ADVERTISEMENT

ಚನ್ನಪಟ್ಟಣ: ಗಣತಿದಾರರಿಗೆ ಸಿಗದ ಪರಿಕರ; ಮೊದಲ ದಿನ ಗೊಂದಲದ ಗೂಡು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 6:19 IST
Last Updated 23 ಸೆಪ್ಟೆಂಬರ್ 2025, 6:19 IST
ಚನ್ನಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ನಿಯೋಜನೆಗೊಂಡಿರುವ ಶಿಕ್ಷಕರಿಗೆ ಗಣತಿ ಕಾರ್ಯದ ಮಾಹಿತಿ ನೀಡಲಾಯಿತು.
ಚನ್ನಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ನಿಯೋಜನೆಗೊಂಡಿರುವ ಶಿಕ್ಷಕರಿಗೆ ಗಣತಿ ಕಾರ್ಯದ ಮಾಹಿತಿ ನೀಡಲಾಯಿತು.   

ಚನ್ನಪಟ್ಟಣ: ಹಿಂದುಳಿದ ವರ್ಗಗಳ ಆಯೋಗದಿಂದ ಸೋಮವಾರದಿಂದ (ಸೆ.22) ತಾಲ್ಲೂಕಿನಲ್ಲಿ ಆರಂಭವಾದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ಮೊದಲ ದಿನವೇ ತೊಡಕು ಎದುರಾಯಿತು.

ಸಮೀಕ್ಷೆಗೆ ಅಗತ್ಯವಾದ ಕಿಟ್‌ ಮತ್ತು ಪರಿಕರ ಸಿಗದೆ ಗಣತಿಗೆ ನಿಯೋಜನೆಗೊಂಡಿರುವ ಶಿಕ್ಷಕರು ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದರು.

ತಾಲ್ಲೂಕಿನಲ್ಲಿ ಸಮೀಕ್ಷೆಗೆ 672 ಶಿಕ್ಷಕರನ್ನು ನಿಯೋಜಿಸಲಾಗಿದೆ. ಸಮೀಕ್ಷೆಗೆ ಅಗತ್ಯ ಪರಿಕರ ನೀಡಲು ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಬೆಳಗ್ಗೆ 11ಕ್ಕೆ ಶಿಕ್ಷಕರನ್ನು ಹಾಜರಿರುವಂತೆ ಸೂಚಿಸಲಾಗಿತ್ತು. ಆದರೆ, ಮಧ್ಯಾಹ್ನವಾದರೂ  ಅಧಿಕಾರಿಗಳು ಸ್ಥಳಕ್ಕೆ ಬಾರದ ಕಾರಣ ಶಿಕ್ಷಕರು ಕಾಲೇಜಿನ ಆವರಣದಲ್ಲಿ ಕಾಯುವಂತಾಯಿತು. ಮಧ್ಯಾಹ್ನ 1ರ ನಂತರ ಗಣತಿದಾರ ಶಿಕ್ಷಕರಿಗೆ ಅಗತ್ಯ ಪರಿಕರ ನೀಡಲಾಯಿತು.

‘ಇಂದಿನಿಂದ ಅಧಿಕೃತವಾಗಿ ದಸರಾ ರಜೆ ಆರಂಭವಾಗಿದೆ. ಶಿಕ್ಷಕರನ್ನು ಜಾತಿಗಣತಿಗೆ ನಿಯೋಜಿಸಲಾಗಿದೆ. ಜಾತಿ ಗಣತಿ ನಡೆಸಲು ರಜೆ ಬಿಟ್ಟು ಇಲ್ಲಿಗೆ ಬಂದರೆ ಪರಿಕರ ನೀಡಲು ತಾಸುಗಟ್ಟಲೇ ಕಾಯಿಸಿದ್ದಾರೆ. ಸರ್ಕಾರದ ಎಲ್ಲಾ ಕೆಲಸಕ್ಕೂ ಶಿಕ್ಷಕರನ್ನೇ ನೇಮಿಸಿಕೊಳ್ಳಲಾಗುತ್ತದೆ. ನಮಗೆ ಪಾಠ ಮಾಡಲು ಬಿಡಬೇಕು’ ಎಂದು ಹೆಸರು ಹೇಳಲು ಇಚ್ಛಿಸದ ಶಿಕ್ಷಕರೊಬ್ಬರು ಅಸಮಾಧಾನ ತೋಡಿಕೊಂಡರು.

ಗಣತಿ ಪರಿಕರ ಪಡೆದ ಶಿಕ್ಷಕರು ನಿಯೋಜಿಸಿರುವ ಸ್ಥಳಗಳತ್ತ ಪ್ರಯಾಣಿಸಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸಿದರು.


ಜಾತಿ ಗಣತಿಗೆ ನಿಯೋಜನೆಗೊಂಡಿರುವ ಶಿಕ್ಷಕರು ಚನ್ನಪಟ್ಟಣದ ಮನೆಯೊಂದರಲ್ಲಿ ಮಹಿಳೆಯೊಬ್ಬರಿಂದ ಮಾಹಿತಿ ಪಡೆದು ದಾಖಲು ಮಾಡಿಕೊಂಡರು

ಒಟಿಪಿ ಹಂಚಿಕೊಳ್ಳಲು ನಕಾರ 

ADVERTISEMENT

ಮೊಬೈಲ್‌ ಆ್ಯಪ್‌ನಲ್ಲಿ ಮಾಹಿತಿ ದಾಖಲಿಸುವಾಗ ಕೆಲವರು ತಮ್ಮ ಮೊಬೈಲ್‌ಗೆ ಬಂದ ಒಟಿಪಿಯನ್ನು ಗಣತಿದಾರರಿಗೆ ಹೇಳಲು ಹಿಂಜರಿದರು. ಒಟಿಪಿ ಹೇಳಿದರೆ ತಮ್ಮ ಬ್ಯಾಂಕ್ ಖಾತೆ ಮಾಹಿತಿ ಸೋರಿಕೆಯಾಗಬಹುದು ಇಲ್ಲವೇ ಹಣ ಖಾಲಿಯಾಗಬಹುದು ಎಂಬ ಆತಂಕದಿಂದ ಜನರು ಒಟಿಪಿ ಹೇಳಲು ಹಿಂಜರಿದರು.  ಗಣತಿದಾರರು ಸಮೀಕ್ಷೆ ಕುರಿತು ಹೇಳಿ ಮನವರಿಕೆ ಮಾಡಿದ ನಂತರವಷ್ಟೇ ಜನರು ಒಟಿಪಿ ಹಂಚಿಕೊಂಡರು ಎಂದು ಹಿಂದುಳಿದ ವರ್ಗಗಳ ಇಲಾಖೆಯ ತಾಲ್ಲೂಕು ಕಲ್ಯಾಣಾಧಿಕಾರಿ ಮಧುರಾ ತಿಳಿಸಿದರು.

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ಬೇಕಾದ ಪರಿಕರಗಳು ತಲುಪಲು ವಿಳಂಬವಾದ ಕಾರಣ ಅವನ್ನು ವಿತರಿಸುವುದು ವಿಳಂಭವಾಯಿತು. ಬ್ಯಾಗ್ ಹೊರತುಪಡಿಸಿ ಇತರ ಎಲ್ಲಾ ದಾಖಲೆ ಹಾಗೂ ಪರಿಕರ ವಿತರಣೆ ಮಾಡಿದ್ದೇವೆ. ಇಂದು ಮೊದಲ ದಿನವಾದ ಕಾರಣ ಸಣ್ಣಪುಟ್ಟ ಸಮಸ್ಯೆ ಎದುರಾಗಿದೆ. ಮುಂದಿನ ದಿನಗಳಲ್ಲಿ ಗಣತಿ ಕಾರ್ಯ ಸರಾಗವಾಗಿ ನಡೆಯುವ ವಿಶ್ವಾಸವಿದೆ.
–ಮಧುರಾ, ತಾಲ್ಲೂಕು ಕಲ್ಯಾಣಾಧಿಕಾರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ. ಚನ್ನಪಟ್ಟಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.