ADVERTISEMENT

ರಾಮನಗರ | ದ್ವಿಭಾಷಾ ನೀತಿ ಜಾರಿಗೊಳಿಸಿ: ಡಾ.ಎಂ.ಬೈರೇಗೌಡ

‘ನಮ್ಮೂರ ಕನ್ನಡದ ಕಂಪು’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 4:10 IST
Last Updated 16 ನವೆಂಬರ್ 2025, 4:10 IST
ರಾಮನಗರ ತಾಲ್ಲೂಕಿನ ಬಿಳಗುಂಬ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನಡೆದ ‘ನಮ್ಮೂರ ಕನ್ನಡದ ಕಂಪು’ ಕಾರ್ಯಕ್ರಮದಲ್ಲಿ ವಿದ್ವಾಂಸ ಡಾ.ಎಂ.ಬೈರೇಗೌಡ ಅವರನ್ನು ಹಿರಿಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಅಭಿನಂದಿಸಿ ಗೌರವಿಸಿದರು 
ರಾಮನಗರ ತಾಲ್ಲೂಕಿನ ಬಿಳಗುಂಬ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನಡೆದ ‘ನಮ್ಮೂರ ಕನ್ನಡದ ಕಂಪು’ ಕಾರ್ಯಕ್ರಮದಲ್ಲಿ ವಿದ್ವಾಂಸ ಡಾ.ಎಂ.ಬೈರೇಗೌಡ ಅವರನ್ನು ಹಿರಿಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಅಭಿನಂದಿಸಿ ಗೌರವಿಸಿದರು    

ರಾಮನಗರ: ಪೋಷಕರು ಆಂಗ್ಲ ಭಾಷೆ ವ್ಯಾಮೋಹದಿಂದಾಗಿ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವ ಪ್ರವೃತ್ತಿ ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿ ಎಂದು ಜಾನಪದ ವಿದ್ವಾಂಸ ಡಾ.ಎಂ.ಬೈರೇಗೌಡ ತಿಳಿಸಿದರು.

ಬಿಳಗುಂಬ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ‘ನಮ್ಮೂರ ಕನ್ನಡದ ಕಂಪು’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣದ ಕಾಶಿ ಎನಿಸಿದ್ದ ಸರ್ಕಾರಿ ಶಾಲೆಗಳು ಬಲಿ ಪಡೆಯುವ ಕಾಲಘಟ್ಟಕ್ಕೆ ಬಂದಿದೆ ಎಂದು ಆತಂಕ ವ್ಯಕ್ತಪಡಿಸಿದರು.

‘ಕನ್ನಡ ಭಾಷೆಗೆ ಇತರ ಭಾಷೆ ಶಬ್ದಗಳನ್ನು ತನ್ನೊಳಗೆ ಅಂತರ್ಗತಗೊಳಿಸುವ ಶಕ್ತಿ ಇದೆ. ಇದು ಜಗತ್ತಿನ ಅಗ್ರಮಾನ್ಯ ಭಾಷೆಗಳ ಸ್ಥಾನದಲ್ಲಿ ನಿಲ್ಲುವ ಸಾಮರ್ಥ್ಯ ಹೊಂದಿದೆ. ಆದರೆ, ಮುಂದಿನ ಪೀಳಿಗೆ ಇದನ್ನು ನೆನಪಿಟ್ಟುಕೊಳ್ಳುತ್ತದೆಯೇ ಎಂಬ ಅನುಮಾನ ಕಾಡುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ನವೆಂಬರ್ ಕನ್ನಡಿಗರಾಗುವುದು ಬೇಡ. ನಿತ್ಯ ಕನ್ನಡಿಗರಾಗಬೇಕು. ಕನ್ನಡದ ಬೆಳವಣಿಗೆಗೆ ಶ್ರಮಿಸಬೇಕು. ಈ ಆಶಯ ಈಡೇರಿಸಲು ತ್ರಿಭಾಷಾ ನೀತಿ ತ್ಯಜಿಸಬೇಕು. ಸರ್ಕಾರ ಶಿಕ್ಷಣದ ಮಹತ್ವ ಅರಿತು ಕಾರ್ಯನಿರ್ವಹಿಸಬೇಕು’ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್, ಪೋಷಕರಲ್ಲಿನ ಆಂಗ್ಲ ಭಾಷಾ ವ್ಯಾಮೋಹ ಕಡಿಮೆ ಮಾಡದಿದ್ದರೆ ಕನ್ನಡದ ಭವಿಷ್ಯ ಕುಂಠಿತವಾಗುವ ಅಪಾಯವಿದೆ ಎಂದು ಹೇಳಿದರು.

ಖಾಸಗಿ ಶಾಲಾ ಮಂಡಳಿ ಅಧ್ಯಕ್ಷ ಪಟೇಲ್.ಸಿ.ರಾಜು, ಸರ್ಕಾರ ಆಡಳಿತದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುವ ಇಚ್ಛಾಶಕ್ತಿ ತೋರಿಸುತ್ತಿಲ್ಲ ಎಂದು ಟೀಕಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತ್ ಅಧ್ಯಕ್ಷ ಬಿ.ಟಿ.ದಿನೇಶ್ ಬಿಳಗುಂಬ, ಜಿಲ್ಲಾ ಲೇಖಕರ ವೇದಿಕೆ ಅಧ್ಯಕ್ಷ ಕೂ.ಗಿ ಗಿರಿಯಪ್ಪ, ಮುಖ್ಯ ಶಿಕ್ಷಕಿ ಲತಾ ಎಚ್. ಕಜರಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್‌ಗೌಡ ಸೇರಿದಂತೆ ಹಲವರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.