ರಾಮನಗರ: ‘ರಾಮನಗರ ಸೇರಿದಂತೆ ರಾಜಧಾನಿ ಹೊರವಲಯದ ನಗರಗಳಿಗೂ ಬಿಎಂಟಿಸಿ ಬಸ್‌ಗಳ ಕಾರ್ಯಾಚರಣೆಗೆ ಇದ್ದ ಅಡತಡೆ ನಿವಾರಣೆಯಾಗಿದೆ. ಮುಂದೆ ರಾಮನಗರಕ್ಕೂ ಬಿಎಂಟಿಸಿ ವಿಸ್ತರಿಸಲಾಗುವುದು’ ಎಂದು ಸಾರಿಗೆ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಭರವಸೆ ನೀಡಿದರು.
ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸೋಮವಾರ ರಾಮನಗರ ನಗರದ ವ್ಯಾಪ್ತಿಯಲ್ಲಿ ನಗರ ಸಾರಿಗೆ ಬಸ್ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಮುಂಚೆ ಬೆಂಗಳೂರು ನಗರದ ಗಡಿಯಿಂದ 25 ಕಿ.ಮೀ. ವ್ಯಾಪ್ತಿಯಲ್ಲಿ ಮಾತ್ರ ಬಿಎಂಟಿಸಿ ಸೇವೆ ಒದಗಿಸಲು ಅವಕಾಶವಿತ್ತು. ಈಗ ಅದನ್ನು 40 ಕಿ.ಮೀ. ವಿಸ್ತರಿಸಿ ಆದೇಶ ಹೊರಡಿಸಲಾಗಿದೆ’ ಎಂದರು.
‘ಆದೇಶದಿಂದಾಗಿ ರಾಮನಗರ, ಮಾಗಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಗೂ ಬಿಎಂಟಿಸಿ ಸಂಚಾರಕ್ಕೆ ವ್ಯವಸ್ಥೆ ಮಾಡಬಹುದಾಗಿದೆ. ಮುಂದಿನ ದಿನಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಸೂಕ್ತ ನಿರ್ಧಾರವನ್ನು ಕೈಗೊಳ್ಳಲಾಗುವುದು. ಬೆಂಗಳೂರು ದಕ್ಷಿಣ ಜಿಲ್ಲೆಯ ಸಾತನೂರಿನಲ್ಲಿ ಸಾರಿಗೆ ಘಟಕ ನೀಡಬೇಕು ಎನ್ನುವ ಬೇಡಿಕೆ ಇದ್ದು, ಘಟಕ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
‘ಸರ್ಕಾರದ ಮಹತ್ವಕಾಂಕ್ಷಿ ಶಕ್ತಿ ಯೋಜನೆಯಡಿ ಮಹಿಳೆಯರು 500 ಟ್ರಿಪ್ ಪ್ರಯಾಣಿಸಿದ್ದಾರೆ. ಇದಕ್ಕಾಗಿ ಸರ್ಕಾರ ₹13 ಸಾವಿರ ಕೋಟಿ ವೆಚ್ಚ ಮಾಡಿದೆ. ಪ್ರಯಾಣದ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ಉದ್ಯೋಗಾವಕಾಶವು ಹೆಚ್ಚಾಗಿದೆ. ಮೂಲಗಳ ಪ್ರಕಾರ ಶೇ 23ರಷ್ಟು ಉದ್ಯೋಗ ಸೃಷ್ಠಿಯಾಗಿದೆ. ಬಡವರಿಗೆ ಅನುಕೂಲವಾಗಿರುವ ಈ ಯೋಜನೆಯನ್ನು ವಿರೋಧಿಸುವುದರಲ್ಲಿ ಅರ್ಥವಿಲ್ಲ’ ಎಂದು ತಿಳಿಸಿದರು.
ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಮಾತನಾಡಿ, ‘ರಾಮನಗರಕ್ಕೆ ನಗರ ಸಾರಿಗೆ ವ್ಯವಸ್ಥೆ ಬೇಕೆಂಬ ಮನವಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಸ್ಪಂದಿಸುವ ಮೂಲಕ, ಮೂರು ಬಸ್‌ಗಳ ಸಂಚಾರಕ್ಕ ಅವಕಾಶ ಕಲ್ಪಿಸಿದ್ದಾರೆ. ಇದರಿಂದ ನಗರದ ಜನರ ಬಹುದಿನಗಳ ಕನಸು ನನಸಾಗಿದೆ’ ಎಂದು ಕೃತಜ್ಞತೆ ಸಲ್ಲಿಸಿದರು.
‘ಹೊಸ ನಗರ ಸಾರಿಗೆ ಬಸ್‌ಗಳು ಮಾಯಗಾನಹಳ್ಳಿಯಿಂದ ಕೆಂಗಲ್‌ವರೆಗೆ ನಿತ್ಯ 25 ಟ್ರಿಪ್ ಓಡಾಟ ಮಾಡಲಿವೆ. ಇದರಿಂದಾಗಿ ವಿದ್ಯಾರ್ಥಿಗಳು, ಕಾರ್ಮಿಕರು ಸೇರಿದಂತೆ ನಿತ್ಯ ತಮ್ಮ ಕೆಲಸ ಕಾರ್ಯಕ್ಕೆ ನಗರಕ್ಕೆ ಬಂದು ಹೋಗುವವರಿಗೆ ಅನುಕೂಲವಾಗಲಿದೆ’ ಎಂದರು.
ಬಸ್‌ಗಳ ಸಂಚಾರಕ್ಕೆ ಚಾಲನೆ ನೀಡುವ ವೇದಿಕೆ ಕಾರ್ಯಕ್ರಮ ಮುಗಿದ ಬಳಿಕ ಸಚಿವ ರಾಮಲಿಂಗಾ ರೆಡ್ಡಿ, ಶಾಸಕ ಇಕ್ಬಾಲ್ ಹುಸೇನ್, ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಅವರು ಟಿಕೆಟ್ ಖರೀದಿಸಿ ಬಸ್‌ಗಳಲ್ಲಿ ಸಂಚಾರ ಮಾಡಿದರು.
ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ. ರಾಜು, ತಾಲ್ಲೂಕು ಅಧ್ಯಕ್ಷ ವಿ.ಎಚ್. ರಾಜು, ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ, ಉಪಾಧ್ಯಕ್ಷೆ ಆಯಿಷಾ ಬಾನು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್. ಗಂಗಾಧರ್, ಮುಖಂಡ ಸಿ.ಎನ್.ಆರ್. ವೆಂಕಟೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಪುರುಷೋತ್ತಮ್, ನಗರಸಭೆ ಸದಸ್ಯರು, ಕಾಂಗ್ರೆಸ್ ಮುಖಂಡರು ಹಾಗೂ ಇತರರು ಇದ್ದರು.
ಬೆಂಗಳೂರು ದಕ್ಷಿಣ ಜಿಲ್ಲಾ ಕೇಂದ್ರವಾದ ರಾಮನಗರಲ್ಲಿ ಹೊಸ ಬಸ್ ನಿಲ್ದಾಣ ನಿರ್ಮಾಣ ಮಾಡಬೇಕು ಎಂಬ ಬೇಡಿಕೆ ಇದೆ. ಸೂಕ್ತ ಜಾಗ ಕೊಡಿಸಿದರೆ ಬಸ್ ನಿಲ್ದಾಣ ನಿರ್ಮಿಸಿ ಕೊಡಲಾಗುವುದು. ಹಳೆ ನಿಲ್ದಾಣವನ್ನು ಶೀಘ್ರ ನವೀಕರಿಸಲಾಗುವುದುರಾಮಲಿಂಗಾ ರೆಡ್ಡಿ ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ
ರಾಮನಗರಲ್ಲಿ ನಗರ ಸಾರಿಗೆ ಬಸ್ ಸಂಚಾರ ಆರಂಭಗೊಂಡಿರುವ ಈ ವಿಶೇಷ ದಿನ ಇತಿಹಾಸದ ಪುಟ ಸೇರಿದೆ. ಆ ಮೂಲಕ ಶಾಲಾ–ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರ ಬಹುದಿನಗಳ ಬೇಡಿಕೆ ಈಡೇರಿದೆಎಚ್.ಎ. ಇಕ್ಬಾಲ್ ಹುಸೇನ್ ಶಾಸಕ
‘ಬಿಜೆಪಿಗೆ ಕೋಮುವಾದ ಬಿಟ್ಟು ಬೇರೇನೂ ಗೊತ್ತಿಲ್ಲ’
‘ಬಿಜೆಪಿಯವರಿಗೆ ಕೋಮುವಾದ ಹುಟ್ಟು ಹಾಕುವುದನ್ನು ಬಿಟ್ಟರೆ ಬೇರೇನು ಗೊತ್ತಿಲ್ಲ. ದಸರಾ ಉದ್ಘಾಟನೆ ವಿಷಯದಲ್ಲೂ ಅವರು ಅದೇ ಕೆಲಸ ಮಾಡುತ್ತಿದ್ದಾರೆ. ನಾವೆಲ್ಲರೂ ಭಾರತೀಯರೆಂದು ಒಪ್ಪಿದ ಮೇಲೆ ಅನಗತ್ಯ ಚರ್ಚೆ ಬೇಡ. ದೇಶದಲ್ಲಿ ಭಾರತೀಯರು ಬದುಕಲಿಕ್ಕೆ ಬಿಡಬೇಕು. ದೇಶ ವಿರೋಧಿಸುವವರ ಪರವಾಗಿ ನಾವ್ಯಾರು ಇಲ್ಲ. ಆದರೆ ಬಿಜೆಪಿಯವರು ಪದೇ ಪದೇ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರಬಾರದು. ಸಂವಿಧಾನಕ್ಕೆ ಅಗೌರವ ತೋರದೆ ರಾಜ್ಯದ ಘನತೆಗೆ ಧಕ್ಕೆಯಾಗದಂತೆ ನಡೆದುಕೊಳ್ಳಬಾರದು ಎಂದು ಬಿಜೆಪಿ ಸ್ನೇಹಿತರಿಗೆ ಅನೇಕ ಬಾರಿ ಹೇಳಿದ್ದೇನೆ’ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಹೇಳಿದರು. ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಆಯ್ಕೆ ಪ್ರಶ್ನಿಸಿ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ವಜಾ ಕುರಿತ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
‘ಬಿಜೆಪಿಯಿಂದ ಜೆಡಿಎಸ್ ಮುಳುಗಲಿದೆ’
‘ನಿರುದ್ಯೋಗಿಗಳಾಗಿರುವ ಬಿಜೆಪಿಯವರಿಗೆ ಯಾವುದೇ ವಿಷಯ ಸಿಕ್ಕರೂ ಅದಕ್ಕೆ ಕೋಮು ಸ್ಪರ್ಶ ನೀಡಿ ವಿವಾದ ಮಾಡುತ್ತಾರೆ. ಹೀಗಾದರೆ ಮುಂದಿನ 10 ವರ್ಷವೂ ವಿರೋಧ ಪಕ್ಷದಲ್ಲೇ ಇರುತ್ತಾರೆ. ಹಿಂದೆ ಹಿಜಾಬ್ ಹಲಾಲ್ ಆಜಾನ್ ವಿಷಯದಲ್ಲಿ ವಿವಾದ ಮಾಡಿದಾಗ ಜನ ಅದಕ್ಕೆ ಕ್ಯಾರೇ ಎನ್ನಲಿಲ್ಲ. ಈಗ ಜೆಡಿಎಸ್ ಜೊತೆ ಸೇರಿ ಮದ್ದೂರಿನಲ್ಲೇ ಏನು ಮಾಡಿದರೆಂಬುದು ಜಗಜ್ಜಾಹೀರಾಗಿದೆ. ಬಿಜೆಪಿಯವರು ಜೆಡಿಎಸ್ ಅನ್ನು ಮುಳುಗಿಸಲಿದ್ದಾರೆ’ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು. ‘ಹಿಂದೂ ಧರ್ಮದಲ್ಲಿ ಸಮಾನತೆ ಇಲ್ಲದ ಕಾರಣಕ್ಕೆ ಮತಾಂತರ ನಡೆಯುತ್ತಿದೆ’ ಎಂಬ ಮುಖ್ಯಮಂತ್ರಿ ಹೇಳಿಕೆಗೆ ವಿರೋಧಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರೆಡ್ಡಿ ‘ಹಿಂದೂ ಧರ್ಮ ಮುಂಚೆ ಅಖಂಡವಾಗಿತ್ತು. ಅಸಮಾನತೆ ಕಾರಣಕ್ಕೆ ಬೇರೆ ಧರ್ಮಗಳು ಸ್ಥಾಪನೆಯಾದವು. ಬೌದ್ಧ ಧರ್ಮ ಯಾಕೆ ಸ್ಥಾಪನೆ ಆಯ್ತು? ಜೈನರು ಸಿಖ್ಖರು ಎಲ್ಲಾ ಹಿಂದೂಗಳೇ ಅಲ್ಲವೆ? ಬಸವಣ್ಣ ಎಲ್ಲರಿಗೂ ಲಿಂಗಧಾರಣೆ ಮಾಡಿ ವೀರಶೈವ ಲಿಂಗಾಯತ ಧರ್ಮ ಯಾಕೆ ಸ್ಥಾಪಿಸಿದರು ಎಂಬುದಕ್ಕೆ ಬಿಜೆಪಿಯವರು ಮೊದಲು ಉತ್ತರಿಸಲಿ’ ಎಂದು ಸವಾಲು ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.