ADVERTISEMENT

ಸಂವಿಧಾನ ಬದಲಿಸಲು ಮುಂದಾದರೆ ಭಸ್ಮವಾಗುತ್ತಾರೆ: ಶಾಸಕ ಹುಸೇನ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 5:08 IST
Last Updated 27 ನವೆಂಬರ್ 2025, 5:08 IST
<div class="paragraphs"><p>ರಾಮನಗರದ ನಗರಸಭೆ ಆವರಣದಲ್ಲಿ ಬುಧವಾರ ಸಂವಿಧಾನ ಪೀಠಿಕೆ ಪ್ರತಿಕೃತಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಯನ್ನು ಗಣ್ಯರು ನೆರವೇರಿಸಿದರು.&nbsp;&nbsp;</p></div>

ರಾಮನಗರದ ನಗರಸಭೆ ಆವರಣದಲ್ಲಿ ಬುಧವಾರ ಸಂವಿಧಾನ ಪೀಠಿಕೆ ಪ್ರತಿಕೃತಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಯನ್ನು ಗಣ್ಯರು ನೆರವೇರಿಸಿದರು.  

   

ರಾಮನಗರ: ‘ದೇಶದ ರಾಷ್ಟ್ರಗ್ರಂಥವಾದ ಸಂವಿಧಾನವನ್ನು ಬದಲಿಸುವುದಾಗಿ ಕೆಲವರು ಹೇಳುತ್ತಾರೆ. ಅಂತಹ ದುಸ್ಸಾಹಸಕ್ಕೆ ಯಾರಾದರೂ ಕೈ ಹಾಕಿದರೆ ಭಸ್ಮವಾಗುತ್ತಾರೆ. ನಮ್ಮ ಸಂವಿಧಾನವನ್ನು ಮುಟ್ಟುವುದು ಅಷ್ಟು ಸುಲಭವಲ್ಲ’ ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಎಚ್ಚರಿಕೆ ನೀಡಿದರು.

ಇಲ್ಲಿನ ನಗರಸಭೆ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಂವಿಧಾನ ಪೀಠಿಕೆ ಪ್ರತಿಕೃತಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಭಾರತವು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಸಂವಿಧಾನವು ದೇಶವನ್ನು ಸಮರ್ಥವಾಗಿ ಮುನ್ನಡೆಸುವ ಚಾಲಕ ಶಕ್ತಿಯಾಗಿದೆ’ ಎಂದರು.

ADVERTISEMENT

‘ಇಂದು ಎಲ್ಲೆಡೆ ಸಂವಿಧಾನ ದಿನ ಆಚರಿಸಲಾಗುತ್ತಿದೆ. ಆದರೆ, ರಾಮನಗರ ನಗರಸಭೆಯಷ್ಟು ಅರ್ಥಪೂರ್ಣವಾಗಿ ಎಲ್ಲೂ ಆಚರಿಸಿರಲು ಸಾಧ್ಯವಿಲ್ಲ. ಸಂವಿಧಾನದ ಪೀಠಿಕೆ ಮತ್ತು ಅಂಬೇಡ್ಕರ್ ಪುತ್ಥಳಿ ಅನಾವರಣದ ಈ ಐತಿಹಾಸಿಕ ಕಾರ್ಯಕ್ರಮವು ಹೊಸ ದಾಖಲೆ ಬರೆದಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಹಿತಿ ಡಾ. ಬಂಜಗೆರೆ ಜಯಪ್ರಕಾಶ್ ಮಾತನಾಡಿ, ‘ಸಂವಿಧಾನವು ಕಾನೂನುಗಳ ತಾಯಿ. ಯಾವುದೇ ಮಸೂದೆ ಕಾಯ್ದೆ ಆಗಬೇಕಾದರೆ ಅದು ಸಂವಿಧಾನಕ್ಕೆ ಬದ್ದವಾಗಿರಬೇಕು. ನಾವು ಯಾವ ದಿಕ್ಕಿನಲ್ಲಿ ಆಡಳಿತ ನಡೆಸಿ ದೇಶ ಕಟ್ಟಬೇಕು ಎಂಬುದಕ್ಕೆ ಮಾರ್ಗದರ್ಶಿಯಾಗಿ ಸಂವಿಧಾನ ಕೆಲಸ ಮಾಡುತ್ತದೆ’ ಎಂದು ಹೇಳಿದರು.

‘ಸ್ವಾತಂತ್ರ್ಯಕ್ಕೆ ಮುಂಚೆ ಜನ್ಮದ ಆಧಾರದ ಮೇಲೆಯೇ ಎಲ್ಲರ ಹಕ್ಕು ಮತ್ತು ಕರ್ತವ್ಯಗಳು ನಿರ್ಧಾರವಾಗುತ್ತಿದ್ದವು. ಆದರೆ ಸ್ವಾತಂತ್ರ್ಯ ನಂತರ ಎಲ್ಲರಿಗೂ ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಹಕ್ಕುಗಳು ಸಿಕ್ಕವು. ಇದು ಸಾಧ್ಯವಾಗಿದ್ದು ಸಂವಿಧಾನದಿಂದಲೇ ಹೊರತು ಬೇರಾವುದೇ ಶಕ್ತಿಗಳಿಂದಲ್ಲ’ ಎಂದರು.

ಅಕ್ಕ ಐಎಎಸ್ ಅಕಾಡೆಮಿ ನಿರ್ದೇಶಕ ಡಾ. ಶಿವಕುಮಾರ್, ‘2016ಕ್ಕೂ ಮುಂಚೆ ನ. 26ನೇ ದಿನವನ್ನು ರಾಷ್ಟ್ರೀಯ ಕಾನೂನು ದಿನ ಎಂದು ಕರೆಯಲಾಗುತ್ತಿತ್ತು. ನಂತರ ಕೇಂದ್ರ ಸರ್ಕಾರ ಸಂವಿಧಾನ ದಿನಾಚರಣೆ ಎಂದು ಬದಲಿಸಿತು. ಜಾತಿ, ಧರ್ಮದಂತಹ ವೈಯಕ್ತಿಕ ವಿಷಯಕ್ಕಿಂತ ನಮಗೆ ದೇಶ ಮೊದಲಾಗಬೇಕು. ಆಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ ಕೆಎಸ್‌ಎಂಬಿಎಲ್ ಅಧ್ಯಕ್ಷ ಎಸ್. ಗಂಗಾಧರ್, ಜಿಬಿಡಿಎ ಅಧ್ಯಕ್ಷ ಜಿ.ಎನ್. ನಟರಾಜ್ ಗಾಣಕಲ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ. ರಾಜು, ತಾಲ್ಲೂಕು ಅಧ್ಯಕ್ಷ ವಿ.ಎಚ್. ರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್‌ಕುಮಾರ್, ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ, ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಶಿವಕುಮಾರಸ್ವಾಮಿ, ಟಿಎಪಿಸಿಎಂಎಸ್ ಅಧ್ಯಕ್ಷ ಎಸ್. ಸುರೇಶ್ ದೊಡ್ಡಿ, ಹಿಂದುಳಿದ ಜಾತಿಗಳ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ರೈಡ್ ನಾಗರಾಜು, ಪಿಯು ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ಜಿ. ಶಿವಣ್ಣ ಕೊತ್ತಿಪುರ, ರೈತ ಸಂಘದ ಅನಸೂಯಮ್ಮ, ಯೋಜನಾ ನಿರ್ದೇಶಕ ಜಿ.ಡಿ. ಶೇಖರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ್, ಪೌರಾಯುಕ್ತ ಡಾ. ಜಯಣ್ಣ, ದಲಿತ ಮುಖಂಡರಾದ ನರಸಿಂಹಯ್ಯ, ಗುರುಮೂರ್ತಿ, ನಗರಸಭೆ ಸದಸ್ಯರು ಹಾಗೂ ಇತರರು ಇದ್ದರು.

ಕಂದಾಯ ನಿರೀಕ್ಷಕ ಆರ್. ನಾಗರಾಜು ಅತಿಥಿಗಳನ್ನು ಸ್ವಾಗತಿಸಿ, ನಿರೂಪಣೆ ಮಾಡಿದರು. ಬ್ಯಾಡರಹಳ್ಳಿ ಶಿವಕುಮಾರ್ ನೇತೃತ್ವದ ತಂಡ ಸಂವಿಧಾನ ಕುರಿತ ಹಾಡುಗಳನ್ನು ಪ್ರಸ್ತುತಪಡಿಸಿತು.

ರಾಮನಗರದ ನಗರಸಭೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನ
ದೇಶ ಮುನ್ನಡೆಸುವ ಸಂವಿಧಾನ ನಮ್ಮ ಅಸ್ಮಿತೆ. ಅದರ ಪೀಠಿಕೆಯ ಪ್ರತಿಕೃತಿ ಮತ್ತು ಅಂಬೇಡ್ಕರ್ ಪುತ್ಥಳಿಯನ್ನು ನಗರಸಭೆ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಅವರ ಚಿಂತನೆ ಬಹಳ ದೊಡ್ಡದು
– ಸಿ.ಎಂ. ಲಿಂಗಪ್ಪ ಮಾಜಿ ಶಾಸಕ
1946 ನ. 26ರಂದು ಭಾರತದ ಯುಗ ಪರಿವರ್ತನೆಯಾಯಿತು. ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನವನ್ನು ಸಮರ್ಪಿಸುವುದರೊಂದಿಗೆ 2 ಸಾವಿರ ವರ್ಷಗಳಿಂದ ದೇಶವನ್ನು ಆವರಿಸಿದ್ದ ಅಂಧಕಾರ ಸರಿಯಿತು
– ಡಾ. ಬಂಜಗೆರೆ ಜಯಪ್ರಕಾಶ್ ಸಾಹಿತಿ
ಸಂವಿಧಾನ ಸಮರ್ಪಿಸಿದ ದಿನ ಮತ್ತು ಜಾರಿಯಾದ ದಿನವನ್ನು ತಪ್ಪಾಗಿ ಅರ್ಥೈಸಿ ಜನರಿಗೆ ಅದರ ಮಹತ್ವ ಅರ್ಥವಾಗದಂತೆ ನೋಡಿಕೊಳ್ಳಲಾಗಿತ್ತು. ಇತ್ತೀಚೆಗೆ ಸಮುದಾಯಗಳು ಎಚ್ಚೆತ್ತುಕೊಂಡು ಸಂವಿಧಾನದ ಬಗ್ಗೆ ಜಾಗೃತರಾಗುತ್ತಿವೆ
– ಡಾ. ಶಿವಕುಮಾರ್ ನಿರ್ದೇಶಕ ಅಕ್ಕ ಐಎಎಸ್ ಅಕಾಡೆಮಿ
‘ರಹಸ್ಯ ಕಾರ್ಯಸೂಚಿಗೆ ಅಂಬೇಡ್ಕರ್‌ ವಾದವೇ ಅಸ್ತ್ರ’
‘ದೇಶದಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಸಂವಿಧಾನದ ವಿರುದ್ಧ ನಡೆಸುತ್ತಿರುವ ರಹಸ್ಯ ಕಾರ್ಯಸೂಚಿ ಎದುರಿಸಲು ಅಂಬೇಡ್ಕರ್ ವಾದ ಮತ್ತು ಸಂವಿಧಾನವೇ ನಮಗಿರುವ ಅಸ್ತ್ರ. ಬಸವಣ್ಣನವರು ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ ಇವ ನಮ್ಮವ ಇವನಮ್ಮವನೆಂದೆನಿಸಯ್ಯಾ ಎಂದರು. ಅದೇ ಆಶಯದೊಂದಿಗೆ ಸಂವಿಧಾನದ ಪೀಠಿಕೆ ಶುರುವಾಗುತ್ತದೆ. ಅಂತಹ ರಾಷ್ಟ್ರಗ್ರಂಥದ ಮಹತ್ವವನ್ನು ಜನರಿಗೆ ತಿಳಿಸಲು ನಗರಸಭೆ ಆವರಣದಲ್ಲಿ ಪೀಠಿಕೆ ಮತ್ತು ಅಂಬೇಡ್ಕರ್ ಪುತ್ಥಳಿ ಪ್ರತಿಷ್ಠಾಪಿಸಲಾಗಿದೆ’ ಎಂದು ಪ್ರಾಸ್ತಾವಿಕ ಮಾತುಗಳನ್ನಾಡಿದ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.