ರಾಮನಗರ: ಬಿಡದಿ ಸಮಗ್ರ ಉಪನಗರ ಯೋಜನೆ ರೂಪಿಸಿದ್ದೇ ಜೆಡಿಎಸ್ ನಾಯಕರಾದ ಎಚ್.ಡಿ. ದೇವೇಗೌಡರ ಸುಪುತ್ರ. ಈಗ ಯೋಜನೆ ವಿರೋಧಿಸಿ ಹೋರಾಟಕ್ಕೆ ಬರಲು ಮುಂದಾಗಿರುವ ಗೌಡರು, ಆಗಲೇ ಯಾಕೆ ರದ್ದು ಮಾಡಿಸಲಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.
ಯೋಜನೆ ವಿರೋಧಿಸಿ ಬಿಡದಿ ಹೋಬಳಿಯ ಭೈರಮಂಗಲದಲ್ಲಿ ರೈತರು ನಡೆಸುತ್ತಿರುವ ಅನಿರ್ದಿಷ್ಟವಾಧಿ ಧರಣಿಯನ್ನು ದೇವೇಗೌಡರು ಬೆಂಬಲಿಸಿ, ಸ್ಥಳಕ್ಕೆ ಭಾನುವಾರ ಭೇಟಿ ನೀಡುತ್ತಿರುವುದರ ಕುರಿತು ಮಾಧ್ಯಮದವರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
ಆರಂಭದಲ್ಲಿ ದೇವೇಗೌಡರೇ ಯೋಜನೆಗೆ ಸಹಕಾರ ಕೊಟ್ಟು, ಈಗ ಡಿನೋಟಿಫಿಕೇಷನ್ ಮಾಡಿ ಎಂದರೆ ಹೇಗೆ? ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರ ಇದ್ದಾಗಲೂ ಯೋಜನೆ ರದ್ದುಪಡಿಸಿ ಎಂದು ಕೇಳಬಹುದಿತ್ತಲ್ಲವೆ? ಈಗ ಯೋಜನೆ ವಿರೋಧಿಸಿ ನಡೆಯುತ್ತಿರುವ ಹೋರಾಟದಲ್ಲಿ ಗೌಡರು ಭಾಗವಹಿಸಿದರೆ ಸಂತೋಷ ಎಂದು ವ್ಯಂಗ್ಯವಾಡಿದರು.
ಗೌಡರ ಮಾತು ಕೇಳಲು ನಾನೀಗ ತಯಾರಿಲ್ಲ. ಕಾನೂನು ಚೌಕಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ನಮಗೆ ರೈತರ ಸಹಕಾರವಿದ್ದು, ಯಾವುದೇ ಕಾರಣಕ್ಕೂ ಯೋಜನೆ ನಿಲ್ಲಿಸುವುದಿಲ್ಲ. ರಾಜಕೀಯಕ್ಕಾಗಿ ವಿರೋಧ ಮಾಡುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ನವರಿಗೂ ವಾಸ್ತವಾಂಶ ಗೊತ್ತಿದೆ. ಆದರೂ, ಸುಮ್ಮನೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳಿದರು.
ಯೋಜನಾ ಪ್ರದೇಶದಲ್ಲಿ ಟೊಯೊಟಾದವರು ಸಹ 300 ಎಕರೆ ಜಮೀನು ಕೇಳಿದ್ದಾರೆ. ಇನ್ನೂ ಹಲವರು ಮುಂದೆ ಬಂದಿದ್ದಾರೆ. ಯೋಜನೆ ವಿರುದ್ಧದ ಹೋರಾಟಕ್ಕೆ ನಾವು ಬೇಸರ ಮಾಡಿಕೊಳ್ಳುವುದಿಲ್ಲ. ಮಾಡುವವರು ಮಾಡಿಕೊಳ್ಳಲಿ. ನಾವು ಯೋಜನೆ ಜಾರಿಗೊಳಿಸುತ್ತೇವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.