರ್ಚು ಉಳಿತಾಯವಾಗಲಿದೆ. ಬಾಳೆ ಹಣ್ಣು ಕೆಡದೆ ಉತ್ತಮ ಗುಣಮಟ್ಟದಲ್ಲಿ ಉಳಿಯುವುದರಿಂದ ಅದರ ಬೆಲೆಯೂ ಹೆಚ್ಚು ಸಿಗುತ್ತದೆ ಎಂದರು.
ರೈತರಿಂದ ನೇರವಾಗಿ ಖರೀದಿಸಿದ ಬಾಳೆ ಹಣ್ಣಿನ ಹಣವನ್ನು ಮೂರು-ನಾಲ್ಕು ದಿನಗಳೊಳಗೆ ಆರ್‌ಟಿಜಿಎಸ್ ಮೂಲಕ ರೈತರ ಖಾತೆಗೆ ಪೂರ್ಣ ಪಾವತಿ ಮಾಡಲಾಗುವುದು ಎಂದರು.
ಮುಂದಿನ ದಿನಗಳಲ್ಲಿ ಸ್ಥಳದಲ್ಲೇ ಹಣ ಪಾವತಿಸುವ ವ್ಯವಸ್ಥೆ ಜಾರಿಗೊಳಿಸಲು ಯೋಚಿಸಲಾಗಿದೆ. ರೈತರ ಖಾತೆಗೆ ಪೂರ್ಣ ಹಣ ಬರುವುದರಿಂದ ಅವರ ಶ್ರಮಕ್ಕೆ ಸರಿಯಾದ ಫಲ ಸಿಗಲಿದೆ ಎಂದರು.
ಹಾಪ್ ಕಾಮ್ಸ್ ನಿರ್ದೇಶಕ ರಾಜಶೇಖರ್, ಬೆಂಗಳೂರು ಹಾಪ್ ಕಾಮ್ಸ್ ಮಾರುಕಟ್ಟೆ ವ್ಯವಸ್ಥಾಪಕ ವಿನಾಯಕ್, ಟಿಎಪಿಸಿಎಂಎಸ್ ಸಿಇಒ ದ್ಯಾವಪಟ್ಟಣ ಯೋಗೇಶ್ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.