ರಾಮನಗರ: ‘ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಾಮಮಾರ್ಗದಲ್ಲಿ ಚನ್ನಪಟ್ಟಣ ಉಪ ಚುನಾವಣೆ ಗೆಲ್ಲಲು ಮುಂದಾಗಿದ್ದಾರೆ. ಅವರ ಮೊದಲ ಭೇಟಿಯಲ್ಲೇ ಚುನಾವಣಾ ಅಕ್ರಮ ಎಸಗುವ ಲಕ್ಷಣ ಗೋಚರಿಸುತ್ತಿವೆ’ ಎಂದು ವಿಧಾನ ಪರಿಷತ್ ಸದಸ್ಯ, ಬಿಜೆಪಿಯ ಸಿ.ಪಿ. ಯೊಗೇಶ್ವರ್ ಆರೋಪಿಸಿದ್ದಾರೆ.
‘ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧಿಕಾರಿಗಳ ರಹಸ್ಯ ಸಭೆ ನಡೆಸಿರುವ ಶಿವಕುಮಾರ್ ಒಂದೇ ಕೋಮಿಗೆ ಸೇರಿದ ಎಂಟು ಸಾವಿರ ಜನರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಬೇಕು ಎಂದು ಸೂಚನೆ ಕೊಟ್ಟಿದ್ದಾರೆ. ಈ ವಿಷಯ ಹೊರಗೆ ಗೊತ್ತಾಗಬಾರದೆಂದು ತಾಕೀತು ಮಾಡಿದ್ದರು. ಸಭೆಗೆ ಹಾಜರಾಗಿದ್ದ ಅಧಿಕಾರಿಗಳ ಮೊಬೈಲ್ ನಿರ್ಬಂಧಿಸಲಾಗಿತ್ತು. ಮಾಧ್ಯಮದವರಿಗೂ ಪ್ರವೇಶ ನಿರಾಕರಿಸಿದ್ದರು’ ಎಂದು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
‘ಡಿ.ಕೆ.ಶಿವಕುಮಾರ್ ಸ್ಪರ್ಧೆಯನ್ನು ಸ್ವಾಗತಿಸುವೆ. ಆದರೆ, ಸ್ಪರ್ಧೆ ಆರೋಗ್ಯಕರವಾಗಿರಬೇಕು. ಡಿಸಿಎಂ ಕ್ಷೇತ್ರ ಭೇಟಿ ಮತ್ತು ನಡವಳಿಕೆ ಗಮನಿಸಿದರೆ ಚುನಾವಣೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುವ ಬಗ್ಗೆ ಅನುಮಾನವಿದೆ. ಹಾಗಾಗಿ, ಚುನಾವಣಾ ಅಕ್ರಮಕ್ಕೆ ಅವಕಾಶವಿಲ್ಲದಂತೆ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಮೈತ್ರಿ ನಾಯಕರು ಚುನಾವಣಾ ಆಯೋಗಕ್ಕೆ ಸದ್ಯದಲ್ಲೇ ಮನವಿ ಸಲ್ಲಿಸುತ್ತೇವೆ’ ಎಂದರು.
ಕೊನೆ ಅಧ್ಯಾಯ: ‘ಚನ್ನಪಟ್ಟಣದಲ್ಲಿ ಗೆದ್ದು ಮುಖ್ಯಮಂತ್ರಿಯಾಗುವ ಕನಸು ಕಂಡಿರುವ ಶಿವಕುಮಾರ್, ಇಲ್ಲಿಂದ ರಾಜಕೀಯದ ಹೊಸ ಅಧ್ಯಾಯ ಶುರುವಾಗಲಿದೆ ಎಂದು ಹೇಳಿದ್ದಾರೆ. ಆದರೆ, ಕ್ಷೇತ್ರವು ಮೈತ್ರಿ ಪಕ್ಷಗಳ ನೆಲೆಯಾಗಿರುವುದರಿಂದ ಇದೇ ಚುನಾವಣೆ ಶಿವಕುಮಾರ್ ರಾಜಕೀಯ ಜೀವನದ ಕೊನೆಯ ಅಧ್ಯಾಯವಾಗಲಿದೆ. ಮುಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಂಬ ಅವರ ಬೆಂಬಲಿಗರ ಘೋಷಣೆಗಳೇ ಅವರಿಗೆ ಮುಳುವಾಗಲಿವೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
‘ಚನ್ನಪಟ್ಟಣವನ್ನು ಯಾವುದೇ ಕಾರಣಕ್ಕೂ ಕನಕಪುರಕ್ಕೆ ಹೋಲಿಸಬಾರದು. ಕನಕಪುರ ಕೊಲೆ, ಬೆದರಿಕೆ, ದರ್ಪ, ದೌರ್ಜನ್ಯಕ್ಕೆ ಮಾದರಿಯಾದುದೇ ಹೊರತು, ಬೊಂಬೆನಾಡಿನಂತೆ ಆರ್ಥಿಕ ಸಮೃದ್ಧಿ, ತಲಾ ಆದಾಯ ವೃದ್ಧಿ, ನೀರಾವರಿ ಕ್ರಾಂತಿಯಂತಹ ಅಭಿವೃದ್ಧಿಗೆ ಹೆಸರಾಗಿಲ್ಲ. ತಮ್ಮ ವಿರೋಧಿಗಳನ್ನು ಬಗ್ಗು ಬಡಿದು ಸಹೋದರರು ಸ್ಥಾಪಿಸಿರುವ ಕನಕಪುರ ರಿಪಬ್ಲಿಕ್ ಮಾದರಿಯನ್ನು ಇಲ್ಲಿಗೆ ಬರಲು ಬಿಡುವುದಿಲ್ಲ’ ಎಂದರು.
ರಾಜಕೀಯ ಗಿಮಿಕ್: ‘ಜನ ಕೊಟ್ಟಿರುವ ಅಧಿಕಾರ ಶಕ್ತಿಯಿಂದ ಚನ್ನಪಟ್ಟಣ ಅಭಿವೃದ್ಧಿಗೆ ಹೊಸ ಮುನ್ನುಡಿ ಬರೆಯುವೆ ಎನ್ನುವ ಶಿವಕುಮಾರ್, ಹಿಂದೆ ಚನ್ನಪಟ್ಟಣ ಭಾಗವನ್ನು ಪ್ರತಿನಿಧಿಸಿದ್ದರೂ ಯಾಕೆ ಅಭಿವೃದ್ಧಿ ಮಾಡಿಲ್ಲ. ಇಷ್ಟು ವರ್ಷ ತಿರುಗಿ ನೋಡದವರು ಉಪ ಚುನಾವಣೆ ಸಲುವಾಗಿ ಜನರ ಮುಂದೆ ಹೊಸ ರಾಜಕೀಯ ನಾಟಕವಾಡಲು ಬಂದಿದ್ದಾರೆ. ಅವರ ಗಿಮಿಕ್‌ಗೆ ಇಲ್ಲಿನ ಜನ ಮರುಳಾಗುವುದಿಲ್ಲ’ ಎಂದು ವ್ಯಂಗ್ಯವಾಡಿದರು.
‘ಲೋಕಸಭಾ ಚುನಾವಣೆಯಲ್ಲಿ ಸೋತಿರುವ ಡಿ.ಕೆ. ಸುರೇಶ್ ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆಂಬ ಮಾತು ಕೇಳಿ ಬರುತ್ತಿದ್ದವು. ಈಗ ಅವರ ಅಣ್ಣ ಸ್ಪರ್ಧಿಸಲು ಮುಂದಾಗಿರುವುದನ್ನು ನೋಡಿದರೆ ಸುರೇಶ್ ಅಸಮರ್ಥ ಎಂದು ಅವರೇ ಒಪ್ಪಿಕೊಂಡಂತಲ್ಲವೆ?’ ಎಂದು ಪ್ರಶ್ನಿಸಿದರು.
‘ಬೆಂಗಳೂರು ಗ್ರಾಮಾಂತ ಕ್ಷೇತ್ರದಲ್ಲಿ ಸೋಲಿನೊಂದಿಗೆ ತಮ್ಮನ ದೌರ್ಜನ್ಯ ನಿಂತಿತು ಎಂದುಕೊಂಡಿದ್ದೆವು. ಆದರೆ, ಇದೀಗ ಅಣ್ಣನ ದೌರ್ಜನ್ಯ ಶುರುವಾಗುವ ಲಕ್ಷಣ ಕಾಣುತ್ತಿವೆ ಎಂದು ಅಧಿಕಾರಿಗಳು ನನ್ನ ಬಳಿ ಅಳಲು ತೋಡಿಕೊಳ್ಳುತ್ತಿದ್ದಾರೆ. ಶಿವಕುಮಾರ್ ದೌರ್ಜನ್ಯಕ್ಕೆ ನಾನು ಮತ್ತು ಕುಮಾರಸ್ವಾಮಿ ಅವಕಾಶ ಕೊಡುವುದಿಲ್ಲ. ಕ್ಷೇತ್ರ ನಮ್ಮ ಪರವಾಗಿದ್ದು, ಗ್ರಾಮಾಂತರದ ಫಲಿತಾಂಶ ಇಲ್ಲೂ ಪುನರಾವರ್ತನೆಯಾಗಲಿದೆ’ ಎಂದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆನಂದಸ್ವಾಮಿ, ನಗರ ಅಧ್ಯಕ್ಷ ಶಿವಕುಮಾರ್ ಆರ್., ವಿ.ಬಿ. ಚಂದ್ರು, ಜಯಕುಮಾರ್ ಹಾಗೂ ಇತರರು ಇದ್ದರು.
ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಲು ಅವರ ಪಕ್ಷದೊಳಗಿನ ಶಾಸಕರ ವಿಶ್ವಾಸ ಪಡೆದರೆ ಸಾಕು. ಅದಕ್ಕಾಗಿ ಚನ್ನಪಟ್ಟಣದಲ್ಲಿ ಸ್ಪರ್ಧಿಸಿ ಗೆಲ್ಲುತ್ತೇನೆ ಎಂದುಕೊಂಡಿದ್ದರೆ ಈ ಚುನಾವಣೆಯು ಅವರ ರಾಜಕೀಯದ ಕೊನೆಯ ಅಧ್ಯಾಯವಾಗಲಿದೆ– ಸಿ.ಪಿ. ಯೋಗೇಶ್ವರ್ ವಿಧಾನ ಪರಿಷತ್ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.