ADVERTISEMENT

ರಾಮನಗರ: ಇನ್ನಾದರೂ ಸುಲಭವಾಗಿ ಸಿಗುತ್ತಾ ಲಸಿಕೆ?

ಜನರ ಬಳಿಗೆ ಲಸಿಕೆ ಅಭಿಯಾನ l ಅಂಗವಿಕಲರು, ಹಿರಿಯ ನಾಗರಿಕರಿಗೆ ವಾಹನ ವ್ಯವಸ್ಥೆ

ಆರ್.ಜಿತೇಂದ್ರ
Published 21 ಜೂನ್ 2021, 3:33 IST
Last Updated 21 ಜೂನ್ 2021, 3:33 IST
ಅಂಗವಿಕಲರು, ಹಿರಿಯ ನಾಗರಿಕರನ್ನು ಲಸಿಕಾ ಕೇಂದ್ರಕ್ಕೆ ಕರೆ ತರುತ್ತಿರುವುದು
ಅಂಗವಿಕಲರು, ಹಿರಿಯ ನಾಗರಿಕರನ್ನು ಲಸಿಕಾ ಕೇಂದ್ರಕ್ಕೆ ಕರೆ ತರುತ್ತಿರುವುದು   

ರಾಮನಗರ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯು ಕಳೆದೊಂದು ವಾರದಿಂದ ಎರಡಂಕಿಯ ಒಳಗೆ ಇದೆ. ಸೋಂಕು ನಿಯಂತ್ರಣದ ಜೊತೆಗೆ ಜನರಿಗೆ ಲಸಿಕೆ ನೀಡುವ ಕಾರ್ಯವೂ ಚುರುಕಾಗಿದ್ದು, ಇನ್ನು ಮುಂದೆ ಯುವಜನರಿಗೂ ಸುಲಭವಾಗಿ ಲಸಿಕೆ ಸಿಗುವ ಆಶಾಭಾವ ಮೂಡಿದೆ.

ಜಿಲ್ಲೆಯಲ್ಲಿ ಕೋವಿಡ್‌ ಲಸಿಕಾ ಕೇಂದ್ರಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಪ್ರಸ್ತುತ 134 ಕೇಂದ್ರಗಳಲ್ಲಿ ಲಸಿಕೆ ನೀಡಲು ಜಿಲ್ಲಾಡಳಿತ ಉದ್ದೇಶಿಸಿದೆ. 45 ವರ್ಷ ಮೇಲ್ಪಟ್ಟವರ ಜೊತೆಗೇ 18 ವರ್ಷದಿಂದ 44 ವರ್ಷದ ಒಳಗಿನವರಿಗೂ ಆದ್ಯತೆ ಮೇರೆಗೆ ಲಸಿಕೆ ಲಭ್ಯವಾಗುತ್ತಿದ್ದು, ಇದರಿಂದ ಸೋಂಕಿನ ಪ್ರಮಾಣ ಪರಿಣಾಮಕಾರಿ ಇಳಿಕೆ ಕಾಣುತ್ತಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ಮನೆಗೆ ಬರಲಿದೆ ಬಸ್‌: ಜಿಲ್ಲೆಯಲ್ಲಿ ಅಂಗವಿಕಲರು ಹಾಗೂ ಹಿರಿಯ ನಾಗರಿಕರು ವಾಹನ ಸೌಲಭ್ಯದ ಕೊರತೆಯಿಂದ ಲಸಿಕಾ ಕೇಂದ್ರಗಳತ್ತ ಹೆಜ್ಜೆ ಹಾಕುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇದನ್ನು ಮನಗಂಡ ವಿವಿಧ್ ಎಂಟರ್‌ಪ್ರೈಸಸ್‌ ಸಂಸ್ಥೆಯು ಬಸ್‌ ಸೌಕರ್ಯ ಒದಗಿಸುವ ಮೂಲಕ ದುರ್ಬಲ ವರ್ಗದ ಜನರು ಲಸಿಕೆ ಪಡೆಯಲು ನೆರವಾಗಿದೆ.

ADVERTISEMENT

ಗ್ರಾಮೀಣ ಭಾಗದ ಅಂಗವಿಕಲರು ಹಾಗೂ ಹಿರಿಯ ನಾಗರಿಕರನ್ನು ಮನೆ ಬಳಿಯಿಂದ ಲಸಿಕಾ ಕೇಂದ್ರದತ್ತ ಕರೆ ತಂದು, ಲಸಿಕೆ ಪಡೆದ ಬಳಿಕ ಅವರನ್ನು ಮನೆಗೆ ಬಿಡುವ ಕೆಲಸ ಮಾಡಲಿದೆ. ಸದ್ಯ ಜಿಲ್ಲೆಯ 200 ಹಳ್ಳಿಗಳಲ್ಲಿ ಈ ಸೇವೆ ಲಭ್ಯವಾಗಲಿದೆ.

ಜಿಲ್ಲೆಯಲ್ಲಿ ಒಟ್ಟು 17,865 ಅಂಗವಿಕಲರು ಇದ್ದಾರೆ. ಇವರ ಪೈಕಿ 5,062 ಮಂದಿಯಷ್ಟೇ ಈವರೆಗೆ ಲಸಿಕೆ ಪಡೆದಿದ್ದಾರೆ. ಇದೀಗ ಅವರಿಗೆ ಸಾರಿಗೆ ಸೌಲಭ್ಯವೂ ಇದೆ. ಈ ವರ್ಗದ 18 ವರ್ಷ ಮೇಲ್ಪಟ್ಟ ಎಲ್ಲ ಅಶಕ್ತರಿಗೆ ಆದ್ಯತೆ ಮೇರೆಗೆ ಈಗಾಗಲೇ ಲಸಿಕೆ ನೀಡಲಾಗುತ್ತಿದೆ.

ಕುಟುಂಬದವರಿಗೂ ಲಸಿಕೆ: ಆರಂಭದಲ್ಲಿ ಕೋವಿಡ್ ಸೈನಿಕರಿಗೆ ಲಸಿಕೆ ಅಭಿಯಾನ ಹಮ್ಮಿಕೊಂಡಿದ್ದ ಜಿಲ್ಲಾಡಳಿತ ಇದೀಗ ಅವರ ಕುಟುಂಬದವರಿಗೂ ಆದ್ಯತೆ ಮೇರೆಗೆ ಲಸಿಕೆ ನೀಡಲು ಮುಂದಾಗಿದೆ. ಇದರಿಂದಾಗಿ ಕೊರೊನಾ ಸೈನಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಸೋಮವಾರ ಜಿಲ್ಲೆಯಲ್ಲಿನ ಪೊಲೀಸ್‌ ಕುಟುಂಬದವರಿಗೆ ಕೋವಿಡ್‌ ವ್ಯಾಕ್ಸಿನ್‌ ಕಾರ್ಯಕ್ರಮ ನಡೆಯಲಿದ್ದು, ಮುಂದಿನ ದಿನಗಳಲ್ಲಿ ಇತರೆ ವಲಯದ ಸೇನಾನಿಗಳ ಕುಟುಂಬಕ್ಕೂ ಲಸಿಕೆ ಲಭ್ಯವಾಗಲಿದೆ.

ರೈತರನ್ನೂ ಪರಿಗಣಿಸಿ: ‘ಸದ್ಯ ಜಿಲ್ಲಾಡಳಿತವು ಆದ್ಯತೆ ಮೇರೆಗೆ ಮಾತ್ರ ಸಾರ್ವಜನಿಕರಿಗೆ ಲಸಿಕೆ ನೀಡುತ್ತಿದೆ. ಕೈಗಾರಿಕಾ ಕಾರ್ಮಿಕರಿಗೆ ಸಿಗುವ ಆದ್ಯತೆ ದೇಶದ ಬೆನ್ನೆಲುಬಾದ ರೈತರಿಗೆ ಸಿಗದೇ ಇರುವುದು ದುರಂತ. ಸರ್ಕಾರ ರೈತರನ್ನೂ ಆದ್ಯತಾ ವಲಯ ಎಂದು ಘೋಷಿಸಿ ಕೃಷಿಕರು ಮತ್ತವರ ಕುಟುಂಬಗಳಿಗೆ ಮೊದಲ ಆದ್ಯತೆಯಲ್ಲಿ ಲಸಿಕೆ ನೀಡಬೇಕು. ಲಸಿಕಾ ಕೇಂದ್ರಗಳನ್ನು ಇನ್ನಷ್ಟು ವಿಸ್ತರಿಸಿ ಗ್ರಾಮೀಣ ಜನರ ಮನೆಬಾಗಿಲಿಗೆ ಲಸಿಕೆ ತಲುಪಿಸಬೇಕು’ ಎಂದು ಆಗ್ರಹಿಸುತ್ತಾರೆ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಎಂ. ರಾಮು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.