ADVERTISEMENT

ರಾಮನಗರ: ಬಾಲ್ಯವಿವಾಹಕ್ಕೆ ವರವಾಯ್ತು ಲಾಕ್‌ಡೌ‌ನ್‌!

ಇಲಾಖೆಗಳ ನಡುವೆ ಸಮನ್ವಯದ ಕೊರತೆ l ದಾಖಲಾಗದ ಪ್ರಕರಣಗಳು

ಆರ್.ಜಿತೇಂದ್ರ
Published 22 ಜೂನ್ 2020, 19:31 IST
Last Updated 22 ಜೂನ್ 2020, 19:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ರಾಮನಗರ: ಕೊರೊನಾ ಭೀತಿಯಿಂದ ಉಂಟಾದ ಲಾಕ್‌ಡೌನ್‌ನಿಂದ ಅದೆಷ್ಟೋ ಮದುವೆಗಳು ಮುಂದೂಡಲ್ಪಟ್ಟವು. ಆದರೆ, ಇದೇ ವೇಳೆ ಅದೆಷ್ಟೋ ಬಾಲ್ಯ ವಿವಾಹಗಳೂ ಜಿಲ್ಲೆಯಲ್ಲಿ ನಡೆದಿವೆ ಎನ್ನುವ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.

ಲಾಕ್‌ಡೌನ್‌ ಕಾರಣಕ್ಕೆ ಎಲ್ಲೆಡೆ ಸರಳ ವಿವಾಹಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಮನೆ ಆವರಣಗಳಲ್ಲೇ ಶುಭ ಕಾರ್ಯ ನಿರ್ವಹಿಸಲು ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಇದನ್ನೇ ಬಳಸಿ
ಕೊಂಡು ಬಾಲಕಿಯರಿಗೂ ಮದುವೆ ಮಾಡುವ ಸಾಕಷ್ಟು ಪ್ರಯತ್ನಗಳು ವರದಿಯಾಗಿವೆ.

ಜಿಲ್ಲೆಯ ಮಕ್ಕಳ ಸಹಾಯವಾಣಿ ಲಾಕ್‌ಡೌನ್‌ ಅವಧಿಯಲ್ಲಿ ಇಂತಹ 30ಕ್ಕೂ ಹೆಚ್ಚು ದೂರುಗಳು ಬಂದಿದ್ದವು. ಈ ದೂರು ಆಧರಿಸಿ ಅಧಿಕಾರಿಗಳು ಪರಿಶೀಲಿಸಿದ ಸಂದರ್ಭ 9 ಕಡೆಗಳಲ್ಲಿ ಇಂತಹ ಪ್ರಯತ್ನಗಳು ನಡೆದಿದ್ದು ಕಂಡು ಬಂದಿದೆ. ಆದಾಗ್ಯೂ ಅಧಿಕಾರಿಗಳ ಕಣ್ಣು ತಪ್ಪಿಸಿ ಐದು ಬಾಲ್ಯವಿವಾಹಗಳು ನಡೆದೇ ಹೋಗಿವೆ. ಈ ಪೈಕಿ ಮೂರು ಪ್ರಕರಣ
ಗಳು ಪೊಲೀಸ್ ಠಾಣೆ ಮೆಟ್ಟಿಲೇರಿವೆ.

ADVERTISEMENT

ಸಾಕ್ಷ್ಯಗಳ ಕೊರತೆ: ’ದೂರು ಬಂದ ಸಂದರ್ಭದಲ್ಲೆಲ್ಲ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆದರೆ, ಬಹುತೇಕ ಕಡೆ ಮದುವೆ ನಡೆದಿ
ರುವುದಕ್ಕೆ ಯಾವುದೇ ದಾಖಲೆ ಸಿಕ್ಕಿಲ್ಲ. ಮದುವೆಗಳು ನಡೆದೇ ಇಲ್ಲ ಎಂಬಂತೆ ಜನರು ನಮ್ಮೊಂದಿಗೆ ವಾಗ್ವಾದ ನಡೆಸಿ
ದ್ದಾರೆ. ಕೆಲವೊಮ್ಮೆ ಸಿಬ್ಬಂದಿ ಮೇಲೆ ಹಲ್ಲೆ ಪ್ರಯತ್ನಗಳೂ ನಡೆದಿವೆ. ಅಗತ್ಯ ಸಾಕ್ಷ್ಯಗಳು ಸಿಕ್ಕ ಸಂದರ್ಭಗಳಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಭಾರ ಉಪನಿರ್ದೇಶಕ ಸಿ.ವಿ.ರಾಮನ್‌.

'ಲಾಕ್‌ಡೌನ್‌ ಸಂದರ್ಭದಲ್ಲಿ ನಡೆದ ಮದುವೆಗಳಿಗೆ ಯಾವುದೇ ಲಗ್ನಪತ್ರಿಕೆ ಇರುವುದಿಲ್ಲ. ಕಲ್ಯಾಣ ಮಂಟಪ, ಸಮುದಾಯ ಭವನಗಳಲ್ಲಿ ಸಹ ಆಗಿಲ್ಲ. ಗುಟ್ಟಾಗಿ ಮದುವೆ ನಡೆದ ಕಾರಣ ಹೆಚ್ಚು ಬೆಳಕಿಗೆ ಬಂದಿಲ್ಲ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನವನ್ನೂ ಮಾಡಿದ್ದೇವೆ’ ಎಂದು ವಿವರಿಸುತ್ತಾರೆ.

ಸಮನ್ವಯದ ಕೊರತೆ: ಬಾಲ್ಯ ವಿವಾಹ ತಡೆಯಲೆಂದೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ರಕ್ಷಣಾ ಘಟಕ, ಮಕ್ಕಳ ರಕ್ಷಣಾ ಸಮಿತಿ ಹಾಗೂ ಪೊಲೀಸರು ಇದ್ದಾರೆ. ಜತೆಗೆ ಮಕ್ಕಳ ಸಹಾಯವಾಣಿಯೂ ಕಾರ್ಯ ನಿರ್ವಹಿಸುತ್ತಿದೆ. ದೂರು ಬಂದ ಸಂದರ್ಭಗಳಲ್ಲಿ ತಕ್ಷಣ ಕಾರ್ಯ ಪ್ರವೃತ್ತರಾಗಿ ತಡೆಗಟ್ಟುವುದು, ಸಂಬಂಧಿಸಿದವರ ಮೇಲೆ ದೂರು ದಾಖಲಿಸುವುದು, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಇಲಾಖೆಗಳ ಕರ್ತವ್ಯ. ಆದರೆ, ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ ಕಾರ್ಯ ನಿರ್ವಹಿಸಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.