
ಚನ್ನಪಟ್ಟಣ: ಬೆಂಗಳೂರು–ಮೈಸೂರು ಹೆದ್ದಾರಿಯಿಂದ ಚನ್ನಪಟ್ಟಣಕ್ಕೆ ಮತ್ತೊಂದು ಆಗಮನ, ನಿರ್ಗಮನ ರಸ್ತೆ (ಎಕ್ಸಿಟ್ ಅಂಡ್ ಎಂಟ್ರಿ) ನಿರ್ಮಾಣಕ್ಕೆ ಸಂಸದ ಡಾ.ಸಿ.ಎನ್. ಮಂಜುನಾಥ್ ಮಂಗಳವಾರ ತಾಲ್ಲೂಕಿನ ಕಣ್ವ ಜಂಕ್ಷನ್ ರಸ್ತೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದರು.
ಚನ್ನಪಟ್ಟಣಕ್ಕೆ ಬರಲು ತಾಲ್ಲೂಕಿನ ಬೈರಾಪಟ್ಟಣ ಹತ್ತಿರ ಸಂಪರ್ಕ ಕಲ್ಪಿಸುವ ಹಾಗೂ ಹೆದ್ದಾರಿಯಿಂದ ನಿರ್ಗಮನ ರಸ್ತೆಯನ್ನು (ಎಕ್ಸಿಟ್ ಅಂಡ್ ಎಂಟ್ರಿ ರಸ್ತೆ) ನಿರ್ಮಾಣ ಮಾಡಲಾಗಿದೆ. ಆದರೆ ಈ ರಸ್ತೆ ಚನ್ನಪಟ್ಟಣದಿಂದ ಎರಡು ಕಿ.ಮೀ. ದೂರವಿರುವ ಹಿನ್ನೆಲೆಯಲ್ಲಿ ಕಣ್ವ ಜಂಕ್ಷನ್ ಬಳಿ ಎಕ್ಸಿಟ್ ಮತ್ತು ಎಂಟ್ರಿ ರಸ್ತೆ ನಿರ್ಮಾಣ ಮಾಡಿದರೆ ಚನ್ನಪಟ್ಟಣಕ್ಕೆ ಬರಲು ಅನುಕೂಲವಾಗುತ್ತದೆ ಎನ್ನುವ ಬೇಡಿಕೆ ಹಿನ್ನೆಲೆಯಲ್ಲಿ ಸಂಸದ ಮಂಜುನಾಥ್ ಈ ಪರಿಶೀಲನೆ ಮಾಡಿದರು.
ಚನ್ನಪಟ್ಟಣಕ್ಕೆ ಹೆದ್ದಾರಿಯಿಂದ ಮತ್ತೊಂದು ಎಕ್ಸಿಟ್ ಎಂಟ್ರಿ ನೀಡುವ ನಿಟ್ಟಿನಲ್ಲಿ ಹೆದ್ದಾರಿ ಪ್ರಾಧಿಕಾರಕ್ಕೆ ಕಳೆದ ವರ್ಷ ಮನವಿ ಮಾಡಲಾಗಿತ್ತು. ಇದಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅನುಮೋದನೆ ನೀಡಿದ್ದಾರೆ. ಹೆದ್ದಾರಿಯಲ್ಲಿ ಮತ್ತೊಂದು ಎಕ್ಸಿಟ್ ಎಂಟ್ರಿ ನೀಡಲು ಪರಿಶೀಲನೆ ನಡೆದಿದ್ದೇವೆ. ಬೊಂಬೆ ಉದ್ಯಮದ ಜೊತೆಗೆ ಸಣ್ಣ ಉದ್ಯಮಗಳ ಪುನಶ್ಚೇತನ ಹಾಗೂ ಪ್ರವಾಸಿಗರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಕಣ್ವ ಬಳಿಯೇ ಎಕ್ಸಿಟ್ ಮತ್ತು ಎಂಟ್ರಿ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಕಣ್ವ ಜಂಕ್ಷನ್ ಬಳಿ ಪ್ರವೇಶ, ನಿರ್ಗಮನ ನೀಡಿದರೆ ಕಣ್ವ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ. ಬೊಂಬೆ ಮಾರಾಟ ಮೇಳ ಸೇರಿದಂತೆ ವಿವಿಧ ಉದ್ಯಮಗಳಿಗೆ ಪ್ರೋತ್ಸಾಹ ಸಿಗುತ್ತದೆ. ಕೆಂಗಲ್ ಮೂಲಕ ಹಳೆ ಬೆಂಗಳೂರು– ಮೈಸೂರು ಹೆದ್ದಾರಿಗೆ ಸಂಚಾರ ಮಾಡಲು ಅನುಕೂಲವಾಗಲಿದೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಹೇಳಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾಜೆಕ್ಟ್ ಡೈರೆಕ್ಟರ್ ಮಿಲನ್ ಕುಮಾರ್, ಕಂದಾಯ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಹಾಗೂ ಸಾರ್ವಜನಿಕರು ಹಾಜರಿದ್ದರು.
ಇದೇ ವೇಳೆ ಬೆಂಗಳೂರು ಮೈಸೂರು ಹೆದ್ದಾರಿಯ ವ್ಯಾಪ್ತಿಯಲ್ಲಿ ಚನ್ನಪಟ್ಟಣ ತಾಲ್ಲೂಕಿನ ಕನ್ನಮಂಗಲದೊಡ್ಡಿ ಹಾಗೂ ಕಣ್ವ ಜಂಕ್ಷನ್ ಪ್ರದೇಶಗಳಲ್ಲಿ ಗೊಂಬೆಗಳ ಉದ್ಯಾನವನ (ಟಾಯ್ಸ್ ಪಾರ್ಕ್) ನಿರ್ಮಾಣದ ಸಾಧ್ಯತೆಗಳನ್ನು ಪರಿಶೀಲಿಸುವ ಉದ್ದೇಶದಿಂದ ಡಾ. ಸಿ.ಎನ್. ಮಂಜುನಾಥ್ ಸ್ಥಳ ವೀಕ್ಷಣೆ ನಡೆಸಿದರು.ಹತ್ತಿರದ ಪ್ರದೇಶದಲ್ಲಿ ಚನ್ನಪಟ್ಟಣದ ಪರಂಪರೆಯ ಗೊಂಬೆಕಲೆಯನ್ನು ಉತ್ತೇಜಿಸುವ ಸಲುವಾಗಿ ಟಾಯ್ಸ್ ಪಾರ್ಕ್ ಸಾಪನೆ ಹಾಗೂ ಪ್ರವಾಸಿಗರು ಮತ್ತು ಹೆದ್ದಾರಿ ಪ್ರಯಾಣಿಕರಿಗೆ ಅಲ್ಪಾವಧಿ ವಿಶ್ರಾಂತಿ ಮೂಲಸೌಕರ್ಯ ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸೂಕ್ತ ಸ್ಥಳ ಗುರುತಿಸುವ ಕುರಿತು ಚರ್ಚೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.