ಹಾರೋಹಳ್ಳಿ: ಇಲ್ಲಿಯ ಕೈಗಾರಿಕಾ ಪ್ರದೇಶದ ಕೆಲವು ಕಾರ್ಖಾನೆಗಳು ಕದ್ದಮುಚ್ಚಿ ಬಿಡುವ ರಾಸಾಯನಿಕ ತ್ಯಾಜ್ಯಕ್ಕೆ ಗ್ರಾಮಗಳ ಕುಡಿಯುವ ನೀರಿನ ಮೂಲಕ್ಕೆ ಕುತ್ತು ಬಂದಿದೆ.
ಹಾರೋಹಳ್ಳಿ ಕೈಗಾರಿಕಾ ಪ್ರದೇಶ 2ನೇ ಹಂತದ ಹುಲಿಸಿದ್ದೇಗೌಡನದೊಡ್ಡಿ, ಬನ್ನಿಕುಪ್ಪೆ ಗ್ರಾಮದ ಸುತ್ತಮುತ್ತ ತಲೆ ಎತ್ತಿರುವ ಕಾರ್ಖಾನೆಗಳು ಜನರಿಗೆ ಮತ್ತು ಪರಿಸರಕ್ಕೆ ಮಾರಕವಾದ ವಿಷಾನೀಲ, ರಾಸಾಯನಿಕ ತ್ಯಾಜ್ಯವನ್ನು ಕೊಡುಗೆ ನೀಡುತ್ತಿವೆ. ಇದರಿಂದ ಪ್ರಾಣಿ, ಪಕ್ಷಿ ಸಂಕುಲ, ಕೃಷಿ ಚಟುವಟಿಕೆ, ಗ್ರಾಮಗಳ ಕುಡಿಯುವ ನೀರು ಮಲೀನವಾಗುತ್ತಿದೆ.
ಹುಲ್ಲಿಸಿದ್ದೇಗೌಡನದೊಡ್ಡಿ ಬನ್ನಿಕುಪ್ಪೆ ಹಾಗೂ ಪಕ್ಕದ ಕೆಲವು ಗ್ರಾಮಗಳಲ್ಲಿ ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ. ಮನೆಗಳಲ್ಲಿ ಸಂಗ್ರಹ ಮಾಡಿರುವ ನೀರಿನಿಂದ ಕೆಟ್ಟ ವಾಸನೆ ಬರುತ್ತದೆ. ನೀರಿನಲ್ಲಿ ನೊರೆ ಕಂಡು ಬರುತ್ತಿದೆ. ಇದನ್ನು ಕುಡಿಯಲು ಹೋಗಲಿ, ಬಳಸಲೂ ಆಗಲ್ಲ. ಶುದ್ಧ ನೀರಿನ ಘಟಕದ ನೀರಿನಲ್ಲಿ ಕೂಡ ಕೆಲವೊಮ್ಮೆ ನೊರೆ ನೀರು ಬರುತ್ತದೆ ಎನ್ನುತ್ತಾರೆ ಗ್ರಾಮಸ್ಥರು.
ಗ್ರಾಮದ ಅಕ್ಕಪಕ್ಕಗಳಲ್ಲಿ ಕೊಳವೆಬಾವಿ ಕೊರೆದರೆ ಅದರಲ್ಲಿ ಕಲುಷಿತ ನೀರು ಬರುತ್ತದೆ. ಕಾರ್ಖಾನೆಗಳ ವಿಷಕಾರಿ ತ್ಯಾಜ್ಯ ಭೂಮಿಯೊಳಗೆ ಸೇರುವುದರಿಂದ ಇಲ್ಲಿಯ ಅಂತರ್ಜಲ ಕೂಡ ಕಲುಷಿತವಾಗಿದೆ ಎನ್ನುವುದು ಸ್ಥಳಿಯರ ಆರೋಪ.
ಗ್ರಾಮದ ಪಕ್ಕದಲ್ಲಿರುವ ಕೆಲವು ಕಾರ್ಖಾನೆಗಳು ರಾತ್ರಿ ವಿಷಾನೀಲ ಹೊರ ಸೂಸುತ್ತವೆ. ರಾಸಾಯನಿಕಯುಕ್ತ ಕಲುಷಿತ ನೀರನ್ನು ಚರಂಡಿ ಮೂಲಕ ಕೆರೆಗಳಿಗೆ ಬಿಡಲಾಗುತ್ತದೆ. ಹಾಗಾಗಿ ಕೆರೆ ನೀರು ಕುಡಿಯುವ ಜನ-ಜಾನುವಾರುಗಳ ಮೇಲೆ ಅಡ್ಡ ಪರಿಣಾಮಗಳಾಗುತ್ತವೆ. ಈ ಪ್ರದೇಶದಲ್ಲಿ ದುರ್ವಾಸನೆ ಹರಡಿದೆ. ಇದರಿಂದ ಬೇಸತ್ತು ಗ್ರಾಮದ ಕೆಲವರು ಗ್ರಾಮ ತೊರೆಯಲು ಮುಂದಾಗಿದ್ದಾರೆ.
ಪರಿಶೀಲನೆ ನಡೆಸಿ ಅಕ್ರಮವಾಗಿ ತ್ಯಾಜ್ಯ ವಿಲೇವಾರಿ ಮಾಡುವ ಕಾರ್ಖಾನೆಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದುಮಂಜುನಾಥ್, ಜಿಲ್ಲಾ ಪರಿಸರ ಇಲಾಖೆ ಅಧಿಕಾರಿ
ರಾತ್ರಿ ವೇಳೆಯಲ್ಲಿ ಕೆಲವು ಕಾರ್ಖಾನೆಗಳು ತ್ಯಾಜ್ಯವನ್ನು ಅಕ್ರಮವಾಗಿ ವಿಲೇವಾರಿ ಮಾಡುತ್ತಿವೆ. ಇವುಗಳ ವಿರುದ್ಧ ಕ್ರಮ ಜರುಗಿಸಿ ಪರವಾನಗಿ ರದ್ದು ಮಾಡಬೇಕುಬೈರೇಗೌಡ, ಹುಲಿಸಿದ್ದೇಗೌದನದೊಡ್ಡಿ ಗ್ರಾಮಸ್ಥ
ಗ್ರಾಮದ ಪಕ್ಕದಲ್ಲಿರುವ ಕಾರ್ಖಾನೆಗಳು ಭೂಮಿಯನ್ನು ಆಳವಾಗಿ ಕೊರೆದು ವಿಷಕಾರಿ ರಾಸಾಯನಿಕ ತ್ಯಾಜ್ಯ ಬಿಡುತ್ತಿರುವುದರಿಂದ ಗ್ರಾಮಗಳಲ್ಲಿ ಬರುವ ನೀರನ್ನು ಕುಡಿಯಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆಶಿವಕುಮಾರ್, ಬನ್ನಿಕುಪ್ಪೆ ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.