
ಚನ್ನಪಟ್ಟಣ: ’ಹತ್ತು ವರ್ಷಗಳ ಕಾಲ ನಿಮ್ಮ ಸೇವೆ ಮಾಡಿದ್ದೇನೆ. ನನಗೆ ಕೂಲಿ ಕೊಡಿ’ ಎಂದು ಸಂಸದ ಡಿ.ಕೆ.ಸುರೇಶ್ ಮನವಿ ಮಾಡಿದರು.
ತಾಲ್ಲೂಕಿನ ಲಾಳಘಟ್ಟ ತೋಟದಲ್ಲಿ ಗುರುವಾರ ಆಯೋಜಿಸಿದ್ದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ’ಕ್ಷೇತ್ರದ ಜನರ ಕೆಲಸ ಮಾಡಿದ್ದೇನೆ. ನಿಮ್ಮ ಮನೆ ಮಗ. ನಿಮ್ಮ ಯಾವುದೇ ಸಮಸ್ಯೆ ಬಗೆಹರಿಸಲು ಪ್ರತಿನಿತ್ಯ ನಿಮಗೆ ಸಿಗುತ್ತೇನೆ. ನನ್ನನು ಆಶೀರ್ವದಿಸಿ’ ಎಂದು ಮನವಿ ಮಾಡಿದರು.
’ಜನಪರ ಆಡಳಿತಕ್ಕೆ ಮತ್ತೊಂದು ಹೆಸರಾಗಿರುವ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ಹಲವು ಯೋಜನೆಗಳನ್ನು ನೀಡುತ್ತಿದೆ. ಮನೆ ಯಜಮಾನಿಗೆ ಗೃಹಲಕ್ಷ್ಮಿ ಯೋಜನೆ, ಮಹಿಳೆಯರಿಗೆ ಉಚಿತ ಬಸ್ ಸಂಚಾರ, ಪ್ರತಿಮನೆಗೂ ಉಚಿತ ವಿದ್ಯುತ್, ವಿದ್ಯಾವಂತ ನಿರುದ್ಯೋಗಿಗಳಿಗೆ ತಿಂಗಳ ಗೌರವಧನ, ಪಡಿತರ ಅಕ್ಕಿ ಹೆಚ್ಚುವರಿ ಹಣ ಈ ರೀತಿಯ ಹಲವು ಯೋಜನೆಗಳನ್ನು ನೀಡಿದೆ. ಸರ್ಕಾರದ ಸಾಧನೆಗಳನ್ನು ಪಕ್ಷದ ಕಾರ್ಯಕರ್ತರು, ಮುಖಂಡರು ಜನರಿಗೆ ತಿಳಿಸಿಕೊಡಬೇಕು‘ ಎಂದರು.
ಬೆಂಗಳೂರು ಮೈಸೂರು ಇನ್‌ಪ್ರಾಸ್ಟ್ರಕ್ಚರ್ ಕಾರಿಡರ್ ಅಧ್ಯಕ್ಷ ರಘುನಂದನ್ ರಾಮಣ್ಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಂತೂರು ವಿಶ್ವನಾಥ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್, ಸುನೀಲ್, ಮುಖಂಡರಾದ ವೀಣಾ ಚಂದ್ರು, ಚಂದ್ರಸಾಗರ್, ಮಲುವೇಗೌಡ, ವೀರೇಗೌಡ, ಶಿವಮಾದು, ಕೊಕೀಲಾರಾಣಿ, ಹರೂರು ರಾಜಣ್ಣ, ಸಿಂಗರಾಜಿಪುರ ರಾಜಣ್ಣ, ನೀಲಸಂದ್ರ ಅಣ್ಣಯ್ಯ, ಹುಣಸನಹಳ್ಳಿ ಕೃಷ್ಣಪ್ಪ, ಬೋರ್ ವೆಲ್ ರಂಗನಾಥ್ ಇತರರು ಹಾಜರಿದ್ದರು.
ಇದೇ ವೇಳೆ ಹೊಂಗನೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಿವಿಧ ಪಕ್ಷಗಳ ಹಲವು ಮಂದಿ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.