ADVERTISEMENT

ಹುಚ್ಚಮ್ಮನದೊಡ್ಡಿ: ಜಿಲ್ಲಾಧಿಕಾರಿ ಕಾರ್ಯಕ್ರಮ: ‘300 ಮಂದಿಗೆ ಸಾಗುವಳಿ ಚೀಟಿ’

​ಪ್ರಜಾವಾಣಿ ವಾರ್ತೆ
Published 22 ಜನವರಿ 2023, 4:58 IST
Last Updated 22 ಜನವರಿ 2023, 4:58 IST
ಕಾರ್ಯಕ್ರಮದಲ್ಲಿ ರೈತರಿಗೆ ಸಾಗುವಳಿ ಚೀಟಿ ವಿತರಿಸಲಾಯಿತು. ಶಾಸಕರಾದ ಅನಿತಾ ಕುಮಾರಸ್ವಾಮಿ, ಎ.ಮಂಜುನಾಥ, ತಹಶೀಲ್ದಾರ್ ವಿಜಯಕುಮಾರ್‌ ಇದ್ದರು
ಕಾರ್ಯಕ್ರಮದಲ್ಲಿ ರೈತರಿಗೆ ಸಾಗುವಳಿ ಚೀಟಿ ವಿತರಿಸಲಾಯಿತು. ಶಾಸಕರಾದ ಅನಿತಾ ಕುಮಾರಸ್ವಾಮಿ, ಎ.ಮಂಜುನಾಥ, ತಹಶೀಲ್ದಾರ್ ವಿಜಯಕುಮಾರ್‌ ಇದ್ದರು   

ರಾಮನಗರ: ಜಿಲ್ಲೆಯಲ್ಲಿ ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ಹಾಗೂ ಹಕ್ಕು ಪತ್ರ ನೀಡಲು ಕ್ರಮ ವಹಿಸಲಾಗಿದೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿಯೇ 94 ಸಿ ಅಡಿಯಲ್ಲಿ ಅರ್ಜಿ ಹಾಕಿದ 300ಕ್ಕೂ ಹೆಚ್ಚು ಜನರಿಗೆ ಹಕ್ಕು ಪತ್ರ ಕೊಡಿಸಲಾಗಿದೆ ಎಂದು ಮಾಗಡಿ ಶಾಸಕ ಎ. ಮಂಜುನಾಥ ಹೇಳಿದರು.

ತಾಲ್ಲೂಕಿನ ಕೈಲಾಂಚ ಹೋಬಳಿ ಹುಚ್ಚಮ್ಮನದೊಡ್ಡಿ ಗ್ರಾಮದಲ್ಲಿ ಶನಿವಾರ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಮಾಗಡಿ ವಿಧಾನಸಭಾ ಕ್ಷೇತ್ರದ ಬಿಡದಿ ಹೋಬಳಿ ಗೋಪಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಲ್ಲೆದೊಡ್ಡಿ, ಎಂ. ಗೋಪಳ್ಳಿ, ಮಾರುತಿಪುರ (ವಡ್ಡರದೊಡ್ಡಿ) ಗ್ರಾಮದ 55 ಫಲಾನುಭವಿಗಳಿಗೆ ಸಾಗುವಳಿ ಚೀಟಿ ವಿತರಿಸಿ ಮಾತನಾಡಿದರು.

1991ರಿಂದಲೂ ಅರ್ಜಿ ಹಾಕಿದವರಿಗೆ ಸಾಗುವಳಿ ಚೀಟಿ ನೀಡಿರಲಿಲ್ಲ. ಸಾಗುವಳಿದಾರರಿಗೆ ಹಕ್ಕು ಕೊಡಿಸಲು ಇದ್ದ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿದ್ದೇವೆ. ಬಿಲ್ಲೆದೊಡ್ಡಿ, ಎಂ. ಗೋಪಳ್ಳಿ, ಮಾರುತಿಪುರ ಹಾಗೂ ರಾಮನಹಳ್ಳಿ ಭಾಗದವರಿಗೆ ಸಾಗುವಳಿ ಚೀಟಿ ನೀಡಲಾಗುತ್ತಿದ್ದು, ಉಳಿದವರಿಗೆ ಶೀಘ್ರದಲ್ಲಿಯೇ ವಿತರಿಸಲು ಕ್ರಮ ವಹಿಸಲಾಗುವುದು. ಭೂಮಿ ಉಳುಮೆ ಮಾಡುತ್ತಿರುವ ಅರ್ಹ ರೈತರಿಗೆ ಅನ್ಯಾಯವಾಗಲು ನಾವು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ADVERTISEMENT

ಸರ್ಕಾರಿ ಭೂಮಿಯನ್ನು ನಂಬಿ ಅನೇಕರು ಜೀವನ ಕಟ್ಟಿಕೊಂಡಿದ್ದಾರೆ. ಕೋಟ್ಯಂತರ ರುಪಾಯಿ ಬೆಲೆ ಬಾಳುವ ಆ ಭೂಮಿಗೆ ಮಧ್ಯವರ್ತಿಗಳ ಹಾವಳಿ ಇಲ್ಲದೆ ಪಾರದರ್ಶಕವಾಗಿ ಸಾಗುವಳಿ ಚೀಟಿ ಹಾಗೂ ಹಕ್ಕು ಪತ್ರ ನೀಡಲಾಗುತ್ತಿದೆ ಎಂದರು.

ಶಾಸಕಿ ಅನಿತಾ ಕುಮಾರಸ್ವಾಮಿ ಮಾತನಾಡಿ, ನಾನು ಶಾಸಕಿಯಾದ ಮೇಲೆ ಈ ಭಾಗದಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳು ಆಗಿವೆ. ಜನರ ಭಾವನೆಗಳಿಗೆ ಧಕ್ಕೆ ಆಗದಂತೆ ಪ್ರಾಮಾಣಿಕವಾಗಿ ಕೆಲಸ ಮಾಡಿದ ತೃಪ್ತಿ ನನಗಿದೆ ಎಂದು ಹೇಳಿದರು.

ತಹಶೀಲ್ದಾರ್ ವಿಜಯ್‌ ಕುಮಾರ್ ಮಾತನಾಡಿದರು. ಉಪ ತಹಶೀಲ್ದಾರ್‌ಗಳಾದ ರುದ್ರಮ್ಮ, ಭಾಸ್ಕರ್, ರಾಜಸ್ವ ನಿರೀಕ್ಷಕರಾದ ಪುಟ್ಟರಾಜು, ರಾಜಶೇಖರ್, ಗ್ರಾ.ಪಂ ಅಧ್ಯಕ್ಷ ರಾಮಚಂದ್ರಯ್ಯ, ಸದಸ್ಯರಾದ ನವೀನ್ ಕುಮಾರ್, ಅನಸೂಯ, ನಾಗರಾಜು, ಸೋಮು, ಕವಿತಾ, ವಿನೋಬಾ, ಲಕ್ಷ್ಮಿಶ್ರೀನಿವಾಸ್, ಪಿಡಿಒ ಲೋಕೇಶ್, ಕಾರ್ಯದರ್ಶಿ ಚಂದ್ರಶೇಖರ್, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.

ಹೋರಾಟ ಮಾಡಿ ಅನುದಾನ ತಂದೆ

‘ನಾನು ಮಾಜಿ ಮುಖ್ಯಮಂತ್ರಿ ಪತ್ನಿ ಎಂದು ಯಾರೂ ಕ್ಷೇತ್ರಕ್ಕೆ ಅನುದಾನ ನೀಡಲಿಲ್ಲ. ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಸಿಯೇ ಅನುದಾನ ತಂದಿದ್ದೇನೆ’ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು.

‘ಹುಚ್ಚಮ್ಮನದೊಡ್ಡಿಯಲ್ಲಿ ಏತ ನೀರಾವರಿ ಯೋಜನೆ, ಶುದ್ಧ ಕುಡಿಯುವ ನೀರಿನ ಘಟಕ, ಸಮುದಾಯ ಭವನ ನಿರ್ಮಾಣಕ್ಕೆ ಹೆಚ್ಚಿನ ಶ್ರಮ ವಹಿಸಿದೆ. ಒಬ್ಬ ಮಹಿಳೆ ಇಷ್ಟೆಲ್ಲ ಕೆಲಸ ಮಾಡಿದ್ದಾಳಲ್ಲ ಎಂದು ನೀವು ನನ್ನ ಬೆನ್ನು ತಟ್ಟಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.