ADVERTISEMENT

ಚನ್ನಪಟ್ಟಣ: ಓವರ್ ಹೆಡ್ ಟ್ಯಾಂಕ್‌ಗೆ ಇಲ್ಲ ನೀರಿನ ಸಂಪರ್ಕ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2025, 4:58 IST
Last Updated 19 ಮಾರ್ಚ್ 2025, 4:58 IST
ಚನ್ನಪಟ್ಟಣ ತಾಲ್ಲೂಕಿನ ಪೀಹಳ್ಳಿದೊಡ್ಡಿ ಗ್ರಾಮದಲ್ಲಿ ನಿರ್ಮಾಣವಾಗಿ ಉದ್ಘಾಟನೆಯಾಗದೆ ನಿಂತಿರುವ ಓವರ್ ಹೆಡ್ ಟ್ಯಾಂಕ್
ಚನ್ನಪಟ್ಟಣ ತಾಲ್ಲೂಕಿನ ಪೀಹಳ್ಳಿದೊಡ್ಡಿ ಗ್ರಾಮದಲ್ಲಿ ನಿರ್ಮಾಣವಾಗಿ ಉದ್ಘಾಟನೆಯಾಗದೆ ನಿಂತಿರುವ ಓವರ್ ಹೆಡ್ ಟ್ಯಾಂಕ್   

ಚನ್ನಪಟ್ಟಣ: ತಾಲ್ಲೂಕಿನ ಪೀಹಳ್ಳಿದೊಡ್ಡಿ ಗ್ರಾಮದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷೆಯ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ 2018-19ನೇ ಸಾಲಿನಲ್ಲಿ ನಿರ್ಮಾಣವಾಗಿರುವ ಓವರ್ ಹೆಡ್ ಟ್ಯಾಂಕ್‌ಗೆ ನೀರಿನ ಸಂಪರ್ಕವಿಲ್ಲದ ಕಾರಣ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.

ಗ್ರಾಮದಲ್ಲಿದ್ದ ಕೊಳವೆಬಾವಿಗಳು ಸದ್ಯ ಬತ್ತಿಹೋಗಿದ್ದು, ಗ್ರಾಮಸ್ಥರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಇದರಿಂದ ಗ್ರಾಮಸ್ಥರು ಖಾಸಗಿ ಪಂಪ್‌ಸೆಟ್‌ಗಳನ್ನು ಆಶ್ರಯಿಸುವಂತಾಗಿದೆ. ಜತೆಗೆ ಸ್ಥಳೀಯ ಭೂಹಳ್ಳಿ ಗ್ರಾ.ಪಂ.ಆಡಳಿತವು ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಖಾಸಗಿ ಪಂಪ್‌ಸೆಟ್‌ ಅವರಿಗೆ ಹಣ ನೀಡಿ ಗ್ರಾಮಸ್ಥರಿಗೆ ಕುಡಿಯುವ ನೀರು ಪೂರೈಸುವಂತಾಗಿದೆ.

ಸುಮಾರು ಐದು ವರ್ಷಗಳಿಗೂ ಹಿಂದೆ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ಕುಡಿಯುವ ನೀರು ಪೂರೈಸಲು ಕಾಮಗಾರಿ ಆರಂಭಿಸಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಿ ಪೈಪ್‌ಲೈನ್ ಸಹ ಮಾಡಲಾಗಿದೆ. ಪ್ರತಿ ಮನೆಗಳ ಬಳಿ ನಲ್ಲಿ ಸಹ ಹಾಕಲಾಗಿದೆ. ಆದರೆ, ಓವರ್ ಹೆಡ್ ಟ್ಯಾಂಕ್‌ಗೆ ಮಾತ್ರ ನೀರಿನ ಸಂಪರ್ಕ ನೀಡಿಲ್ಲ. ಈ ಹಿಂದೆ ಇದ್ದ ಕಿರು ನೀರು ಸರಬರಾಜು ಯೋಜನೆಯ ಕೊಳವೆಬಾವಿಗಳು ಬತ್ತಿವೆ. ಇತ್ತ ಜಲಜೀವನ್ ಮಿಷನ್ ಯೋಜನೆಯ ನೀರು ಸಹ ಬರುತ್ತಿಲ್ಲ. ಇದರಿಂದ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ.

ADVERTISEMENT

ಗ್ರಾಮದಲ್ಲಿ ಕಳೆದ ವರ್ಷ ಎರಡು ಕೊಳವೆಬಾವಿಗಳನ್ನು ಕೊರೆಸಲಾಯಿತು. ಅದರಲ್ಲಿ ನೀರು ಬರಲಿಲ್ಲ. ಇದರಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಯಿತು. ಆಗ ಜಲ ಜೀವನ್ ಯೋಜನೆ ಕಾಮಗಾರಿ ನಡೆದಿದ್ದರಿಂದ ಅದಕ್ಕೆ ಚಾಲನೆ ಸಿಗಬಹುದು ಎಂದುಕೊಂಡಿದ್ದೆವು. ಆದರೆ, ಅದಕ್ಕೂ ಚಾಲನೆ ಸಿಕ್ಕಿಲ್ಲ. ಹಾಗಾಗಿ ಖಾಸಗಿ ಪಂಪ್‌ಸೆಟ್‌ ಆಧ್ರಯಿಸುವಂತಾಗಿದೆ ಎಂಬುದು ಗ್ರಾಮಸ್ಥರ ಆಳಲಾಗಿದೆ.

ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಲಿಸಿದ ಗ್ರಾ.ಪಂ.ಆಡಳಿತವು ಜಲ ಜೀವನ್ ಯೋಜನೆಯ ಪೈಪ್‌ಲೈನ್‌ಗೆ ಖಾಸಗಿ ಕೊಳವೆಬಾವಿಯ ನೀರಿನ ಸಂಪರ್ಕ ಕೊಡಿಸಿ ನೀರು ಪೂರೈಸುತ್ತಿದೆ. ಇದಕ್ಕಾಗಿ ಗ್ರಾ.ಪಂ. ಬಾಡಿಗೆ ನೀಡುತ್ತಿದೆ. ಹಾಗಾಗಿ ಬೇಸಿಗೆ ಆರಂಭವಾಗಿದ್ದು, ಇನ್ನೂ ನೀರಿಗೆ ಹಾಹಾಕಾರವಾಗಬಹುದು. ಅದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಬಗ್ಗೆ ಈಗಾಗಲೇ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಶಾಸಕ ಸಿ.ಪಿ.ಯೋಗೇಶ್ವರ್ ಅವರ ಗಮನಕ್ಕೆ ತರಲಾಗಿದೆ. ಜಿ.ಪಂ. ಸಿಇಒ, ತಾ.ಪಂ. ಇಒ, ನೀರು ಸರಬರಾಜು ಮಂಡಳಿ ಅಧಿಕಾರಿಗಳು, ಹಾಲಿ ಹಾಗೂ ಮಾಜಿ ಸಂಸದರ ಗಮನಕ್ಕೂ ತರಲಾಗಿದೆ. ಆದರೂ, ಗ್ರಾಮದ ಓವರ್ ಹೆಡ್ ಟ್ಯಾಂಕ್ ಉದ್ಘಾಟನೆಯಾಗಿಲ್ಲ.  ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಿಲ್ಲ ಎಂಬುದು ಗ್ರಾಮಸ್ಥರ ಮಾತಾಗಿದೆ.

ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಶೀಘ್ರ ಪರಿಹರಿಸಬೇಕು. ಇಲ್ಲವಾದರೆ ಗ್ರಾಮದ ವತಿಯಿಂದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಜಲಜೀವನ್ ಮಿಷನ್ ಯೋಜನೆ ಪೈಪ್‌ಲೈನ್‌ಗೆ ಸಂಪರ್ಕ ಕೊಟ್ಟಿರುವ ಖಾಸಗಿ ಪಂಪ್ ಸೆಟ್ ಹೌಸ್

ಕಾಮಗಾರಿಯ ಗುತ್ತಿಗೆ ಪಡೆದಿರುವ ವ್ಯಕ್ತಿ ಕೆಲವು ಸಬೂಬು ಹೇಳುತ್ತಾ ಈ ಯೋಜನೆಯನ್ನು ಪೂರ್ಣ ಮಾಡಿಲ್ಲ. ಅವರಿಗೆ ಇಲಾಖೆ ವತಿಯಿಂದ ನೋಟಿಸ್ ನೀಡಿ ಶೀಘ್ರ ಈ ಯೋಜನೆ ಪೂರ್ಣ ಮಾಡುವಂತೆ ಸೂಚನೆ ನೀಡಲಾಗಿದೆ. ಅವರು ಇದನ್ನು ಪೂರ್ಣ ಮಾಡದಿದ್ದರೆ ಅವರ ಹೆಸರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಯೋಜನೆಯ ಅಧಿಕಾರಿಯೊಬ್ಬರು ತಿಳಿಸಿದರು.

ಜಲ ಜೀವನ್ ಮಿಷನ್ ಯೋಜನೆ ಚನ್ನಪಟ್ಟಣ ಎಇಇ ಮಧುಸೂದನ್ ಸದ್ಯ ಮದ್ದೂರಿಗೆ ವರ್ಗಾವಣೆಯಾಗಿದ್ದು, ಅವರ ಸ್ಥಾನಕ್ಕೆ ಬಂದಿರುವ ಜಯಪ್ರಕಾಶ್ ಇನ್ನೂ ಅಧಿಕಾರ ಸ್ವೀಕರಿಸಿಲ್ಲ. ಯೋಜನೆಯ ರಾಮನಗರ ಇಇ ವೀರನಂಜೇಗೌಡ ದೂರವಾಣಿ ಕರೆ ಸ್ವೀಕರಸಲಿಲ್ಲ.

ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆ ಆರಂಭವಾಗಿ ಐದು ವರ್ಷ ಕಳೆದಿದ್ದರೂ ನೀರಿನ ಸಂಪರ್ಕ ಸಿಗದೆ ಗ್ರಾಮಸ್ಥರು ಕುಡಿಯುವ ನೀರಿಗೆ ಪರದಾಡುತ್ತಿದ್ದಾರೆ. ಈ ಬಗ್ಗೆ ಜನಪ್ರತಿನಿಧಿಗಳು ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹಾಗಾಗಿ ಸಂಬಂಧಪಟ್ಟವರು ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಿ ಗ್ರಾಮಸ್ಥರ ನೀರಿನ ಸಮಸ್ಯೆ ಪರಿಹರಿಸಿ.
ಶಿವರಾಜ್ ಕುಮಾರ್ ಗ್ರಾಮಸ್ಥ

ಹಲವು ಗ್ರಾಮಗಳಲ್ಲಿ ಯೋಜನೆ ವಿಫಲ

ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ನೀರು ಸರಬರಾಜು ಮಾಡುವ ಕಾರ್ಯ ಸಾಕಾರಗೊಂಡಿದ್ದರೂ ಹಲವು ಗ್ರಾಮಗಳಲ್ಲಿ ಯೋಜನೆ ವಿಫಲವಾಗಿದೆ. ಕೆಲವು ಗ್ರಾಮಗಳಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸಿ ಪೈಪ್‌ಲೈನ್ ಮಾಡಿ ನಲ್ಲಿ ಹಾಕಿ ನೀರು ಪೂರೈಕೆ ಮಾಡುತ್ತಿದ್ದರೂ ಮೀಟರ್‌ಗಳೆಲ್ಲವೂ ಹಾಳಾಗಿವೆ. ಇನ್ನೂ ಕೆಲವು ಗ್ರಾಮಗಳಲ್ಲಿ ಮಾಡಿರುವ ಪೈಪ್‌ ಲೈನ್ ಕಳಪೆಯಾಗಿದೆ. ಮತ್ತೆ ಕೆಲವು ಗ್ರಾಮಗಳಲ್ಲಿ ಪೈಪ್‌ಲೈನ್ ಆಗಿದ್ದರೂ ನೀರಿನ ಸಂಪರ್ಕ ನೀಡಿಲ್ಲ. ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಯೋಜನೆಯ ಪೈಪ್‌ಲೈನ್ ಮಾಡಲು ರಸ್ತೆ ಅಗೆಯಲಾಗಿದೆ. ಕೆಲವು ಗ್ರಾಮಗಳಲ್ಲಿ ಅಗೆದಿರುವ ರಸ್ತೆಗಳನ್ನು ಕಾಂಕ್ರೀಟ್ ಹಾಕಿ ಮುಚ್ಚಿದ್ದರೆ ಹಲವು ಗ್ರಾಮಗಳಲ್ಲಿ ಗುಂಡಿಗಳನ್ನು ಮುಚ್ಚದೆ ಅದ್ವಾನ ಮಾಡಲಾಗಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಶೀಘ್ರ ಸರಿಪಡಿಸಿ ಪೀಹಳ್ಳಿದೊಡ್ಡಿ ಸರ್ಕಾರದ ಅನುದಾನ ಸದ್ಬಳಕೆಯಾಗಲಿ ಮನೆ ಮನೆಗೆ ನೀರು ನೀಡುತ್ತೇವೆ ಎನ್ನುವ ಸರ್ಕಾರ ಯೋಜನೆಯನ್ನು ಆರಂಭಿಸಿ ಈ ರೀತಿ ಅರ್ಧಕ್ಕೆ ನಿಲ್ಲಿಸುವುದು ಸೂಕ್ತವಲ್ಲ. ಎಲ್ಲವೂ ಪೂರ್ಣಗೊಂಡಿದ್ದರೂ ನೀರು ಸಂಪರ್ಕ ನೀಡಿಲ್ಲ ಎಂದರೆ ಇದು ಸರ್ಕಾರದ ಅನುದಾನದ ದುರುಪಯೋಗವೇ ಸರಿ. ಶೀಘ್ರ ಹೊಸ ಕೊಳವೆಬಾವಿ ಕೊರೆಸಿ ಅದರಿಂದ  ಓವರ್ ಹೆಡ್‌ಟ್ಯಾಂಕ್‌ಗೆ ನೀರಿನ ಸಂಪರ್ಕ ನೀಡಿ ಸಮಸ್ಯೆ ಪರಿಹರಿಸಲಿ 
ಸತೀಶ್ ಗ್ರಾಮಸ್ಥ ಪೀಹಳ್ಳಿದೊಡ್ಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.