
ಹಾರೋಹಳ್ಳಿ: ಚಾರಣಿಗರ ನೆಚ್ಚಿನ ತಾಣವಾದ ಇಲ್ಲಿಗೆ ಸಮೀಪದ ಚುಳುಕನಗಿರಿ ಸಂಜೆಯಾದರೆ ಕುಡುಕರ ನೆಚ್ಚಿನ ತಾಣವಾಗಿ ಮಾರ್ಪಾಡುಗುತ್ತಿದೆ.
ಕಾಲಭೈರವೇಶ್ವರನ ಕ್ಷೇತ್ರ ಎಂದು ಪ್ರಸಿದ್ಧಿಯಾದ ಚುಳುಕನಗಿರಿಯಲ್ಲಿ ಇತ್ತೀಚೆಗೆ ಅಕ್ರಮ ಚಟುವಟಿಕೆ ಹೆಚ್ಚಾಗುತ್ತಿವೆ. ಚುಳುಕನಬೆಟ್ಟಕ್ಕೆ ಹಗಲು ಹೊತ್ತಿನಲ್ಲಿ ಬೆಂಗಳೂರು ಹಾಗೂ ವಿವಿಧೆಡೆಯಿಂದ ಪ್ರವಾಸಿಗರು ಮತ್ತು ಚಾರಣಿಗರು ಬಂದರೆ, ಸಂಜೆ ನಂತರ ಕುಡುಕರ ಬರುತ್ತಾರೆ.
ರಾತ್ರಿ ಮದ್ಯದ ಪಾರ್ಟಿ ಮಾಡಿ ಎಲ್ಲೆಂದರಲ್ಲಿ ಖಾಲಿ ಮದ್ಯದ ಬಾಟಲ್, ಪ್ಲಾಸ್ಟಿಕ್ ಬಾಟಲ್, ಪ್ಲಾಸ್ಟಿಕ್ ಚೀಲ, ಬೀಡಿ, ಸಿಗರೇಟ್ ತುಂಡು, ಬಿರಿಯಾನಿ ಪೊಟ್ಟಣ, ಮಾಂಸಾಹಾರದ ತ್ಯಾಜ್ಯ ಎಸೆದು ಹೋಗುತ್ತಾರೆ.
ಸುತ್ತಮುತ್ತಲಿನ ಮನಮೋಹಕ ಹಸಿರು ಪರಿಸರ, ಪ್ರಶಾಂತ ವಾತಾವರಣ ಮತ್ತು ಕಡಿದಾದ ಬೆಟ್ಟಗಳಿಂದ ಚುಳುಕನಗಿರಿ ಎಲ್ಲರ ಕಣ್ಮನ ಸೆಳೆಯುತ್ತದೆ. ಗ್ರಾಮಸ್ಥರು, ಸುತ್ತಮುತ್ತಲಿನ ಗ್ರಾಮದವರು ದೇವಸ್ಥಾನಕ್ಕೆ ಬಂದು ಪೂಜೆ ಮಾಡಿಕೊಂಡು ಹೋಗುತ್ತಾರೆ. ಬೆಳಗ್ಗೆ ಹೋದರೆ ಬೆಟ್ಟದ ಮೇಲಿನ ಕಟ್ಟೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ಸಿಗರೇಟು ಚೂರು ಬಿದ್ದಿರುತ್ತವೆ.
ದೇವಾಲಯ ಜೀರ್ಣೋದ್ಧಾರ ಸಮಿತಿ ಬೆಟ್ಟದ ತಳಭಾಗದ ಪ್ರದೇಶ ಅಭಿವೃದ್ಧಿಪಡಿಸಿ ಕುಡಿಯುವ ನೀರಿನ ವ್ಯವಸ್ಥೆ, ದಾಸೋಹ ಮನೆ, ಅಡುಗೆ ಮನೆ ನಿರ್ಮಿಸಿದೆ. ಸಭಾಂಗಣವನ್ನು ಶುಭ ಸಮಾರಂಭಗಳಿಗೆ ಬಾಡಿಗೆಗೆ ನೀಡಲಾಗುತ್ತದೆ. ಇಲ್ಲಿಯೇ ಅಡುಗೆ ಮಾಡಿ ಬಂದವರಿಗೆ ಬಡಿಸುತ್ತಾರೆ ಸಮಾರಂಭಗಳ ನಂತರ ಯಾರೂ ಸ್ವಚ್ಛಗೊಳಿಸುವುದಿಲ್ಲ ಎಂದು ಸ್ಥಳೀಯರು ದೂರುತ್ತಾರೆ.
ಸಿಸಿಟಿವಿ ಅಳವಡಿಸಿ:ಐತಿಹಾಸಿಕ ಬೆಟ್ಟ ಪವಿತ್ರ ಸ್ಥಳವಾಗಿದ್ದು ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಹಾಗಾಗಿ ಬೆಟ್ಟದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಅಕ್ರಮ ಮದ್ಯ ಸೇವನೆ ಸೇರಿದಂತೆ ಇತರ ಚಟುವಟಿಕೆ ಮೇಲೆ ನಿಗಾ ಇಡಬೇಕು. ಆಗ ಪುಂಡರ ಆಟಾಟೋಪ ನಿಯಂತ್ರಣಕ್ಕೆ ಬರಲಿದೆ ಎನ್ನುವುದು ಸ್ಥಳೀಯರ ವಾದ.
ಚುಳುಕನಗಿರಿ ಅಕ್ಕಪಕ್ಕ ಪ್ರಭಾವಿಗಳು ಜಮೀನು ಖರೀದಿಸಿದ್ದು ಪಕ್ಕದ ಅರಣ್ಯ ಭೂಮಿ, ಗೋಮಾಳ ಜಾಗ ಕಬಳಿಸಿ ಒತ್ತುವರಿ ಮಾಡುತ್ತಿದ್ದಾರೆ. ಬೆಟ್ಟದ ಮಣ್ಣು ಬಸಿದು ಅಕ್ರಮವಾಗಿ ಸಾಗಿಸಲಾಗುತ್ತಿದೆ. ಬೆಟ್ಟದ ಕೆಳಭಾಗವನ್ನು ಸಮತಟ್ಟು ಮಾಡಿ ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ.
ಚುಳುಕನಗಿರಿಯಲ್ಲಿ ಕಿಡಿಗೇಡಿಗಳು ಬೆಂಕಿ ಹಾಕಿ ಹೋಗುತ್ತಿದ್ದು ಆಗಾಗ ರಾತ್ರಿ ಕಾಡ್ಗಿಚ್ಚು ವ್ಯಾಪಿಸುತ್ತದೆ. ಇದಕ್ಕೆ ಕಡಿವಾಣ ಹಾಕುವ ಕೆಲಸ ಆಗಿಲ್ಲಪ್ರಭುಸ್ವಾಮಿ, ಮುಖ್ಯಸ್ಥರು ಗಿರಿ ಪ್ರದಕ್ಷಣೆ ಸಮಿತಿ ಚುಳುಕನಗಿರಿ
ಚುಳುಕನಗಿರಿ ಬೆಟ್ಟವು ಪವಿತ್ರವಾದ ಸ್ಥಳವಾಗಿದೆ. ಪ್ರವಾಸಿಗರ ನೆಚ್ಚಿನ ತಾಣವೂ ಆಗಿರುವ ಈ ಸ್ಥಳದಲ್ಲಿ ಮದ್ಯ ಸೇವನೆ ಸೇರಿದಂತೆ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಹಾಗಾಗಿ ಬೆಟ್ಟದ ಪರಿಸರದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಅಕ್ರಮ ಮದ್ಯ ಸೇವನೆ ಸೇರಿದಂತೆ ಇತರ ಚಟುವಟಿಕೆಗಳ ಮೇಲೆ ನಿಗಾ ಇಡಬೇಕು.ನಾಗರಾಜು, ಸಾಮಾಜಿಕ ಕಾರ್ಯಕರ್ತ ಹಾರೋಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.