ADVERTISEMENT

ಜಿಬಿಐಟಿ ಎಚ್‌ಡಿಕೆ ಕೂಸು: ಗೌಡರು ಆಗ ಏಕೆ ವಿರೋಧಿಸಲಿಲ್ಲ?: ಡಿ.ಕೆ. ಶಿವಕುಮಾರ್

ಆಗ ಸಹಕರಿಸಿ ಈಗ ವಿರೋಧ ಏಕೆ: ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 0:04 IST
Last Updated 28 ಸೆಪ್ಟೆಂಬರ್ 2025, 0:04 IST
<div class="paragraphs"><p>ರಾಮನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಗ್ಯಾರಂಟಿ ಯೋಜನೆಗಳ ಕಾರ್ಯಾಗಾರದ ಶಕ್ತಿ ಯೋಜನೆಯ ಮಳಿಗೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ನೀಡಿದರು.&nbsp;</p></div>

ರಾಮನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಗ್ಯಾರಂಟಿ ಯೋಜನೆಗಳ ಕಾರ್ಯಾಗಾರದ ಶಕ್ತಿ ಯೋಜನೆಯ ಮಳಿಗೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ನೀಡಿದರು. 

   

ರಾಮನಗರ: ಬಿಡದಿ ಸಮಗ್ರ ಉಪನಗರ ಯೋಜನೆ (ಜಿಬಿಐಟಿ) ರೂಪಿಸಿದ್ದೇ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಸುಪುತ್ರ ಎಚ್.ಡಿ.‌ ಕುಮಾರಸ್ವಾಮಿ. ಆಗ ಯೋಜನೆಗೆ ಸಹಕರಿಸಿದ್ದ ಗೌಡರು ಈಗ ಯಾಕೆ ವಿರೋಧಿಸುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.

ಯೋಜನೆ ವಿರೋಧಿಸಿ ಬಿಡದಿ ಹೋಬಳಿಯ ಭೈರಮಂಗಲದಲ್ಲಿ ರೈತರು ನಡೆಸುತ್ತಿರುವ ಅನಿರ್ದಿಷ್ಟವಾಧಿ ಧರಣಿ ಬೆಂಬಲಿಸಿ, ಸ್ಥಳಕ್ಕೆ ದೇವೇಗೌಡರು ಭಾನುವಾರ ಭೇಟಿ ನೀಡುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.

ADVERTISEMENT

ತಮ್ಮ ಪುತ್ರನ ಅವಧಿಯಲ್ಲೇ ಯಾಕೆ ಗೌಡರು ಯೋಜನೆ ರದ್ದು ಮಾಡಿಸಲಿಲ್ಲ. ಬಿಜೆಪಿ ಸರ್ಕಾರ 900 ಎಕರೆಯನ್ನು ಕೆಐಎಡಿಬಿಗೆ ಕೊಟ್ಟಾಗಲೂ ಯಾಕೆ ಸುಮ್ಮನಿದ್ದರು ಎಂದು ಕೇಳಿದರು.

‘ಆಗ ಸಹಕಾರ ಕೊಟ್ಟು ಈಗ ಡಿನೋಟಿಫಿಕೇಷನ್ ಮಾಡಿ ಎಂದರೆ ಹೇಗೆ? ಅವರ ಮಾತು ಕೇಳಲು ನಾನೀಗ ತಯಾರಿಲ್ಲ. ಕಾನೂನು ಚೌಕಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇನೆ. ನಮಗೆ ರೈತರ ಸಹಕಾರವಿದೆ. ಯಾವುದೇ ಕಾರಣಕ್ಕೂ ಯೋಜನೆ ನಿಲ್ಲಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಯೋಜನೆ ವಿರೋಧಿಸಿ ರಾಜಕೀಯ ಹೋರಾಟಕ್ಕೆ ನಾನು ಬೇಸರ ಮಾಡಿಕೊಳ್ಳುವುದಿಲ್ಲ. ಎಲ್ಲರಿಗೂ ವಾಸ್ತವಾಂಶ ಗೊತ್ತಿದೆ. ಪೆನ್ ಹಿಡಿಯುವ ಅಧಿಕಾರವಿದ್ದಾಗ ಇದೇ ಬಿ.ಎಸ್. ಯಡಿಯೂರಪ್ಪ, ಅಶೋಕ್ ಯಾಕೆ ಭೂಮಿ ಬಿಡಿಸಲಿಲ್ಲ? ದೇವೇಗೌಡರು ತಮ್ಮ ಮಗನಿಗೆ ಇದು ಸರಿ ಇಲ್ಲ ಬೇಡ ಎಂದು ಹೇಳಬಹುದಿತ್ತಲ್ಲವೇ? ಆಗ ಇದು ಅವರದ್ದೇ ಕ್ಷೇತ್ರವಾಗಿತ್ತು. ಆಗ ನಾನು ಮಂತ್ರಿಯಾಗಿರಲಿಲ್ಲ. ಅವತ್ತು ಸರಿ ಮಾಡದೇ, ಇವತ್ತು ರಾಜಕಾರಣ ಮಾಡಲು ನಮ್ಮ ಕಡೆ ಬೆರಳು ತೋರಿಸುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ಯೋಜನಾ ಪ್ರದೇಶದಲ್ಲಿ ಟೊಯೊಟಾ ಕಂಪನಿಯವರು ಸಹ ನನ್ನನ್ನು ಭೇಟಿ ಮಾಡಿ ವಸತಿ ಉದ್ದೇಶಕ್ಕೆ 300 ಎಕರೆ ಭೂಮಿ ಬೇಕು ಎಂದು ಕೇಳಿದ್ದಾರೆ. ಭೂಮಿ ಕೊಡುವುದು ಮುಖ್ಯವಲ್ಲ. ಆದರೆ, ಜಪಾನ್ ಉಪನಗರದ ಮಾದರಿಯಲ್ಲೇ ಇಲ್ಲೂ ಉಪನಗರ ನಿರ್ಮಿಸಬೇಕು ಎಂದು ನಿರ್ದೇಶನ ನೀಡಿದ್ದೇನೆ’ ಎಂದು ತಿಳಿಸಿದರು.

‘ಬ್ರೋಕರ್‌ಗಳ ಮಾತು ಕೇಳುವುದಿಲ್ಲ’

‘ಯೋಜನೆ ಕೈ ಬಿಡಿ ಎಂದು ಯಾರೊ ಬ್ರೋಕರ್‌ಗಳು ಹೇಳುತ್ತಾರೆಂದು ನಾನು ಕೇಳುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದರು.  ನಿಜವಾದ ರೈತರು ನಕಲಿ ರೈತರು ಹಾಗೂ ಏಜೆಂಟರು ಯಾರೆಂದು ನನಗೆ ಗೊತ್ತಿದೆ. ಸ್ಥಳೀಯ ಶಾಸಕ ಎಚ್‌.ಸಿ. ಬಾಲಕೃಷ್ಣ ಅವರ ರಾಜಕೀಯ ವಿರೋಧಿಗಳು ಮಾತ್ರ ಇಂದು ಪ್ರತಿಭಟನೆ ಮಾಡುತ್ತಿದ್ದಾರೆ ಎಂದರು. ‘ಕೆಐಎಡಿಬಿಗೆ 900 ಎಕರೆ ಕೊಟ್ಟಾಗ ಯಾರ‍್ಯಾರು ಹಣ ಪಡೆದಿದ್ದಾರೆ ಎನ್ನುವ ಪಟ್ಟಿ ಬಿಡುಗಡೆ ಮಾಡಲೇ? ಕಾನೂನಿನ ಚೌಕಟ್ಟಿನಲ್ಲಿ ಮುಂದುವರಿಯುತ್ತಿರುವ ನಾವು ರೈತರಿಗೆ ದೊಡ್ಡ ಕೊಡುಗೆ ಘೋಷಿಸಿದ್ದೇವೆ. ಪರಿಹಾರ ಬೇಡ ಎನ್ನುವವರಿಗೆ ಹಿಂದಿನ ಅಧಿಸೂಚನೆಯಂತೆ ಮಾರ್ಗಸೂಚಿ ಮೌಲ್ಯದ ಆಧಾರದ ಮೇಲೆ ಕೋರ್ಟ್‌ನಲ್ಲಿ ಪರಿಹಾರದ ಹಣವನ್ನು ಠೇವಣಿ ಇಡುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.