ಚನ್ನಪಟ್ಟಣ: ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಜೆಡಿಎಸ್‌ನಿಂದ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಬೇಕು ಎಂಬ ಕೂಗು ಜೋರಾಗಿದೆ.
ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಯಮುತ್ತ ನೇತೃತ್ವದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಪಕ್ಷದ ಮುಖಂಡರು, ನಿಖಿಲ್ ಅವರನ್ನೇ ಕಣಕ್ಕಿಳಿಸುವಂತೆ ಒತ್ತಾಯಿಸಿದರು.
‘ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಡಾ.ಸಿ.ಎನ್. ಮಂಜುನಾಥ್ ಪರ ಪ್ರಚಾರ ಮಾಡಿ ಗೆಲ್ಲಿಸಿದ್ದೇವೆ. ಹಾಗಾಗಿ, ಉಪ ಚುನಾವಣೆಯಲ್ಲಿ ಜೆಡಿಎಸ್‌ಗೆ ಟಿಕೆಟ್ ಕೊಡಬೇಕು. ಕ್ಷೇತ್ರದಲ್ಲಿ ಪಕ್ಷ ಗಟ್ಟಿ ನೆಲೆ ಹೊಂದಿದ್ದು, ಅದನ್ನ ಉಳಿಸಿಕೊಳ್ಳಬೇಕಾದರೆ ನಿಖಿಲ್ ಕುಮಾರಸ್ವಾಮಿ ಇಲ್ಲಿ ಸ್ಪರ್ಧಿಸಬೇಕು’ ಎಂದು ಜಯಮುತ್ತು ಆಗ್ರಹಿಸಿದರು.
‘ಟಿಕೆಟ್ ಆಕಾಂಕ್ಷಿಯಾಗಿರುವ ಬಿಜೆಪಿಯ ಸಿ.ಪಿ.ಯೋಗೇಶ್ವರ್ ಅವರ ವಿಧಾನ ಪರಿಷತ್ ಸದಸ್ಯತ್ವದ ಅವಧಿ ಇನ್ನೂ ಮೂರು ವರ್ಷ ಇದೆ. ಹಾಗಾಗಿ, ನಿಖಿಲ್ ಅವರೇ ಇಲ್ಲಿಗೆ ಸೂಕ್ತ ಅಭ್ಯರ್ಥಿ. ಇದೇ ಕಾರಣಕ್ಕೆ ಸ್ಥಳೀಯ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿ ನಿರ್ಧಾರ ಕೈಗೊಳ್ಳುವುದಾಗಿ ಪಕ್ಷದ ಅಧ್ಯಕ್ಷರಾಗಿರುವ ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದು, ಸದ್ಯದಲ್ಲೇ ಅಭ್ಯರ್ಥಿ ಹೆಸರು ಘೋಷಿಸಲಿದ್ದಾರೆ’ ಎಂದರು.
‘ನಿಖಿಲ್ ಸ್ಪರ್ಧಿಸಿದರೆ ಬೆಂಬಲಿಸುವುದಾಗಿ ಈಗಾಗಲೇ ಯೋಗೇಶ್ವರ್ ಕೂಡ ಹೇಳಿದ್ದಾರೆ. ಜೆಡಿಎಸ್‌ನವರೇ ಸ್ಪರ್ಧಿಸುವುದರಲ್ಲಿ ಯಾವುದೇ ಗೊಂದಲವಿಲ್ಲ. ಯೋಗೇಶ್ವರ್ ಅವರೇ ಚುನಾವಣೆ ನೇತೃತ್ವ ವಹಿಸಬೇಕು. ಅವರು ಜೆಡಿಎಸ್ ಸೇರುವುದಾದರೆ ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.