ADVERTISEMENT

ಕನಕಪುರ: ಡಿಕೆಶಿಗೆ ಪೈಪೋಟಿ- ಬಿಎಸ್‌ಪಿ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2023, 4:42 IST
Last Updated 1 ಮಾರ್ಚ್ 2023, 4:42 IST
ಕನಕಪುರ ನಗರದ ಪರಿವೀಕ್ಷಣಾ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಬಿಎಸ್‌ಪಿ ಮುಖಂಡರು ಡಾ.ಬಿ.ಆರ್‌. ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು
ಕನಕಪುರ ನಗರದ ಪರಿವೀಕ್ಷಣಾ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಬಿಎಸ್‌ಪಿ ಮುಖಂಡರು ಡಾ.ಬಿ.ಆರ್‌. ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು   

ಕನಕಪುರ: ‘ಕನಕಪುರ ವಿಧಾನಕ್ಷೇತ್ರದಲ್ಲಿ ತಮಗೆ ಯಾರು ಎದುರಾಳಿ ಇಲ್ಲ. ಎಲ್ಲವನ್ನು ಹಣದಿಂದಲೇ ಗೆಲ್ಲಬಹುದು ಎಂದು ಡಿ.ಕೆ. ಶಿವಕುಮಾರ್‌ ಅಂದುಕೊಂಡಿದ್ದಾರೆ. ಅದಕ್ಕೆ ಈ ಬಾರಿ ಅವಕಾಶ ನೀಡುವುದಿಲ್ಲ. ಪಕ್ಷವು ಪ್ರಬಲ ಪೈಪೋಟಿ ನೀಡಲಿದೆ’ ಎಂದು ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಂದಾನಪ್ಪ ತಿಳಿಸಿದರು.

ಇಲ್ಲಿನ ರೋಟರಿ ಭವನದಲ್ಲಿ ಪಕ್ಷದಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕನಕಪುರದಲ್ಲಿ ದೊಡ್ಡ ದೊಡ್ಡ ಕಟ್ಟಡಗಳ ನಿರ್ಮಾಣದಿಂದಲೇ ಅಭಿವೃದ್ಧಿ ಆಗುವುದಿಲ್ಲ. ತಾಲ್ಲೂಕಿನಲ್ಲಿ ಎಷ್ಟು ಜನರು ನಿರುದ್ಯೋಗಿಗಳಾಗಿ ಅಲೆದಾಡುತ್ತಿದ್ದಾರೆ. ಎಷ್ಟು ಜನರು ವಸತಿ ರಹಿತರಿದ್ದಾರೆ. ಸಾಗುವಳಿ ಚೀಟಿಗಾಗಿ ತಾಲ್ಲೂಕು ಕಚೇರಿಗೆ ಸುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ದೂರಿದರು.

ADVERTISEMENT

ತಾಲ್ಲೂಕು ಕಚೇರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಬಡಜನರು ಅಧಿಕಾರಿಗಳಿಂದ ಕೆಲಸ ಮಾಡಿಸಿಕೊಳ್ಳಲಾಗದೆ ಅಸಹಾಯಕರಾಗಿದ್ದಾರೆ. ಇವೆಲ್ಲವೂ ಶಾಸಕರಿಗೆ ಕಾಣಿಸುತ್ತಿಲ್ಲ. ಕನಕಪುರ ಹಿಂದುಳಿದ ತಾಲ್ಲೂಕಿನ ಪಟ್ಟಿಯಲ್ಲೇ ಇದ್ದು ಶಿವಕುಮಾರ್‌ ಸಹ ಅದನ್ನು ಒಪ್ಪಿಕೊಳ್ಳುತ್ತಾರೆ
ಎಂದರು.

ಜಿಲ್ಲಾ ಅಧ್ಯಕ್ಷ ಕೃಷ್ಣಪ್ಪ ಮಾತನಾಡಿ, ದೇಶದಲ್ಲಿ ಅಸಮಾನತೆ ತೊಲಗಿಸಿ ಸಮಾನತೆ ತರಲು ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ವಿಶ್ವ ಮೆಚ್ಚುಗೆ ಪಡೆದಿರುವ ಸಂವಿಧಾನ ರಚಿಸಿ ಕೊಟ್ಟಿದ್ದಾರೆ. ಆದರೆ, ಅದು ಸರಿಯಾದ ರೀತಿಯಲ್ಲಿ ಜಾರಿ ಆಗಿಲ್ಲ. ಯಾವ ಪಕ್ಷಗಳು ಪೂರ್ಣ ಪ್ರಮಾಣದಲ್ಲಿ ಸಂವಿಧಾನ ಜಾರಿ ಮಾಡುತ್ತಿಲ್ಲ. ಬಿಎಸ್‌ಪಿಯಿಂದ ಮಾತ್ರ ಅದು ಜಾರಿ ಮಾಡಲು ಸಾಧ್ಯ ಎಂದು ಹೇಳಿದರು.

ಈ ಬಾರಿ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲೂ ಪಕ್ಷವು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಕನಕಪುರ ಕ್ಷೇತ್ರದಲ್ಲಿ ಇಬ್ಬರು ಆಕಾಂಕ್ಷಿಗಳಿದ್ದು ಪಕ್ಷದ ವರಿಷ್ಠರು ಯಾರಿಗೆ ಟಿಕೆಟ್‌ ನೀಡಲಿದ್ದಾರೆಯೋ ಅವರ ಗೆಲುವಿಗೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಜಿಲ್ಲಾ ಮಹಿಳಾ ಉಪಾಧ್ಯಕ್ಷೆ ಬಸವ ಮಾದಮ್ಮ, ಮುಖಂಡರಾದ ಕಾಂತರಾಜು, ಬಸವರಾಜು, ವೆಂಕಟಾಚಲ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.