ADVERTISEMENT

ಮನುಷ್ಯತ್ವಕ್ಕೆ ಜೀವ ತುಂಬುವ ಸಾಂಸ್ಕೃತಿಕತೆ: ಲೇಖಕ ಮಳವಳ್ಳಿ ವಿ. ಕೃಷ್ಣ

ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮದಲ್ಲಿ ಲೇಖಕ ಮಳವಳ್ಳಿ ಕೃಷ್ಣ ಅಭಿಮತ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 2:35 IST
Last Updated 19 ನವೆಂಬರ್ 2025, 2:35 IST
<div class="paragraphs"><p>ಬಿಡದಿಯ ಶ್ರೀ ಬಸವೇಶ್ವಸ್ವಾಮಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನ ವಿತರಿಸಿದರು.&nbsp;</p></div>

ಬಿಡದಿಯ ಶ್ರೀ ಬಸವೇಶ್ವಸ್ವಾಮಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನ ವಿತರಿಸಿದರು. 

   

ಬಿಡದಿ: ‘ಸಾಂಸ್ಕೃತಿಕತೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಮ್ಮನ್ನು ಮನುಷ್ಯರನ್ನಾಗಿ ರೂಪಿಸುತ್ತವೆ. ಸಮಾಜದ ಆಗುಹೋಗುಗಳಿಗೆ ಸ್ಪಂದಿಸದಿದ್ದರೆ ನಾವು ಮನುಷ್ಯರಾಗುವುದಿಲ್ಲ. ಬದಲಿಗೆ, ಮೃಗ ಸ್ವರೂಪಿಗಳಾಗುತ್ತೇವೆ. ಮನುಷ್ಯ ಮನುಷ್ಯರಲ್ಲಿ ಸಮಾನತೆ ತರುವುದೇ ಸಾಂಸ್ಕತಿಕ ಐಕ್ಯತೆಯ ಸಾಧನೆಯಾಗಿದೆ’ ಎಂದು‌ ಲೇಖಕ ಮಳವಳ್ಳಿ ವಿ. ಕೃಷ್ಣ ಅಭಿಪ್ರಾಯಪಟ್ಟರು.

ಪಟ್ಟಣದ ಶ್ರೀ ಬಸವೇಶ್ವಸ್ವಾಮಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ‘ಜಾತಿ ಕಾರಣಕ್ಕೆ ಮಾಡುವ ತಾರತಮ್ಯತೆ, ಹೆಣ್ಣು–ಗಂಡಿನ ಅಸಮಾನತೆ, ಆರ್ಥಿಕ ಏರುಪೇರು, ಹೆಣ್ಣು ಭ್ರೂಣ ಹತ್ಯೆ ಇವೆಲ್ಲಾ ಸಾಂಸ್ಕೃತಿಕ ವ್ಯಪರೀತ್ಯದ ದ್ಯೋತಕಗಳಾಗಿವೆ’ ಎಂದರು.

ADVERTISEMENT

‘ಸರ್ಕಾರಿ ಶಾಲಾ– ಕಾಲೇಜುಗಳು ಮಕ್ಕಳ ದಾಖಲಾತಿ ಇಲ್ಲದೆ ಸೊರಗುತ್ತಿವೆ. ಆದರೆ, ಕೆತ್ತಿದ ಕಲ್ಲುಗಳ ವೈಭವಯುತ ದೇವಸ್ಥಾನಗಳು ನಿರ್ಮಾಣಗೊಳ್ಳುತ್ತಿವೆ. ಜ್ಞಾನದ ಕೇಂದ್ರಗಳು ಬಾಗಿಲು ಮುಚ್ಚುವ, ಅಜ್ಞಾನದ ಕೇಂದ್ರಗಳು ಬಾಗಿಲು ತೆರೆಯುತ್ತಿರುವುದು ಅಸಾಂಸ್ಕೃತಿಕ ಬೆಳವಣಿಗೆ. ಇದು ಶರಣಾಗತಿ, ಮೌಢ್ಯತೆಯನ್ನು ಬೆಳೆಸುತ್ತದೆ. ನಮಗೆ ಬೇಕಾದ್ದು ಸ್ವಾಭಿಮಾನಿ ಮತ್ತು ಸ್ವಾವಲಂಬಿ ಸಂಸ್ಕೃತಿ’ ಎಂದು ಹೇಳಿದರು.

‘ಮಾತೃ ಸ್ವರೂಪಿಯಾದ ಭೂಮಿಯನ್ನು ಪ್ಲಾಸ್ಟಿಕ್ ಕಸದ ತೊಟ್ಟಿಯಾಗಿಸುತ್ತಿದ್ದೇವೆ. ರಸ್ತೆಗಳ ಇಕ್ಕೆಲಗಳಲ್ಲಿ, ಕೃಷಿ ಭೂಮಿಯಲ್ಲಿ ಕಸ ಸುರಿದು ಭೂಮಿ ಮತ್ತು ಜೀವ ವೈವಿಧ್ಯತೆಗೆ ಕಂಟಕವಾಗುತ್ತಿದ್ದೇವೆ. ಉಸಿರಾಡುವ ಗಾಳಿ, ಕುಡಿಯುವ ನೀರು ವಿಷವಾಗುತ್ತಿದೆ. ಪ್ರಕೃತಿಯನ್ನು ಸಹಜಶೀಲವಾಗಿ ಉಳಿಸಿ, ಮುಂದಿನ ತಲೆಮಾರಿಗೆ ಬಿಟ್ಟು ಹೋಗುವ ಹೊಣೆಗಾರಿಕೆ ಮೆರೆಯಬೇಕಿದೆ’ ಎಂದು ತಿಳಿಸಿದರು.

‘ನಮ್ಮ ಸುತ್ತಲೂ ದಾರಿದ್ರ್ಯ, ಬಡತನ, ಆರ್ಥಿಕ ಅಸಮಾನತೆಗಳಿದ್ದರೂ ನಾನೊಬ್ಬ ಮಾತ್ರ ಶ್ರೀಮಂತಿಕೆಯ ಸುಪ್ಪತ್ತಿಗೆಯಲ್ಲಿ ಬದುಕುವುದು ಸಂಸ್ಕೃತಿ ಹೀನತೆ. ನನ್ನೊಟ್ಟಿಗೆ ಇರುವವರೆಲ್ಲರಿಗೂ ನನಗೆ ದಕ್ಕಿದ ಎಲ್ಲಾ ಸೌಕರ್ಯಗಳು ಲಭ್ಯವಾಗುವಂತೆ ಮಾಡಲು ಸಹಕಾರ ನೀಡುವುದೇ ಸಂಸ್ಕೃತಿ ಮತ್ತು ಸಂಪನ್ನತೆ’ ಎಂದು ಅಭಿಪ್ರಾಯಪಟ್ಟರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಎಂ. ಮರಿಸ್ವಾಮಿ ಮಾತನಾಡಿ, ‘ದೇಹ ಮತ್ತು ಮನಸ್ಸು ಆರೋಗ್ಯವಾಗಿರಬೇಕಾದರೆ ವಿದ್ಯಾರ್ಥಿಗಳು ಸಾಂಸ್ಕೃತಿಕ ಚಟುವಟಿಕೆಗಳನ್ನು ಕಲಿತು, ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು. ದೇಹಕ್ಕೆ ಅನಾರೋಗ್ಯವಾದರೆ ವೈದ್ಯರ ಸಲಹೆ ಮತ್ತು ಚಿಕಿತ್ಸೆ ಅಗತ್ಯ. ಮನಸ್ಸಿಗೆ ತೊಂದರೆಯಾದಾಗ ಹಾಡುವ, ಕುಣಿಯುವ, ಓದುವ, ಬರೆಯುವ ಕ್ರಿಯೆಗಳ ಮೂಲಕ ಪರಿಹಾರ ಕಂಡುಕೊಳ್ಳಬೇಕು’ ಎಂದು ಸಲಹ ನೀಡಿದರು.

‘ನಮ್ಮ ಪೂರ್ವಜರು ಹೊಲ ಉಳುವಾಗ, ನಾಟಿ ಮಾಡುವಾಗ, ಕಳೆ ಕೀಳುವಾಗ, ಭತ್ತ ಬಡಿಯುವಾಗ, ರಾಗಿ ಕಣದಲ್ಲಿ ಪದ ಹಾಡುತ್ತಿದ್ದರು. ನೆಲಮೂಲದ ಈ ಪದಗಳು ಇಂದು ಆಧುನಿಕತೆಯ ಅಬ್ಬರದಲ್ಲಿ ನಶಿಸಿವೆ. ಯುವಜನರು ಜನಪದ ಗೀತೆ, ಭಾವಗೀತೆ, ಏಕ ಪಾತ್ರಾಭಿನಯ, ಜಾನಪದ ನೃತ್ಯ ಇತ್ಯಾದಿ ಸಾಂಸ್ಕೃತಿಕ ಕಲೆಗಳನ್ನು ಕಲಿತು, ಪ್ರದರ್ಶಿಸಿ ಆನಂದ ಅನುಭವಿಸಿ ಸಾಮಾಜಿಕ ಆರೋಗ್ಯ ಕಾಪಾಡಬೇಕು’ ಎಂದರು.

ಜ್ಞಾನ ವಿಕಾಸ್ ವಿದ್ಯಾ ಸಂಘದ ಖಜಾಂಚಿ ಬಿ.ಎನ್. ಗಂಗಾಧರಯ್ಯ, ನಿರ್ದೇಶಕ ಎಲ್. ಸತೀಶ್ ಚಂದ್ರ, ಬಿ.ಆರ್. ನಾಗರಾಜು, ಪದವಿ ಪೂರ್ವ ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ಕೊತ್ತಿಪುರ ಜಿ. ಶಿವಣ್ಣ, ಪ್ರಧಾನ ಕಾರ್ಯದರ್ಶಿ ದೊಡ್ಡಬೋರಯ್ಯ, ಖಜಾಂಚಿ ಬಿ. ಮಹೇಶ್, ಸಾಹಿತಿ ಬೆಳ್ಳೂರು ವೆಂಕಟಪ್ಪ, ಉಪನ್ಯಾಸಕರ ಸಂಘದ ಅಧ್ಯಕ್ಷ ಎನ್. ವೇಣುಗೋಪಾಲ್, ಸಾಂಸ್ಕೃತಿಕ ಸಂಚಾಲಕ ಜೆ.ವಿ. ಚನ್ನವೀರಯ್ಯ, ಎಂ.ಎನ್. ಪ್ರದೀಪ್, ಶರತ್, ಎಂ.ಸಿ. ಗೋವಿಂದರಾಜು, ಪ್ರಾಂಶುಪಾಲ ಸರವಣನ್ ಜಿ., ಉಪನ್ಯಾಸಕ ಚಿಕ್ಕಪುಟ್ಟಯ್ಯ, ಪ್ರಾಂಶುಪಾಲರಾದ ಮೋಹನ್, ಶ್ರೀನಿವಾಸ್, ಉಪನ್ಯಾಸಕ ಸುನಿಲ್ ಕುಮಾರ್ ಹಾಗೂ ಇತರರು ಇದ್ದರು.

ಒಂದೇ ಕಡೆ ವಾಸವಿದ್ದರೂ ಕೆಳವರ್ಗದವರು ಮೇಲ್ವರ್ಗದವರೆಂದು ತಾರತಮ್ಯ ಮಾಡುತ್ತಾರೆ. ಕಾವೇರಿ ನೀರು ನಲ್ಲಿಗಳಲ್ಲಿ ಎಲ್ಲರ ಮನೆಗಳಿಗೆ ಹರಿಯುತ್ತದೆ. ಆದರೆ ಕೆಳವರ್ಗದ ಮನೆಯಲ್ಲಿ ನೀರು ಕೇಳಿ ಕುಡಿಯಲು ಹಿಂಜರಿಯುತ್ತಾರೆ. ಇದು ಸಾಂಸ್ಕತಿಕ ದಿವಾಳಿತನ
ಮಳವಳ್ಳಿ ವಿ. ಕೃಷ್ಣ ಲೇಖಕ

‘ಸದುದ್ದೇಶದ ಜ್ಞಾನಕ್ಕಿಲ್ಲ ಕೊನೆ’

‘ಸದುದ್ದೇಶಕ್ಕಾಗಿ ಬಳಸುವ ಜ್ಞಾನಕ್ಕೆ ಅಂತ್ಯವಿಲ್ಲ. ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಉದ್ದೇಶದ ಜ್ಞಾನವು ಪರೀಕ್ಷೆ ಬರೆದ ಕೆಲವೇ ತಿಂಗಗಳಲ್ಲಿ ಮರೆತು ಹೋಗುತ್ತದೆ. ದೀರ್ಘಕಾಲಿಕ ಜ್ಞಾನ ಸಂಪಾದನೆ ಮತ್ತು ಸದ್ಬಳಕೆಯ ಸದುದ್ದೇಶವಿದ್ದರೆ ಅದು ಜೀವನಪೂರ್ತಿ ಉಪಯೋಗಕ್ಕೆ ಬರುತ್ತದೆ. ಹಾಗೆಯೇ ಬಹುಮಾನ ಗಳಿಸುವುದಕ್ಕೆ ಮಾತ್ರ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸದೆ ಬದುಕಿನ ಕೊನೆ ಘಟ್ಟದವರೆಗೂ ಸಾಂಸ್ಕೃತಿಕ ಕಲಾ ಸಂಪತ್ತನ್ನು ಜೊತೆಯಲ್ಲಿ ಉಳಿಸಿಕೊಳ್ಳಬೇಕು. ಆಗ ಮನೋಲ್ಲಾಸ ನಮ್ಮ ಜತೆ ಸದಾ ಜೀವಂತವಾಗಿರುತ್ತದೆ. ಸಾಹಿತ್ಯಾಧ್ಯಯನ ಕ್ರೀಡೆಗಳಲ್ಲಿ ಭಾಗವಹಿಸುವುದು ಹಾಗೂ ಸಾಂಸ್ಕೃತಿಕ ಕಲೆಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ವೃದ್ಧಿಯಾಗುತ್ತದೆ’ ಎಂದು ಮಾಜಿ ಶಾಸಕ ಹಾಗೂ ಜ್ಞಾನ ವಿಕಾಸ್ ವಿದ್ಯಾ ಸಂಘದ ಅಧ್ಯಕ್ಷ ಸಿ.ಎಂ. ಲಿಂಗಪ್ಪ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.