ADVERTISEMENT

ಶಿವಕುಮಾರ ಶ್ರೀಗಳ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 8:27 IST
Last Updated 8 ನವೆಂಬರ್ 2019, 8:27 IST
ಮಾಗಡಿ ತಾಲ್ಲೂಕಿನ ವೀರಾಪುರ ಗ್ರಾಮದಲ್ಲಿ ಶಿವಕುಮಾರ ಶ್ರೀಗಳ ಪ್ರತಿಮೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೂಮಿಪೂಜೆ ನೆರವೇರಿಸಿದರು.
ಮಾಗಡಿ ತಾಲ್ಲೂಕಿನ ವೀರಾಪುರ ಗ್ರಾಮದಲ್ಲಿ ಶಿವಕುಮಾರ ಶ್ರೀಗಳ ಪ್ರತಿಮೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೂಮಿಪೂಜೆ ನೆರವೇರಿಸಿದರು.   

ರಾಮನಗರ: ಮಾಗಡಿ ತಾಲ್ಲೂಕಿನ ವೀರಾಪುರ ಗ್ರಾಮದಲ್ಲಿ ಶಿವಕುಮಾರ ಶ್ರೀಗಳ 111 ಅಡಿ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.

ರಾಜ್ಯದ ಅತಿ ಎತ್ತರದ ಪ್ರತಿಮೆ ಇದಾಗಲಿದೆ. ಇದೇ ಸಂದರ್ಭ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಶಂಕುಸ್ಥಾಪನೆ ನೆರವೇರಿಸಿದರು.

ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್, ಸಂಸದರಾದ ಡಿ.ಕೆ.ಸುರೇಶ್, ಬಸವರಾಜು, ಶಾಸಕ ಎ.ಮಂಜುನಾಥ್, ತುಮಕೂರಿನ ಸಿದ್ದಗಂಗಾ ಮಠದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಇದ್ದರು.

ADVERTISEMENT

ಪ್ರತಿಮೆ ನಿರ್ಮಾಣ ಮರು ಪರಿಶೀಲನೆ ಮಾಡಿ: ಸುರೇಶ್ ಒತ್ತಾಯ

ರಾಮನಗರ: ವೀರಾಪುರದಲ್ಲಿ ಶಿವಕುಮಾರ ಶ್ರೀಗಳ ಪ್ರತಿಮೆ ನಿರ್ಮಾಣ ನಿರ್ಣಯವನ್ನು ಸರ್ಕಾರ ಮರು ಪರಿಶೀಲಿಸಬೇಕು. ಇಲ್ಲಿಯ ಬದಲಿಗೆ ಸಿದ್ದಗಂಗಾ ಬೆಟ್ಟದಲ್ಲಿ ಶ್ರೀಗಳ ಪ್ರತಿಮೆ ನಿರ್ಮಾಣ ಮಾಡಬೇಕು ಎಂದು ಸಂಸದ ಡಿ.ಕೆ. ಸುರೇಶ್ ಆಗ್ರಹಿಸಿದರು.

ವೀರಾಪುರದಲ್ಲಿ ಶುಕ್ರವಾರ ಶಿವಕುಮಾರ ಶ್ರೀಗಳ ಪ್ರತಿಮೆ ನಿರ್ಮಾಣದ ಶಂಕುಸ್ಥಾಪನೆ ಕಾರ್ಯಕ್ರ‌ಮದಲ್ಲಿ ಅವರು ಮಾತನಾಡಿದರು.
ಅಕ್ಷರ, ಅನ್ನ, ಉದ್ಯೋಗ, ಸನ್ಮಾರ್ಗದ ನಡೆಯು ಶ್ರೀಗಳ ಆಶಯ ಆಗಿತ್ತು. ಅದಕ್ಕೆ ಮೊದಲ ಆದ್ಯತೆ ಸಿಗಬೇಕು. ಬಡವರಿಗಾಗಿ ಇಲ್ಲೊಂದು ವಿಶ್ವವಿದ್ಯಾಲಯ ‌ಸ್ಥಾಪನೆ ಆಗಬೇಕು. ಐವತ್ತು ಎಕರೆ ಪ್ರದೇಶದಲ್ಲಿ ಶಾಲೆ-ಕಾಲೇಜು ಸ್ಥಾಪನೆ ಮಾಡಿ ಪ್ರಾಥಮಿಕ ಹಂತದಿಂದ ಪದವಿ ವರೆಗೆ ಓದಿಗೆ ಅವಕಾಶ ಸಿಗಬೇಕು. ಪ್ರತಿಮೆಯನ್ನು ಸಿದ್ದಗಂಗಾ ಬೆಟ್ಟದಲ್ಲೇ ಮಾಡುವುದು ಸೂಕ್ತ ಎಂದು ಸಲಹೆ ನೀಡಿದರು.

ಮೆಡಿಕಲ್ ಕಾಲೇಜು ಕಿತ್ತುಕೊಳ್ಳಬೇಡಿ: ' ಚಿಕ್ಕಬಳ್ಳಾಪುರ ಕ್ಕೆ ಹೊಸ ಮೆಡಿಕಲ್ ಕಾಲೇಜು ಕೊಡಿ. ಆದರೆ ಕನಕಪುರಕ್ಕೆ ಮಂಜೂರಾಗಿದ್ದ ಕಾಲೇಜನ್ನು ಕಿತ್ತು ಅಲ್ಲಿಗೆ ಕೊಡಬೇಡಿ' ಎಂದು ಸುರೇಶ್ ಮುಖ್ಯಮಂತ್ರಿ ಗೆ ಮನವಿ‌ ಮಾಡಿದರು.

ಕನಕಪುರಕ್ಕೆ ಮೆಡಿಕಲ್ ಕಾಲೇಜು ನೀಡುವಂತೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗಲೇ ಮನವಿ‌ ಮಾಡಿದ್ದೆವು. ಕುಮಾರಸ್ವಾಮಿ ಅದಕ್ಕೆ ಅನುಮೋದನೆ ನೀಡಿದರು. ಈಗಾಗಲೇ ಕಾರ್ಯಾದೇಶ ದೊರೆತು ಟೆಂಡರ್ ಕೂಡ ಆಗಿದೆ. ಯಡಿಯೂರಪ್ಪ ಕೊಡುಗೈ ದಾನಿಗಳು. ಅವರು ಇದೇ ವೇದಿಕೆಯಲ್ಲಿ ಅಥವಾ ಚಿಕ್ಕಬಳ್ಳಾಪುರ ದಲ್ಲಿ ಈ ಬಗ್ಗೆ ಘೋಷಣೆ ಮಾಡಬೇಕು. ಕನಕಪುರಕ್ಕೆ ಅನ್ಯಾಯ ಮಾಡಬಾರದು' ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.