ರಾಮನಗರ: ಜಾತಿಗಳ ಸ್ಥಿತಿಗತಿ ಅರಿತು ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ರಾಜ್ಯದಾದ್ಯಂತ ಸೋಮವಾರದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿವಾರು ಸಮೀಕ್ಷೆ) ಕೈಗೊಂಡಿದೆ. ಮೊಬೈಲ್ ಆಧಾರಿತ ಈ ಸಮೀಕ್ಷೆಗೆ ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಸಮೀಕ್ಷೆಗೆ ನಿಯೋಜನೆಗೊಂಡಿರುವ ಗಣತಿದಾರರು ಮನೆ ಬಾಗಿಲಿಗೆ ಬಂದು ಮಾಹಿತಿ ಸಂಗ್ರಹಿಸಲಿದ್ದಾರೆ. ಕುಟುಂಬದ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಅರಿಯಲು ಪೂರಕವಾದ ವಿವರ ಪಡೆಯಲು ಸುಮಾರು 60 ಪ್ರಶ್ನಾವಳಿಗಳನ್ನು ಸಿದ್ಧಪಡಿಸಲಾಗಿದೆ. ಕುಟುಂಬದವರು ಅಷ್ಟು ಪ್ರಶ್ನಾವಳಿಗಳಿಗೆ ಪ್ರತಿಕ್ರಿಯೆ ನೀಡಬೇಕಾಗುತ್ತದೆ.
3,166 ಗಣತಿದಾರರು: ‘ಸೆ. 22ರಿಂದ ಹದಿನೈದು ದಿನಗಳು ನಿರಂತವಾಗಿ ಸಮೀಕ್ಷೆ ನಡೆಯಲಿದೆ. ಜಿಲ್ಲೆಯಾದ್ಯಂತ 3,166 ಗಣತಿದಾರರು ಪ್ರತಿ ಮನೆ ಬಾಗಿಲಿಗೆ ಹೋಗಿ ಸಮೀಕ್ಷೆ ಮಾಡಲಿದ್ದಾರೆ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿಲಾಲ್ ಮಹಮ್ಮದ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಗಣತಿದಾರರ ಮೇಲ್ವಿಚಾರಣೆಗೆ 220ಕ್ಕೂ ಹೆಚ್ಚು ಮಂದಿಯನ್ನು ನೇಮಿಸಲಾಗಿದೆ. ಅವರನ್ನು ತಾಲ್ಲೂಕು ಮಟ್ಟದ ಅಧಿಕಾರಿಗಳು ಮೇಲ್ವಿಚಾರಣೆ ಮಾಡಲಿದ್ದಾರೆ. ಅವರಿಂದ ನಮಗೆ ಮಾಹಿತಿ ಬರಲಿದೆ. ನಿತ್ಯ ಎಷ್ಟು ಮಂದಿಯ ಸಮೀಕ್ಷೆ ಮಾಡಲಾಗಿದೆ ಎಂಬೆಲ್ಲಾ ಮಾಹಿತಿ ಸಂಗ್ರಹಿಸಲಾಗುತ್ತದೆ. ಸಮೀಕ್ಷೆ ಸಂದರ್ಭದಲ್ಲಾಗುವ ಗೊಂದಲಗಳನ್ನು ಆಗಿಂದಾಗ್ಗೆ ಪರಿಹರಿಸಲಾಗುತ್ತದೆ’ ಎಂದರು.
3.60 ಲಕ್ಷ ಮನೆಗಳು: ‘ಜಿಲ್ಲೆಯಾದ್ಯಂತ ಅಂದಾಜು 3.60 ಲಕ್ಷ ಮನೆಗಳನ್ನು ಸಮೀಕ್ಷೆಗೆ ಗುರುತಿಸಲಾಗಿದೆ. ಪ್ರತಿ ಮನೆಯನ್ನೂ ಅದರ ವಿದ್ಯುತ್ ಸಂಪರ್ಕ ಆಧರಿಸಿ ಜಿಯೊ ಟ್ಯಾಗ್ ಮಾಡಲಾಗಿದೆ. ಈ ಪೈಕಿ 3,166 ಬ್ಲಾಕ್‌ಗಳನ್ನು ಗುರುತಿಸಲಾಗಿದೆ. ಗಣತಿದಾರರಿಗೂ 100ರಿಂದ 150 ಮನೆಗಳನ್ನು ಸಮೀಕ್ಷೆ ಮಾಡುವ ಹೊಣೆಗಾರಿಕೆ ನೀಡಲಾಗಿದೆ’ ಎಂದು ಬಿಲಾಲ್ ಹೇಳಿದರು.
‘ವಿದ್ಯುತ್ ಮೀಟರ್ ರೀಡರ್‌ಗಳು, ಗ್ರಾಮ ಆಡಳಿತಾಧಿಕಾರಿ ಹಾಗೂ ಇತರ ಸಿಬ್ಬಂದಿ ತಮಗೆ ವಹಿಸಲಾದ ವ್ಯಾಪ್ತಿಯಲ್ಲಿರುವ ಪ್ರತಿ ಮನೆಗೂ ಈಗಾಗಲೇ ಭೇಟಿ ನೀಡಿ, ಅವುಗಳ ಜಿಯೊ ಟ್ಯಾಗಿಂಗ್ ಮಾಡಿದ್ದಾರೆ. ಗಣತಿದಾರರು ಆ ವಿವರವನ್ನು ಆ್ಯಪ್‌ನಲ್ಲಿ ದಾಖಲಿಸಿದ ಕೂಡಲೇ, ಆ ಮನೆಗೆಂದೇ ಪ್ರತ್ಯೇಕ ವಿಶಿಷ್ಟ ಗುರುತಿನ ಸಂಖ್ಯೆ ಸೃಷ್ಟಿಯಾಗುತ್ತದೆ. ಮುಂದೆ ಸಮೀಕ್ಷೆಯ ಪ್ರಶ್ನಾವಳಿ ತೆರೆದುಕೊಳ್ಳಲಿದ್ದು, ಎಲ್ಲದಕ್ಕೂ ಕುಟುಂಬದವರ ಮಾಹಿತಿ ಮೇರೆಗೆ ಗಣತಿದಾರರು ಭರ್ತಿ ಮಾಡಲಿದ್ದಾರೆ’ ಎಂದು ತಿಳಿಸಿದರು.
‘ವಿದ್ಯುತ್ ಸಂಪರ್ಕವಿಲ್ಲದ ಮನೆಗಳು ಜಿಯೊ ಟ್ಯಾಗ್ ಆಗಿಲ್ಲ. ಗಣತಿದಾರರು ತಮಗೆ ವಹಿಸಿದ ಪ್ರದೇಶಕ್ಕೆ ಹೋದಾಗ, ಜಿಯೊ ಟ್ಯಾಗ್ ಆಗದ ಮನೆಗಳನ್ನು ಸಹ ಸಮೀಕ್ಷೆ ಮಾಡಲಿದ್ದಾರೆ. ಹಾಗಾಗಿ, ಗಣತಿದಾರರಿಗೆ ಇಂತಿಷ್ಟೇ ಮನೆಗಳನ್ನು ಸಮೀಕ್ಷೆ ಮಾಡಬೇಕೆಂದು ನಿಖರವಾದ ಸಂಖ್ಯೆಯನ್ನು ನೀಡಿಲ್ಲ. ಯಾವ ಮನೆಯೂ ಹೊರಗುಳಿಯದಂತೆ ಸಮೀಕ್ಷೆ ಮಾಡಲು ಆದ್ಯತೆ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.
ಜಾತಿ ಗಣತಿದಾರರಿಗೆ ಅಂದಾಜು 100ರಿಂದ 150 ಮನೆಗಳನ್ನು ಸಮೀಕ್ಷೆ ಮಾಡಲಿದ್ದಾರೆ. ಕೆಲ ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲದೆ ಜಿಯೊ ಟ್ಯಾಗ್ ಆಗಿಲ್ಲ. ಹಾಗಾಗಿ ಸದ್ಯ ಗುರುತಿಸಿರುವ ನಾವು ಸಮೀಕ್ಷೆಗೆ ಗುರುತಿಸಿರುವ ಮನೆಗಳ ಸಂಖ್ಯೆಯಲ್ಲಿ ಏರುಪೇರಾಗಲಿದೆಬಿಲಾಲ್ ಮಹಮ್ಮದ್ ಜಿಲ್ಲಾ ಅಧಿಕಾರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬೆಂಗಳೂರು ದಕ್ಷಿಣ ಜಿಲ್ಲೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.