ADVERTISEMENT

ಸಂವಿಧಾನದ ಕಾಪಾಡುವುದು ನಮ್ಮ ಜವಾಬ್ದಾರಿ: ಕೃಷ್ಣಮೂರ್ತಿ ಚಮರಂ

ಸಂವಿಧಾನ ದಿನಾಚರಣೆ ಕಾರ್ಯಕ್ರಮ; ಡಿ.ಸಿ ಕಚೇರಿಯಿಂದ ಜಿ.ಪಂ. ಕಚೇರಿವರೆಗೆ ಸಂವಿಧಾನ ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 5:19 IST
Last Updated 27 ನವೆಂಬರ್ 2025, 5:19 IST
ರಾಮನಗರದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಪ್ರಯುಕ್ತ ಸಂವಿಧಾನ ಜಾಗೃತಿ ಜಾಥಾಕ್ಕೆ ಡಿ.ಸಿ ಕಚೇರಿ ಬಳಿ ಚಾಲನೆ ನೀಡಿದ ಜಿ.ಪಂ. ಸಿಇಒ ಅನ್ಮೋಲ್ ಜೈನ್ ಹೆಜ್ಜೆ ಹಾಕಿದರು. ಇಲಾಖೆಯ ಜಂಟಿ ನಿರ್ದೇಶಕ ಶಿವಕುಮಾರ್, ತಾಲ್ಲೂಕು ಸಹಾಯಕ ನಿರ್ದೇಶಕ ಡಾ. ಕುಮಾರ್, ಐಜೂರು ಎಸ್‌ಐ ಜಾರ್ಜ್ ಪ್ರಕಾಶ್ ಹಾಗೂ ಇತರರು ಇದ್ದಾರೆ
ರಾಮನಗರದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಪ್ರಯುಕ್ತ ಸಂವಿಧಾನ ಜಾಗೃತಿ ಜಾಥಾಕ್ಕೆ ಡಿ.ಸಿ ಕಚೇರಿ ಬಳಿ ಚಾಲನೆ ನೀಡಿದ ಜಿ.ಪಂ. ಸಿಇಒ ಅನ್ಮೋಲ್ ಜೈನ್ ಹೆಜ್ಜೆ ಹಾಕಿದರು. ಇಲಾಖೆಯ ಜಂಟಿ ನಿರ್ದೇಶಕ ಶಿವಕುಮಾರ್, ತಾಲ್ಲೂಕು ಸಹಾಯಕ ನಿರ್ದೇಶಕ ಡಾ. ಕುಮಾರ್, ಐಜೂರು ಎಸ್‌ಐ ಜಾರ್ಜ್ ಪ್ರಕಾಶ್ ಹಾಗೂ ಇತರರು ಇದ್ದಾರೆ   

ರಾಮನಗರ: ‘ದೇಶವನ್ನು ಅರ್ಥ ಮಾಡಿಕೊಳ್ಳದ ಹೊರತು ನಮ್ಮ ಸಂವಿಧಾನ ಅರ್ಥವಾಗುವುದಿಲ್ಲ. ಸಂವಿಧಾನ ಎಂಬುದು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕಾರ್ಯಕ್ರಮ. ನಾವು ಅದನ್ನು ಕಾಪಾಡಿದರೆ, ಅದು ನಮ್ಮನ್ನು ಕಾಪಾಡುತ್ತದೆ’ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಕೃಷ್ಣಮೂರ್ತಿ ಚಮರಂ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಸಮಾಜ ಕಲ್ಯಾಣ ಇಲಾಖೆ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ‘ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡಿರುವುದರಿಂದ ಪ್ರಜೆಗಳು ಹಕ್ಕುಗಳನ್ನು ಅನುಭವಿಸುವ ಜೊತೆಗೆ ಕರ್ತವ್ಯಗಳನ್ನು ಸಹ ನಿಭಾಯಿಸಬೇಕು. ಇಲ್ಲದಿದ್ದರೆ ದೇಶ ಅಧಃಪತನವಾಗುತ್ತದೆ ಎಂಬ ಎಚ್ಚರಿಕೆಯನ್ನು ಅಂಬೇಡ್ಕರ್ ನೀಡಿದ್ದರು’ ಎಂದರು.

‘ನಮ್ಮಲ್ಲಿದ್ದ ಅಸಮಾನತೆ, ತಾರತಮ್ಯ, ಜಾತಿ ವ್ಯವಸ್ಥೆಯನ್ನು ಬಳಸಿಕೊಂಡು ಪರಕೀಯರು ನೂರಾರು ವರ್ಷ ದೇಶ ಆಳಿದರು. ಹೋರಾಟದ ಫಲವಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿತು. ಈ ಹಿನ್ನೆಲೆಯ ಅರಿವು ಇದ್ದಿದ್ದರಿಂದಲೇ ಸಂವಿಧಾನದ ಕರಡು ಸಮಿತಿ ಅಧ್ಯಕ್ಷರಾಗಿದ್ದ ಅಂಬೇಡ್ಕರ್ ಅವರು, ಸಮ ಸಮಾಜ ನಿರ್ಮಾಣದ ಆಶಯದ ಸಂವಿಧಾನವನ್ನು ನಮಗೆ ಕೊಟ್ಟರು. ಸಂವಿಧಾನದ ಆಶಯ ಮತ್ತು ಅಂಬೇಡ್ಕರ ಕನಸು ನನಸು ಮಾಡುವುದು ನಮ್ಮೆಲ್ಲರ ಜವಾಬ್ದಾರಿ’ ಎಂದು ಹೇಳಿದರು.

ADVERTISEMENT

ಪ್ರಾಸ್ತಾವಿಕ ಮಾತುಗಳನ್ನಾಡಿದ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಜಿ.ಡಿ. ಶೇಖರ್, ‘ವೈವಿಧ್ಯತೆಯಲ್ಲಿ ಏಕತೆ ಇರುವ ದೇಶ ನಮ್ಮದು. ಭಾರತೀಯರ ಮನೋಭಾವ ಒಂದಾಗಿರಬೇಕು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಆಡಳಿತ ನೇಮಕಾತಿಗಳು ಹೇಗಿರಬೇಕೆಂಬುದನ್ನು ಸಂವಿಧಾನದಲ್ಲಿ ಈಗಾಗಲೇ ನಮೂದಿಸಲಾಗಿದೆ ಸಂವಿಧಾನದ ಆಶಯಗಳನ್ನು ನಾವೆಲ್ಲರೂ ಪಾಲಿಸಬೇಕು’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ, ಉಪವಿಭಾಗಾಧಿಕಾರಿ ಬಿನೋಯ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಧನರಾಜ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶಿವಕುಮಾರ್, ತಾಲ್ಲೂಕು ಸಹಾಯಕ ನಿರ್ದೇಶಕ ಡಾ. ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ. ಸತೀಶ್, ಕೆಡಿಪಿ ಸದಸ್ಯ ಗುರುಮೂರ್ತಿ, ಜಿಲ್ಲಾ ಜಾಗೃತಿ ಸಮಿತಿ ಸದಸ್ಯರಾದ ಚಲುವರಾಜು, ಕುಂಬಾಪುರ ಬಾಬು, ಮುಖಂಡರಾದ ಮರಿಸ್ವಾಮಿ, ಶೇಖರ್, ಅಶೋಕ್, ಸಿದ್ದರಾಜು ಹಾಗೂ ಇತರರು ಇದ್ದರು.

ರಾಮನಗರದಲ್ಲಿ ಜಿ.ಪಂ. ಸಭಾಂಗಣದಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ವಿದ್ಯಾರ್ಥಿಗಳು ಹಾಗೂ ಗಣ್ಯರು ಉದ್ಘಾಟಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಕೃಷ್ಣಮೂರ್ತಿ ಚಮರಂ ಉಪ ವಿಭಾಗಾಧಿಕಾರಿ ಬಿನೋಯ್ ಯೋಜನಾ ನಿರ್ದೇಶಕ ಜಿ.ಡಿ. ಶೇಖರ್ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶಿವಕುಮಾರ್ ಸಹಾಯಕ ನಿರ್ದೇಶಕ ಡಾ. ಕುಮಾರ್ ಹಾಗೂ ಇತರರು ಇದ್ದಾರೆ
ರಾಮನಗರದಲ್ಲಿ ಜಿ.ಪಂ. ಸಭಾಂಗಣದಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ನಡೆದ ಸಂವಿಧಾನ ಜಾಗೃತಿ ಜಾಥಾದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವೇಷಧಾರಿ ವಿದ್ಯಾರ್ಥಿ

ಗಮನ ಸೆಳೆದ ಜಾಗೃತಿ ಜಾಥಾ

ಕಾರ್ಯಕ್ರಮದ ಪ್ರಯುಕ್ತ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಜಾಥಾಗೆ ಜಿಲ್ಲಾ ಪಂಚಾಯಿತಿ ಸಿಇಒ ಅನ್ಮೋಲ್ ಜೈನ್ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಚಾಲನೆ ನೀಡಿದರು. ವಿದ್ಯಾರ್ಥಿಗಳು ಭಾಗವಹಿಸಿದ್ದ ಜಾಥಾದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವೇಷಧಾರಿ ವಿದ್ಯಾರ್ಥಿ ಗಮನ ಸೆಳೆದ. ಕಚೇರಿಯಿಂದ ಹೊರಟ ಜಾಥಾದುದ್ದಕ್ಕೂ ಸಂವಿಧಾನ ಹಾಗೂ ಅಂಬೇಡ್ಕರ್ ಪರವಾದ ಘೋಷಣೆಗಳು ಮೊಳಗಿದವು. ವಿದ್ಯಾರ್ಥಿಗಳು ಜಾಗೃತಿ ಫಲಕಗಳನ್ನು ಹಿಡಿದು ಹೆಜ್ಜೆ ಹಾಕಿದರು. ವೇದಿಕೆ ಕಾರ್ಯಕ್ರಮದಲ್ಲಿ ಗಣ್ಯರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಎಲ್ಲರಿಗೂ ಸಂವಿಧಾನದ ಪೀಠಿಕೆಯನ್ನು ಬೋಧಿಸಲಾಯಿತು. ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಭಾಷಣ ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.